Justice Suraj Govindaraj and Karnataka HC, Kalburgi bench 
ಸುದ್ದಿಗಳು

[ಪರಿಹಾರ ಪಾವತಿ] ಕಾರ್ಮಿಕ ಪರಿಹಾರ ಆಯುಕ್ತರ ಮುಂದೆ ಹಣ ಠೇವಣಿ ಇಟ್ಟಮಾತ್ರಕ್ಕೆ ಹೊಣೆಗಾರಿಕೆ ಪೂರ್ಣವಲ್ಲ: ಹೈಕೋರ್ಟ್‌

ವಾರಸುದಾರರಿಗೆ ಅಂತಿಮವಾಗಿ 2023ರ ಫೆ.17ರಂದು ಹಣ ಬಿಡುಗಡೆ ಮಾಡಲಾಗಿದೆ. ಲೆಕ್ಕಾಚಾರ ಮಾಡಿ ನ್ಯಾಯಾಲಯವು ಬಾಕಿ ₹3,37,015 ಬಡ್ಡಿ ಹಣ ಪಾವತಿಸಲು ಆದೇಶಿಸಿರುವುದು ಸರಿಯಾಗಿದೆ ಎಂದಿರುವ ಹೈಕೋರ್ಟ್‌.

Siddesh M S

ಪರಿಹಾರದ ಮೊತ್ತವನ್ನು ಕಾರ್ಮಿಕರ ಪರಿಹಾರ ಆಯುಕ್ತರ ಬಳಿ ಠೇವಣಿ ಇಟ್ಟಿರುವುದರಿಂದ ಹೆಚ್ಚುವರಿ ಬಡ್ಡಿ ಪಾವತಿಸಲು ನಿರಾಕರಿಸಿದ್ದ ವಿಮಾ ಕಂಪೆನಿಯೊಂದರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಈಚೆಗೆ ವಜಾ ಮಾಡಿದ್ದು, ಸುಮಾರು ₹3 ಲಕ್ಷ ರೂಪಾಯಿ ಹೆಚ್ಚುವರಿ ಬಡ್ಡಿಯನ್ನು ವಾರಸುದಾರನಿಗೆ (ಕ್ಲೈಮಂಟ್‌) ಪಾವತಿಸಲು ಆದೇಶಿಸಿದೆ.

ರಾಯಚೂರಿನ ದೇವದುರ್ಗದ ನಾಗರಾಜ್‌ ಅವರಿಗೆ 01.08.2012 ರಿಂದ 19.04.2023ರವರೆಗೆ ₹3,37,014 ಬಾಕಿ ಬಡ್ಡಿ ಪಾವತಿಸುವಂತೆ ಎಕ್ಸಿಕ್ಯೂಟಿಂಗ್‌ ನ್ಯಾಯಾಲಯವು ಆದೇಶಿಸಿದ್ದನ್ನು ಪ್ರಶ್ನಿಸಿ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪೆನಿ ಲಿಮಿಟೆಡ್‌‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಬಡ್ಡಿ ಪಾವತಿಸುವುದು ಫಿರ್ಯಾದಿ ವಿಮಾ ಕಂಪೆನಿಗೆ ಬೇಕಿರಲಿಲ್ಲ ಎಂದಾದರೆ ಅವರು ಪ್ರತಿವಾದಿಗೆ ಹಣ ಪಾವತಿಸಬೇಕಿತ್ತು. ಹಣ ಠೇವಣಿ ಇಡುವುದರಿಂದ ಪ್ರತಿವಾದಿಗೆ ಯಾವುದೇ ಲಾಭವಾಗಿಲ್ಲ. ಈ ನೆಲೆಯಲ್ಲಿ ಕಾರ್ಮಿಕರ ಪರಿಹಾರ ಆಯುಕ್ತರ ಮುಂದೆ ಬಡ್ಡಿ ಮತ್ತು ಹಣ ಠೇವಣಿ ಇಟ್ಟಿರುವುದರಿಂದ ಬಡ್ಡಿ ಲೆಕ್ಕ ಹಾಕಲಾಗದು ಎಂಬ ವಾದ ಒಪ್ಪಲಾಗದು. ಏಕೆಂದರೆ ಪ್ರತಿವಾದಿಗೆ ಠೇವಣಿ ಇಡಲಾದ ಹಣದ ಲಾಭ ದೊರೆತಿಲ್ಲ. ಒಂದೊಮ್ಮೆ ಠೇವಣಿ ಇಡಲಾದ ಹಣವನ್ನು ನಿಶ್ಚಿತ ಠೇವಣಿಯ ರೂಪದಲ್ಲಿ ಇಟ್ಟಿದ್ದರೆ ಅದರಿಂದ ಬರುವ ಬಡ್ಡಿಯ ಮೊತ್ತವನ್ನು ವಿಮಾ ಕಂಪೆನಿಯು ಹೊಂದಿಸಿ, ಬಾಕಿ ಬಡ್ಡಿಗೆ ಪಾವತಿಸಬಹುದಿತ್ತು” ಎಂದು ನ್ಯಾಯಾಲಯ ಹೇಳಿದೆ.

