Justice M Nagaprasanna and Karnataka HC 
ಸುದ್ದಿಗಳು

ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ತೃತೀಯ ಲಿಂಗಿಗಳನ್ನು ಸಾಮಾನ್ಯ ಮನುಷ್ಯರಂತೆ ಕಾಣಬೇಕು: ಹೈಕೋರ್ಟ್‌

ಮೃತರು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಅವರಿಗೆ ತಮ್ಮನ್ನು ಸಮಾಜ ಬಹಿಷ್ಕರಿಸುತ್ತದೆ ಎಂಬ ಸೂಕ್ಷ್ಮತೆ ವ್ಯಾಪಿಸಿರುತ್ತದೆ. ಆದ್ದರಿಂದ, ಅಂತಹ ಜನರನ್ನು ಎಲ್ಲರೂ ಪ್ರೀತಿಯಿಂದ ನಡೆಸಿಕೊಳ್ಳಬೇಕು ಎಂದಿರುವ ನ್ಯಾಯಾಲಯ.

Bar & Bench

ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ತೃತೀಯ ಲಿಂಗಿಗಳನ್ನೂ ಸಹ ಸಮಾಜದ ಇತರೆ ಸಾಮಾನ್ಯ ಮನುಷ್ಯರಂತೆ ಕಾಣಬೇಕು. ಹಾಗೆ ಮಾಡಿದರೆ ಅಂತಹ ಅಮೂಲ್ಯ ಜೀವಗಳು ಕಳೆದು ಹೋಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ. ಅಲ್ಲದೇ, ತೃತೀಯ ಲಿಂಗಿಯೊಬ್ಬರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇರೆಗೆ ಮೂವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮ್ಮೆಯನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.

ತೃತೀಯ ಲಿಂಗಿ ವಿವೇಕ್ ರಾಜ್ ಆತ್ಮಹತ್ಯೆಗೆ ಕಿರುಕುಳ ಮತ್ತು ಪ್ರಚೋದನೆ ನೀಡಿದ ಆರೋಪದಲ್ಲಿ ಬೆಂಗಳೂರು ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಮೂವರು ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ವಜಾಗೊಳಿಸಿದೆ.

ಬೆಂಗಳೂರಿನ ಲೈಫ್‌ಸ್ಟೈಲ್ ಇಂಟರ್‌ನ್ಯಾಷನಲ್ ಸಂಸ್ಥೆಯ ಮೂವರು ಆರೋಪಿಗಳಾದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಮಾಲತಿ ಎಸ್‌ ಬಿ, ಉಪಾಧ್ಯಕ್ಷ (ಮಾನವ ಸಂಪನ್ಮೂಲ) ಕುಮಾರ್ ಸೂರಜ್, ಮತ್ತು ಸಹಾಯಕ ವ್ಯವಸ್ಥಾಪಕ (ಮಾರ್ಕೆಟಿಂಗ್)ನಿತೀಶ್ ಕುಮಾರ್ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಐಪಿಸಿಯ ಸೆಕ್ಷನ್ 306 ಮತ್ತು 34ರಡಿಯಲ್ಲಿ  ದಾಖಲಿಸಿರುವ ಪ್ರಕರಣದಲ್ಲಿ ತನಿಖೆ ಮುಂದುವರಿಯಲಿದೆ.

“ಮೃತರು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಅವರಿಗೆ ತಮ್ಮನ್ನು ಸಮಾಜ ಬಹಿಷ್ಕರಿಸುತ್ತದೆ ಎಂಬ ಸೂಕ್ಷ್ಮತೆ ವ್ಯಾಪಿಸಿರುತ್ತದೆ. ಆದ್ದರಿಂದ, ಅಂತಹ ಜನರನ್ನು ಎಲ್ಲರೂ ಪ್ರೀತಿಯಿಂದ ನಡೆಸಿಕೊಳ್ಳಬೇಕು. ಪ್ರತಿಯೊಬ್ಬ ಪ್ರಜೆಯೂ ಅಂತಹ ನಾಗರಿಕರನ್ನು ಸಾಮಾನ್ಯ ಮನುಷ್ಯರಂತೆ ಪ್ರೀತಿ ಮತ್ತು ಕಾಳಜಿಯಿಂದ ನಡೆಸಿಕೊಂಡರೆ, ಅಮೂಲ್ಯವಾದ ಜೀವಗಳನ್ನು ಕಳೆದುಕೊಳ್ಳುವುದಿಲ್ಲ. ದುರದೃಷ್ಟವಶಾತ್, ಈ ಪ್ರಕರಣದಲ್ಲಿ ಯುವಕನ ಜೀವವು ಕಳೆದುಹೋಗಿದೆ, ಮೇಲ್ನೋಟಕ್ಕೆ ಆರೋಪಿಗಳ ಮೇಲಿನ ಆರೋಪದಲ್ಲಿ ಹುರುಳು ಕಂಡು ಬಂದಿದೆ” ಎಂದು ನ್ಯಾಯಾಲಯ ಹೇಳಿದೆ.

“ಮೃತರು 2023ರ ಜೂನ್‌ 3ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಮತ್ತು ಮರುದಿನವೇ ಅವರ ತಂದೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು 2023ರ ಜೂನ್‌ 7 ರಂದು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅತಿಸೂಕ್ಷ್ಮ ವ್ಯಕ್ತಿಯ ಸ್ವಾಭಿಮಾನ ಅಥವಾ ಆತ್ಮಗೌರವವನ್ನು ಹಾಳು ಮಾಡುವಲ್ಲಿ ಅಥವಾ ನಾಶಪಡಿಸುವಲ್ಲಿ ಆರೋಪಿಗಳು ಸಕ್ರಿಯ ಪಾತ್ರ ವಹಿಸಿದ್ದರೆ, ಅವರು ಖಂಡಿತವಾಗಿಯೂ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ತಪ್ಪಿತಸ್ಥರಾಗುತ್ತಾರೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (ಎನ್‌ಐಎಫ್‌ಟಿ)ಯಿಂದ ವಿನ್ಯಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ವಿವೇಕ್ ರಾಜ್ 2022ರ ಸೆಪ್ಟೆಂಬರ್ ತಿಂಗಳಿಂದ ಬೆಂಗಳೂರಿನಲ್ಲಿ ವಿಶುವಲ್ ಮರ್ಚಂಡೈಸಿಂಗ್‌ನಲ್ಲಿ  ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳು ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮೃತರು 2023ರ ಜೂನ್‌ 1 ಮತ್ತು 2ರಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲಿಲ್ಲ. ಆನಂತರ ಜೂನ್‌ 3ರಂದು ವಿವೇಕ್ ರಾಜ್ ಆತ್ಮಹತ್ಯೆಗೆ ಶರಣಾಗಿದ್ದರು.

Malathy S B Vs State of Karnataka.pdf
Preview