ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಹಾಗೂ ಸಂತ್ರಸ್ತೆ ಪ್ರೇಮಿಗಳಾಗಿದ್ದು, ಮದುವೆಯಾಗಿ ಘನತೆಯಿಂದ ಬದುಕಲು ನಿರ್ಧರಿಸಿರುವುದು, ಸಂತ್ರಸ್ತೆ ಪ್ರೌಢರಾಗಿರುವುದು ಹಾಗೂ ಆಕೆಗೆ ಇನ್ನಿಬ್ಬರು ಸಹೋದರಿಯರು ಇರುವುದನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಮೇಲ್ಮನವಿದಾರನಿಗೆ ಜಾಮೀನು ಮಂಜೂರು ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ.
17 ವರ್ಷದ ಯುವತಿಯ ಮೇಲೆ 2017ರಲ್ಲಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಚಿತ್ರದುರ್ಗದ ವಿಶೇಷ ನ್ಯಾಯಾಲಯವು ಪ್ರತಾಪ್ ಎಂಬುವರನ್ನು 2019ರಲ್ಲಿ ದೋಷಿ ಎಂದು ನಿರ್ಣಯಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಪ್ರತಾಪ್ ಅವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠವು ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
“ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿರಿಸಲಾಗಿದ್ದು, ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಎರಡು ಭದ್ರತಾ ಖಾತರಿಗಳನ್ನು ಮೂವತ್ತು ದಿನಗಳ ಒಳಗೆ ವಿಶೇಷ ನ್ಯಾಯಾಲಯಕ್ಕೆ ಪ್ರತಾಪ್ ಒದಗಿಸಬೇಕು. ಪ್ರತಾಪ್ ಮತ್ತು ಅವರ ಪೋಷಕರು ಸಂತ್ರಸ್ತೆಯನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು. ಆಕೆಯ ಬಗ್ಗೆ ಕಾಳಜಿವಹಿಸಬೇಕು. ಪ್ರತಾಪ್ ಮತ್ತು ಆತನ ಪೋಷಕರು ಸಂತ್ರಸ್ತೆಯನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಸಂತ್ರಸ್ತೆ ಅಥವಾ ರಾಜ್ಯ ಸರ್ಕಾರವು ಪ್ರತಾಪ್ ಅವರ ಜಾಮೀನು ರದ್ದತಿ ಅಥವಾ ಆದೇಶದಲ್ಲಿ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಆದೇಶವು ಮಧ್ಯಂತರ ಕ್ರಮವಾಗಿದ್ದು, ಮುಂದೆ ಉದ್ಭವಿಸುವ ಪ್ರಕರಣಗಳಿಗೆ ಇದನ್ನು ನಾಂದಿಯಾಗಿ ಪರಿಗಣಿಸಬಾರದು” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.
“ಶಿಕ್ಷೆ ಅಮಾನತು ಮತ್ತು ಜಾಮೀನು ಕೋರಿ ಪ್ರತಾಪ್ ಮೇಲ್ಮನವಿ ಸಲ್ಲಿಸಿದಾಗ ಸಂತ್ರಸ್ತೆಗೆ 24 ವರ್ಷಗಳಾಗಿದ್ದು, ಆಕೆ ಪ್ರೌಢಾವಸ್ಥೆ ದಾಟಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಪ್ರತಾಪ್ ಮತ್ತು ತಾನು ಪ್ರೇಮಿಗಳಾಗಿದ್ದು, ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದೆವು ಎಂದು ಆಕೆ ತಿಳಿಸಿದ್ದಾರೆ. ಒತ್ತಡ ಮತ್ತು ಭಯದಿಂದ ಪ್ರತಾಪ್ ವಿರುದ್ಧ ಹೇಳಿಕೆ ನೀಡಿದ್ದು, ಸಂಧಾನಕ್ಕೆ ಒಪ್ಪಿ ಜೀವನದಲ್ಲಿ ಘನತೆಯಿಂದ ಬದುಕಬೇಕು ಎಂದು ನಿರ್ಧರಿಸಿದ್ದಾರೆ. ತನಗೆ 24 ವರ್ಷಗಳಾಗಿದ್ದು, ಮದುವೆಯಾಗದೆ ಗ್ರಾಮದಲ್ಲಿ ಜೀವನ ಕಷ್ಟಸಾಧ್ಯ. ತನ್ನನ್ನು ಹೊರತುಪಡಿಸಿ ಇನ್ನಿಬ್ಬರು ಸಹೋದರಿಯರಿದ್ದು, ಇದು ಕುಟುಂಬದ ಮೇಲೆ ಕಪ್ಪುಚುಕ್ಕೆಯಾಗಲಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಪ್ರಕರಣ ವಿಚಾರಣಾ ಹಂತದಲ್ಲಿದ್ದಾಗ ಜಾಮೀನಿನ ಮೇಲೆ ಹೊರಗಿದ್ದ ಪ್ರತಾಪ್ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ಸಂತ್ರಸ್ತೆ ಮತ್ತು ತಾನು ಇಬ್ಬರೂ ಪ್ರೇಮಿಗಳಾಗಿದ್ದು, ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದು, ಒಂದೇ ಗ್ರಾಮದಲ್ಲಿ ನೆಲೆಸಿದ್ದೇವೆ. ಈಗ ಮದುವೆಯಾಗಲು ಒಪ್ಪಿದ್ದೇವೆ ಎಂದು ಪ್ರತಾಪ್ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಹೀಗಾಗಿ, ಪ್ರತಾಪ್‌ಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತಿನಲ್ಲಿಡುವುದು ಸೂಕ್ತ ಎಂದು ನಮಗೆ ಅನ್ನಿಸಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.
ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ಅಮಾನತಿನಲ್ಲಿರಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಕೋರಿ ಪ್ರತಾಪ್ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ, 2019ರ ಆಗಸ್ಟ್ 28ರಂದು ಇದೇ ತೆರನಾದ ಅರ್ಜಿಯನ್ನು ಪ್ರತಾಪ್ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ವಜಾ ಮಾಡಿತ್ತು.
ವಿಚಾರಣಾಧೀನ ನ್ಯಾಯಾಲಯವು 2019ರಲ್ಲಿ ಪ್ರತಾಪ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಅಂದಿನಿಂದ ಪ್ರತಾಪ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಂತ್ರಸ್ತೆಯ ಜೊತೆ ವಿವಾಹವಾಗಲು ಪ್ರತಾಪ್ ಪೋಷಕರು ಒಪ್ಪಿದ್ದು, ಸಂತ್ರಸ್ತೆಗೆ ಈಗ 24 ವರ್ಷಗಳಾಗಿವೆ. ಆಕೆಯೂ ಪ್ರತಾಪ್ ಅವರನ್ನು ವರಿಸಲು ಒಪ್ಪಿದ್ದಾರೆ. ಸಂತ್ರಸ್ತೆ ಮತ್ತು ತಾನು ಪ್ರೇಮಿಗಳಾಗಿದ್ದು, ಒಂದೇ ಗ್ರಾಮದಲ್ಲಿ ನೆಲೆಸಿರುವುದರಿಂದ ಹಲವು ವರ್ಷಗಳಿಂದ ಪರಿಚಯವಿತ್ತು. ಅತ್ಯಾಚಾರ ಪ್ರಕರಣ ನಡೆದ ಸಂದರ್ಭದಲ್ಲಿ ಪ್ರತಾಪ್‌ಗೆ 22 ವರ್ಷಗಳಾಗಿತ್ತು. ಅವರ ಪೋಷಕರಿಗೆ ಪ್ರತಾಪ್ ಏಕೈಕ ಪುತ್ರನಾಗಿದ್ದು, ಬಡವರಾಗಿದ್ದು, ಅವರನ್ನು ನೋಡಿಕೊಳ್ಳಲು ಬೇರಾರೂ ಇಲ್ಲ. ಪ್ರಕರಣ ಬಾಕಿ ಇದ್ದಾಗ, ಜೈಲಿನಲ್ಲಿದ್ದಾಗ ನ್ಯಾಯಾಲಯ ವಿಧಿಸಿದ ಯಾವುದೇ ಷರತ್ತನ್ನು ಉಲ್ಲಂಘಿಸಿಲ್ಲ. ಹೀಗಾಗಿ, ಶಿಕ್ಷೆ ಅಮಾನತು ಮಾಡಿ, ಜಾಮೀನು ಮಂಜೂರು ಮಾಡಬೇಕು ಎಂದು ಅಫಿಡವಿಟ್‌ನಲ್ಲಿ ಪ್ರತಾಪ್ ಕೋರಿದ್ದರು.