“ಕಾರ್ಮಿಕ ಆಯುಕ್ತರ ಬಳಿ ಠೇವಣಿ ಇಟ್ಟಿರುವ ಹಣವನ್ನು ವಾರಸುದಾರರಿಗೆ ಪಾವತಿಸಲಾಗಿಲ್ಲ. ವಿಮಾ ಹಣ ಮತ್ತು ಬಡ್ಡಿ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ವಾರಸುದಾರ 2013ರ ನವೆಂಬರ್‌ 16ರಂದು ಸಲ್ಲಿಸಿದ್ದ ಅರ್ಜಿಗೆ ವಿಮಾ ಕಂಪೆನಿಯು ಮೇಲ್ಮನವಿ ಸಲ್ಲಿಸುವ ಮೂಲಕ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ಕೋರಿರುವುದಾಗಿ ಹೇಳಿದೆ. ವಿಮಾ ಕಂಪೆನಿಯ ಆಕ್ಷೇಪಣೆಯ ಹಿನ್ನೆಲೆಯಲ್ಲಿ ವಾರಸುದಾರರಿಗೆ ಹಣ ಬಿಡುಗಡೆ ಆಗಿಲ್ಲ. ಈ ಮಧ್ಯೆ, 2014ರ ನವೆಂಬರ್‌ 21ರಂದು ವಾರಸುದಾರನಿಗೆ ಠೇವಣಿ ಇಟ್ಟಿರುವ ಹಣ ಬಿಡುಗಡೆ ಮಾಡದಂತೆ ವಿಮಾ ಕಂಪೆನಿಯು ಕಾರ್ಮಿಕ ಪರಿಹಾರ ಆಯುಕ್ತರಿಗೆ ಪತ್ರ ಬರೆದಿದೆ. ಇದೆಲ್ಲವಾದ ಬಳಿಕ 2023ರ ಫೆಬ್ರವರಿ 17ರಂದು ವಾರಸುದಾರರಿಗೆ ಅಂತಿಮವಾಗಿ ಹಣ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬಾಕಿ ಬಡ್ಡಿ ಹಣ ಪಾವತಿಗೆ ಆದೇಶಿಸುವಂತೆ ವಾರಸುದಾರ ಅರ್ಜಿ ಸಲ್ಲಿಸಿದ್ದರು. ಇದನ್ನು ಲೆಕ್ಕಾಚಾರ ಮಾಡಿ ಎಕ್ಸಿಕ್ಯೂಟಿಂಗ್‌ ನ್ಯಾಯಾಲಯವು ಬಾಕಿ ₹3,37,015 ಬಡ್ಡಿ ಹಣ ಪಾವತಿಸಲು ಆದೇಶಿಸಿದೆ” ಎಂದು ನ್ಯಾಯಾಲಯ ವಿವರಿಸಿದೆ.

