CJ N V Anjaria and Kuvempu 
ಸುದ್ದಿಗಳು

ಕುವೆಂಪು ಅವರಂತೆ ನಾನೂ ಮಾತೃ ಭಾಷೆಯ ಪ್ರಖರ ಬೆಂಬಲಿಗ: ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ

ಗುಜರಾತಿಯು ನನ್ನ ಮಾತೃಭಾಷೆಯಾಗಿದ್ದು, ಕನ್ನಡ ನನ್ನ ಕರ್ಮ ಭಾಷೆಯಾಗಿರಲಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ.

Bar & Bench

“ರಾಷ್ಟ್ರಕವಿ ಕುವೆಂಪು ಅವರು ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ್ದರು. ಇಂಗ್ಲಿಷ್‌ ಜೊತೆಗೆ ಕನ್ನಡವನ್ನು ಕಡ್ಡಾಯ ಕಲಿಯಬೇಕು ಎಂದಿದ್ದಾರೆ. ನಾನೂ ಸಹ ಮಾತೃಭಾಷೆಯ ಪ್ರಖರ ಬೆಂಬಲಿಗ” ಎಂದು ಕರ್ನಾಟಕ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ವತಿಯಿಂದ ಸೋಮವಾರ ಮುಖ್ಯ ನ್ಯಾಯಮೂರ್ತಿಯಾಗಿರುವ ನಿಲಯ್ ವಿಪಿನ್‌ಚಂದ್ರ ಅಂಜಾರಿಯಾ ಅವರಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

“ಗುಜರಾತಿಯು ನನ್ನ ಮಾತೃಭಾಷೆಯಾಗಿದ್ದು, ಕನ್ನಡ ನನ್ನ ಕರ್ಮ ಭಾಷೆಯಾಗಿರಲಿದೆ. ಈಚೆಗೆ ಫೆಬ್ರವರಿ 21ರಂದು ವಿಶ್ವ ಮಾತೃಭಾಷಾ ದಿನವನ್ನು ಆಚರಿಸಿದ್ದೇವೆ” ಎಂದು ನೆನೆಪಿಸಿದರು.

“ನನಗೆ ಕರ್ನಾಟಕದೊಂದಿಗೆ ವಿಶೇಷ ಸಂಬಂಧವಿದೆ. ಮೊದಲಿಗೆ ನಾನು ಫೆಲೋಶಿಫ್‌ ಸ್ವೀಕರಿಸಿದ್ದು ಕರ್ನಾಟಕದವರಾದ ಸುಪ್ರೀಂ ಕೋರ್ಟ್‌ ನಿವೃತ್ತ ಸಿಜೆಐ ಎನ್‌ ವಿ ವೆಂಕಟಾಚಲಯ್ಯ ಅವರಿಂದ, ಎರಡನೆಯದಾಗಿ ನಾನು ನ್ಯಾಯಮೂರ್ತಿಯಾಗಿ ನೇಮಕಗೊಂಡಾಗ ಕರ್ನಾಟಕದವರಾದ ವೀರಪ್ಪ ಮೊಯ್ಲಿ ಅವರು ಕೇಂದ್ರ ಕಾನೂನು ಸಚಿವರಾಗಿದ್ದರು. ಮೂರನೆಯದಾಗಿ ಗುಜರಾತ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಾಗ ನ್ಯಾ. ಡಿ ಎಚ್‌ ವಘೇಲಾ ಅವರೊಂದಿಗೆ ಪೀಠ ಹಂಚಿಕೊಂಡಿದ್ದೆ. ಆನಂತರ ನ್ಯಾ. ವಘೇಲಾ ಅವರು ಕರ್ನಾಟಕ ಹೈಕೋರ್ಟ್‌ ಸಿಜೆಯಾಗಿ ನೇಮಕಗೊಂಡಿದ್ದರು” ಎಂದು ಎಂದು ಸ್ಮರಿಸಿದರು.

“ಗುಜರಾತ್‌ ಮತ್ತು ಕರ್ನಾಟಕ ರಾಜ್ಯಗಳಿಗೆ ಅವಿನಾಭಾವ ಸಂಬಂಧವಿದೆ. ಕರ್ನಾಟಕ ಚಾಲುಕ್ಯ ರಾಜಮನೆತನ ಗುಜರಾತ್‌ನಲ್ಲಿ ಆಳ್ವಿಕೆ ನಡೆಸಿದೆ. ರಾಷ್ಟ್ರಕವಿ ಕುವೆಂಪು ಮತ್ತು ಗುಜರಾತ್‌ನ ಉಮಾಶಂಕರ್‌ ಜೋಶಿ ಅವರು 1967ರಲ್ಲಿ ಜಂಟಿಯಾಗಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದರು. ನನಗೂ ಸ್ವಲ್ಪ ಸಾಹಿತ್ಯದ ಮೇಲೆ ಒಲವು” ಎಂದು ಹೇಳಿದರು.

“ಸಾಂಸ್ಕೃತಿಕವಾಗಿ ಕರ್ನಾಟಕವು ಶ್ರೀಮಂತವಾಗಿದ್ದು ಖ್ಯಾತನಾಮ ಸಂಗೀತಗಾರರು, ಕವಿಗಳ ತವರೂರಾಗಿದೆ. ಭೀಮಸೇನ ಜೋಶಿ, ಕುಮಾರ ಗಂಧರ್ವರು ಇಲ್ಲಿನವರಾಗಿದ್ದಾರೆ” ಎಂದು ನೆನಪಿಸಿಕೊಂಡರು.

“ಬೆಂಗಳೂರು ಅತ್ಯುತ್ತಮ ವಾತಾವರಣ ಹೊಂದಿರುವ ನಗರವಾಗಿದ್ದು, ಇಂಥ ಹೈಕೋರ್ಟ್‌ನಲ್ಲಿ ಕೆಲಸ ಮಾಡುವ ಇಚ್ಛೆಯನ್ನು ನಾನು ಹೊಂದಿದ್ದೆ. ಈಗ ನಾವೆಲ್ಲರೂ ಕೂಡಿ ಸಾಂವಿಧಾನಿಕ ವಾತಾವರಣನ್ನು ಎತ್ತಿ ಹಿಡಿಯೋಣ” ಎಂದರು.