ಆನಂತರ ಸಂತ್ರಸ್ತೆಯು ಅಫಿಡವಿಟ್ ಸಲ್ಲಿಸಿದ್ದು, ತನಗೆ ಸದ್ಯ 24 ವರ್ಷಗಳಾಗಿವೆ. ಘಟನೆ ನಡೆದ ಸಂದರ್ಭದಲ್ಲಿ ಪ್ರತಾಪ್ ಮತ್ತು ತಾನು ಪ್ರೇಮಿಗಳಾಗಿದ್ದು, ಭಯ ಮತ್ತು ಒತ್ತಡ ಹಿನ್ನೆಲೆಯಲ್ಲಿ ಪ್ರತಾಪ್ ಅವರ ವಿರುದ್ಧ ಹೇಳಿಕೆ ನೀಡಿದ್ದೆ. ರಾಜಿಯಾಗಿರುವುದರಿಂದ ಪ್ರತಾಪ್ ಅವರನ್ನು ವರಿಸಲು ಸಿದ್ಧವಾಗಿದ್ದು, ಅವರು ಅದಕ್ಕೆ ಒಪ್ಪಿದ್ದಾರೆ. ಈ ಮೂಲಕ ಶಾಂತಿ ಮತ್ತು ಘನತೆಯಿಂದ ಬದುಕಲು ಪ್ರತಾಪ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.
ಮುಂದುವರಿದು, ತಾನಲ್ಲದೆ ಪೋಷಕರಿಗೆ ಇನ್ನೂ ಇಬ್ಬರು ಪುತ್ರಿಯರಿದ್ದು, ತಾನು ಮೊದಲನೆಯವಳು. ತಂದೆ ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ವಾರದಲ್ಲಿ ಎರಡು ಬಾರಿ ಅವರು ಡಯಾಲಿಸಿಸ್‌ಗೆ ಒಳಗಾಗಬೇಕಿದೆ. ಮದುವೆಯಾಗದಿದ್ದರೆ ಗ್ರಾಮದಲ್ಲಿ ಜೀವನ ಕಷ್ಟಸಾಧ್ಯವಾಗಲಿದ್ದು, ಪ್ರತಾಪ್ ಮತ್ತು ತಾನು ಒಂದೇ ಊರಿನವರಾಗಿದ್ದೇವೆ. ಬಾಲ್ಯದಿಂದಲೂ ಪ್ರೇಮಿಗಳಾಗಿದ್ದು, ಪ್ರತಾಪ್ ಪೋಷಕರು ಮತ್ತು ತಮ್ಮ ಪೋಷಕರು ಮದುವೆಗೆ ಒಪ್ಪಿರುವುದರಿಂದ ಪ್ರತಾಪ್ ಅವರನ್ನು ವರಿಸಲು ಸಿದ್ಧವಾಗಿದ್ದೇನೆ. ಹೀಗಾಗಿ, ಅರ್ಜಿ ಮಾನ್ಯ ಮಾಡಬೇಕು ಎಂದು ಕೋರಿದ್ದರು.
ಪ್ರತಾಪ್ ಮತ್ತು ಅವರ ಪೋಷಕರು ಹಾಗೂ ಸಂತ್ರಸ್ತೆ ಹಾಗೂ ಆಕೆಯ ತಾಯಿ ನ್ಯಾಯಾಲಯದ ಮುಂದೆ ಹಾಜರಾಗಿ ಮದುವೆಗೆ ಸಮ್ಮತಿಸಿದರು. ಒಂದು ಹಂತದಲ್ಲಿ ಪ್ರತಾಪ್ ಪೋಷಕರು ಒಂದು ಎಕರೆ ಭೂಮಿಯನ್ನು ಸಂತ್ರಸ್ತೆ ಹೆಸರಿಗೆ ನೋಂದಾಯಿಸಿಕೊಡುವುದಾಗಿಯೂ ನ್ಯಾಯಾಲಯಕ್ಕೆ ತಿಳಿಸಿದರು. ಆದರೆ, ಸಂತ್ರಸ್ತೆ ತಾಯಿ ಮದುವೆಗೆ ತಮ್ಮ ವಿರೋಧವಿದೆ. ಪತಿಯೂ ಮದುವೆಗೆ ಒಪ್ಪಿಲ್ಲ ಎಂದು ಆಕ್ಷೇಪಿಸಿದರು. ಇದನ್ನು ನ್ಯಾಯಾಲಯ ಪರಿಗಣಿಸಿಲ್ಲ.
ಘಟನೆ ಹಿನ್ನೆಲೆ: 2017ರಲ್ಲಿ ಸಂತ್ರಸ್ತೆಯನ್ನು ಅಪಹರಿಸಿ, ಅತ್ಯಾಚಾರ ಎಸಗಿರುವುದಕ್ಕೆ ಸಂಬಂಧಿಸಿದಂತೆ ಪ್ರತಾಪ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 363, 366, 376(2) ಎನ್ ಹಾಗೂ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 4 ಮತ್ತು 6ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ನಡೆಸಿದ ಚಿತ್ರದುರ್ಗದ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು 2019ರ ಮಾರ್ಚ್ 20ರಂದು ಪ್ರತಾಪ್ ಅವರನ್ನು ದೋಷಿ ಎಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ ವಿಧಿಸಿತ್ತು.