Karnataka High Court 
ಸುದ್ದಿಗಳು

ಚಿತ್ರದುರ್ಗ ಜಿಲ್ಲಾ ನ್ಯಾಯಾಧೀಶರ ವರ್ಗಾವಣೆಗೆ ಆಕ್ಷೇಪ: ಎಸ್‌ಜೆಎಂ ವಿದ್ಯಾಪೀಠದ ಮಾಜಿ ಸಿಇಒಗೆ ಹೈಕೋರ್ಟ್‌ ಸಮನ್ಸ್‌

ಆರೋಪಿ ಭರತ್‌ ಕುಮಾರ್‌ಗೆ ವ್ಯಾಪ್ತಿ ಹೊಂದಿರುವ ಪೊಲೀಸರು ಮೂರು ವಾರಗಳ ಅವಧಿಯಲ್ಲಿ ಸಮನ್ಸ್‌ ಜಾರಿಗೊಳಿಸಬೇಕು ಎಂದು ಆದೇಶಿಸಿರುವ ಪೀಠವು ವಿಚಾರಣೆಯನ್ನು ಫೆಬ್ರುವರಿ 5ಕ್ಕೆ ಮುಂದೂಡಿದೆ. 

Bar & Bench

ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಆರೋಪದಡಿ ಚಿತ್ರದುರ್ಗ ಮುರುಘಾ ಮಠದ ಎಸ್‌ಜೆಎಂ ವಿದ್ಯಾಪೀಠದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೂ ಆದ ಉದ್ಯಮಿ ಎಂ ಭರತ್‌ ಕುಮಾರ್ ಅವರಿಗೆ ಸಮನ್ಸ್‌ ಜಾರಿಗೊಳಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ.

ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ಅವರು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಆರೋಪಿ ಭರತ್‌ ಕುಮಾರ್‌ಗೆ ವ್ಯಾಪ್ತಿ ಹೊಂದಿರುವ ಪೊಲೀಸರು ಮೂರು ವಾರಗಳ ಅವಧಿಯಲ್ಲಿ ಸಮನ್ಸ್‌ ಜಾರಿಗೊಳಿಸಬೇಕು ಎಂದು ಆದೇಶಿಸಿರುವ ಪೀಠವು ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ. 

ಪ್ರಕರಣದ ಹಿನ್ನೆಲೆ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ–2012ರ (ಪೋಕ್ಸೊ) ವಿವಿಧ ಸೆಕ್ಷನ್‌ಗಳ ಆರೋಪದಡಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರು ಜೈಲು ಸೇರಿದ ನಂತರ ರಾಜ್ಯ ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ಪಿ ಎಸ್ ವಸ್ತ್ರದ ಅವರನ್ನು 2022ರ ಡಿಸೆಂಬರ್ 13ರಂದು ಮಠಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿತ್ತು. ಇದಕ್ಕೂ ಮುನ್ನ 2022ರ ಡಿಸೆಂಬರ್ 2ರಂದು ಎಸ್‌ಜೆಎಂ ವಿದ್ಯಾಪೀಠದ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಂ ಭರತ್‌ ಕುಮಾರ್ ಅವರನ್ನು ಶರಣರು ನೇಮಕ ಮಾಡಿದ್ದರು.

ಸರ್ಕಾರದ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮಠದ ತಾತ್ಕಾಲಿಕ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಮತ್ತು ಭಕ್ತರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ವಸ್ತ್ರದ ಅವರು ಆರು ತಿಂಗಳ ಅವಧಿ ನಂತರ ಹುದ್ದೆಯಿಂದ ತೆರವಾಗಿದ್ದರು. ಈ ಕುರಿತ ಮೇಲ್ಮನವಿಯ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠವು ಮಠಕ್ಕೆ ತಾತ್ಕಾಲಿಕ ಆಡಳಿತಾಧಿಕಾರಿಯನ್ನಾಗಿ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರನ್ನು ನೇಮಕ ಮಾಡಿ ಆದೇಶಿಸಿತ್ತು. 

ಕಾನೂನು ಹೋರಾಟದ ವಿವಿಧ ಬೆಳವಣಿಗೆಗಳ ಸಮಯದಲ್ಲೇ ಚಿತ್ರದುರ್ಗ ಜಿಲ್ಲಾ ಪ್ರಧಾನ ನ್ಯಾಯಾಧೀಶರಾಗಿದ್ದ ಬಿ ಎಸ್‌ ರೇಖಾ ಅವರನ್ನು ಹೈಕೋರ್ಟ್‌ ವರ್ಗಾವಣೆ ಮಾಡಿತ್ತು. ‘ಈ ವರ್ಗಾವಣೆಯನ್ನು ತಡೆಯಬೇಕು ಮತ್ತು ಮಠದ ಆಡಳಿತದ ಹಿತದೃಷ್ಟಿಯಿಂದ ಅವರನ್ನು ಇಲ್ಲಿಯೇ ಉಳಿಸಬೇಕು‘ ಎಂದು ಕೋರಿ ಎಂ ಭರತ್‌ ಕುಮಾರ್‌ 2023ರ ಡಿಸೆಂಬರ್ 15ರಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿದ್ದರು.

‘ನ್ಯಾಯಾಧೀಶರ ವರ್ಗಾವಣೆ ಹೈಕೋರ್ಟ್ ಆಡಳಿತಕ್ಕೆ ಸಂಬಂಧಿಸಿದ್ದು, ಇಂತಹ ಸೂಕ್ಷ್ಮ ವಿಷಯದಲ್ಲಿ ಎಂ ಭರತ್‌ ಕುಮಾರ್ ಮೂಗು ತೂರಿಸಿದ್ದಾರೆ. ನ್ಯಾಯಾಂಗದ ಘನತೆಗೆ ಅಗೌರವ ಉಂಟು ಮಾಡಿದ್ದಾರೆ. ಸಂಸ್ಥೆಗೆ ಕೆಟ್ಟ ಹೆಸರು ತರಲು ಕಾರಣರಾಗಿದ್ದು ಗುರುತರ ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಇದು ನ್ಯಾಯಾಂಗ ನಿಂದನೆ ಕಾಯಿದೆ–1971ರ ಸೆಕ್ಷನ್‌ 2ರ ಅನುಸಾರ ಕ್ರಿಮಿನಲ್ ಅಪರಾಧ’ ಎಂದು ಆರೋಪಿಸಿ ರಿಜಿಸ್ಟ್ರಾರ್ ಜನರಲ್ 2024ರ ಜನವರಿ 3ರಂದು ದೂರು ದಾಖಲಿಸಿದ್ದರು.