“ವಾರಸುದಾರ ಅಥವಾ ಫಿರ್ಯಾದಿ ಯಾರೇ ಆದರೂ ನ್ಯಾಯಾಲಯವು ಪರಿಹಾರ ಪಾವತಿಸುವಂತೆ ಆದೇಶಿಸಿದ ಮೇಲೆ ಅವರಿಗೆ ಮೊತ್ತ ಪಾವತಿಯಾಗುವ ದಿನಾಂಕದವರೆಗೆ ಅವರು ಅಸಲು ಮೊತ್ತ ಮತ್ತು ಬಡ್ಡಿಗಳೆರಡಕ್ಕೂ ಅರ್ಹರಾಗಿರುತ್ತಾರೆ. ವಿಮಾ ಕಂಪೆನಿಯು ನ್ಯಾಯಾಲಯ ಅಥವಾ ಹಾಲಿ ಪ್ರಕರಣದಲ್ಲಿ ಕಾರ್ಮಿಕರ ಪರಿಹಾರ ಆಯುಕ್ತರ ಮುಂದೆ ಹಣ ಮತ್ತು ಬಡ್ಡಿ ಠೇವಣಿ ಇಟ್ಟಮಾತ್ರಕ್ಕೆ ಹಣ ಪಾವತಿಸುವ ಹೊಣೆಗಾರಿಕೆ ಪೂರ್ಣಗೊಳ್ಳುವುದಿಲ್ಲ. ವಾರಸುದಾರ ಅಥವಾ ಫಿರ್ಯಾದಿಗೆ ಹಣ ಪಾವತಿಸುವಂತೆ ನಿರ್ದೇಶಿಸಿದ ಮೇಲೆ ಅದು ಅವರಿಂದ ಸ್ವೀಕೃತವಾಗುವುದು ಮುಖ್ಯವಾಗುತ್ತದೆ. ಹಣವನ್ನು ನ್ಯಾಯಾಲಯ ಅಥವಾ ಠೇವಣಿ ಇಡುವುದರಿಂದ ಫಿರ್ಯಾದಿ/ವಾರಸುದಾರರಿಗೆ ಅದರಿಂದ ಯಾವುದೇ ಅನುಕೂಲವಾಗುವುದಿಲ್ಲ. ಇಂಥ ನಿರಾಕರಣೆಯು ಹಾಲಿ ದಾವೆಯ ರೂಪ ಪಡೆಯುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

ಕಂಪೆನಿ ಪರ ವಕೀಲ ಮೊಹಮ್ಮದ್‌ ಕಾಯಮ್ ಅವರು “ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ ಅಧೀನ ನ್ಯಾಯಾಲಯ ಆದೇಶಿಸಿದ್ದ ವಿಮಾ ಹಣ ಮತ್ತು ಬಡ್ಡಿಯನ್ನು ಕಾರ್ಮಿಕರ ಆಯುಕ್ತರ ಬಳಿ ಠೇವಣಿ ಇಡಲಾಗಿದೆ. ಹೀಗಾಗಿ, ಯಾವುದೇ ಬಡ್ಡಿ ಪಾವತಿಸುವ ಅಗತ್ಯವಿಲ್ಲ” ಎಂದು ವಾದಿಸಿದ್ದರು. ಈ ವಾದವನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಪ್ರಕರಣದ ಹಿನ್ನೆಲೆ: ರಾಯಚೂರಿನ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯವು 2011ರ ನವೆಂಬರ್‌ 24ರಿಂದ ಅನ್ವಯವಾಗುವಂತೆ ₹4,02,416 ರೂಪಾಯಿ ಪರಿಹಾರ ಜೊತೆಗೆ ಅದಕ್ಕೆ ವಾರ್ಷಿಕ ಶೇ. 12 ಬಡ್ಡಿ ಸೇರಿಸಿ, ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪೆನಿ ಲಿಮಿಟೆಡ್‌‌ ಮೇಲ್ಮನವಿ ಸಲ್ಲಿಸಿದ್ದು, ಅದನ್ನು 2022ರ ಏಪ್ರಿಲ್‌ 8ರಂದು ನ್ಯಾಯಾಲಯ ವಜಾ ಮಾಡಿತ್ತು. ಮೇಲ್ಮನವಿ ಸಲ್ಲಿಸುವುದಕ್ಕೂ ಮುನ್ನ 24.11.2011 ರಿಂದ 01.08.2013ರವರೆಗೆ ಅನ್ವಯಿಸುವಂತೆ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪೆನಿ ಲಿಮಿಟೆಡ್‌‌ ₹4,02,416 ರೂಪಾಯಿ ಹಾಗೂ ₹81,498 ರೂಪಾಯಿಯನ್ನು ಕಾರ್ಮಿಕರ ಪರಿಹಾರ ಆಯುಕ್ತರ ಬಳಿ ಠೇವಣಿ ಇಟ್ಟಿತ್ತು.

ಎಕ್ಸಿಕ್ಯೂಷನ್‌ ಮನವಿಯ ವಿಚಾರಣೆ ನಡೆಸಿದ ಎಕ್ಸಿಕ್ಯೂಟಿಂಗ್‌ ನ್ಯಾಯಾಲಯವು ವಿಮಾ ಕಂಪೆನಿಗೆ 01.08.2012 ರಿಂದ 19.04.2023ರವರೆಗೆ ₹3,37,014 ರೂಪಾಯಿ ಬಾಕಿ ಬಡ್ಡಿ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ವಿಮಾ ಕಂಪೆನಿಯು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.