Kannada and Karnataka High Court 
ಸುದ್ದಿಗಳು

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ ಕನ್ನಡದಲ್ಲಿ ಅರ್ಜಿ ಸಲ್ಲಿಸಬಹುದು: ಹೈಕೋರ್ಟ್

ಕನ್ನಡದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಸಂಪೂರ್ಣ ನಿರ್ಬಂಧವಿಲ್ಲ; ಅಂತಿಮ ಆದೇಶ ಮಾತ್ರ ಇಂಗ್ಲಿಷ್‌ನಲ್ಲಿ ಇರಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

Siddesh M S

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಕನ್ನಡದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್ನ ಕಲಬುರ್ಗಿ ಪೀಠವು ಕನ್ನಡದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ನ್ಯಾಯಮಂಡಳಿಯ ಆದೇಶವನ್ನು ರದ್ದುಗೊಳಿಸಿದೆ.

ಕಲಬುರಗಿಯ ಛಾಯಾಗ್ರಾಹಕ ಸೂರ್ಯಕಾಂತ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಅಶೋಕ ಎಸ್. ಕಿಣಗಿ ಮತ್ತು ಸುಬ್ರಮಣ್ಯ ರಂಗರಾವ್ ಅವರ ವಿಭಾಗೀಯ ಪೀಠವು ಪುರಸ್ಕರಿಸಿದೆ.

“ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುವವರು ಕನ್ನಡದಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಸಂಪೂರ್ಣ ನಿರ್ಬಂಧವಿಲ್ಲ” ಎಂದು ಪೀಠ ಹೇಳಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಕಲಬುರಗಿ ಪೀಠವು 2025ರ ಜೂನ್ 5ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸೂರ್ಯಕಾಂತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಶ್ನಿಸಿ ಕೆಎಟಿಗೆ ಕನ್ನಡದಲ್ಲಿ ಮೂಲ ಅರ್ಜಿ ಸಲ್ಲಿಸಿದ್ದರು. ಆದರೆ, ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕಾರ್ಯವಿಧಾನ) ನಿಯಮಗಳು, 1986ರ ನಿಯಮ 3 ಅನ್ನು ಉಲ್ಲೇಖಿಸಿದ್ದ ನ್ಯಾಯಮಂಡಳಿಯು ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸುವಂತೆ ಸೂಚಿಸಿ ಅದನ್ನು ಹಿಂದಿರುಗಿಸಿತ್ತು.

ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲ ಶಂಕರ್‌ ಕಟ್ಟೀಮನಿ ಅವರು “1986ರ ನಿಯಮಗಳ ನಿಯಮ 3ರ ಪ್ರಕಾರ ಕನ್ನಡದಲ್ಲಿ ದಾಖಲೆಗಳನ್ನು ಸಲ್ಲಿಸಲು ಅವಕಾಶವಿದೆ. ಅಲ್ಲದೆ, ನ್ಯಾಯಮಂಡಳಿಯು ತನ್ನ ವಿವೇಚನೆಯ ಪ್ರಕಾರ ವಿಚಾರಣೆಯಲ್ಲಿ ಕನ್ನಡ ಬಳಕೆಗೆ ಅನುಮತಿ ನೀಡಬಹುದು. ಅಂತಿಮ ಆದೇಶ ಮಾತ್ರ ಇಂಗ್ಲಿಷ್‌ನಲ್ಲಿ ಇರಬೇಕು” ಎಂದು ವಾದಿಸಿದ್ದರು.

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಸರ್ಕಾರಿ ವಕೀಲರು “ನ್ಯಾಯಮಂಡಳಿಯಲ್ಲಿ ಅರ್ಜಿಗಳನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಬೇಕು” ಎಂದು ವಾದಿಸಿದ್ದರು.

ವಾದ-ಪ್ರತಿವಾದ ಆಲಿಸಿದ್ದ ಪೀಠವು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ ನಿಯಮಾವಳಿ, 1990ರ ನಿಯಮ 9(iii) ಅನ್ನು ಪರಿಶೀಲಿಸಿತು. ಈ ನಿಯಮದ ಪ್ರಕಾರ, ನ್ಯಾಯಮಂಡಳಿಗೆ ಸಲ್ಲಿಸುವ ಎಲ್ಲಾ ಕೋರಿಕೆ, ಪ್ರಮಾಣ ಪತ್ರ, ಒಡಂಬಡಿಕೆ (ಮೆಮೊರಾಡಂ), ದಾಖಲೆಗಳ ಪಟ್ಟಿಗಳು ಮತ್ತು ದಾಖಲೆಗಳನ್ನು ಇಂಗ್ಲಿಷ್ ಅಥವಾ ಕನ್ನಡದಲ್ಲಿ ಸಲ್ಲಿಸಬಹುದು.

“1990ರ ನಿಯಮಗಳ ನಿಯಮ 9(iii)ರ ಪ್ರಕಾರ ಅರ್ಜಿದಾರರು ಕನ್ನಡದಲ್ಲಿ ಅರ್ಜಿ ಸಲ್ಲಿಸಿರುವುದು ಸರಿಯಾಗಿದೆ” ಎಂದು ಪೀಠ ಅಭಿಪ್ರಾಯಪಟ್ಟಿದೆ.

1986ರ ನಿಯಮಗಳ ಜೊತೆಗೆ 1990ರ ನಿಯಮಾವಳಿಯನ್ನೂ ಪರಿಗಣಿಸಬೇಕಿತ್ತು. ಆದರೆ, ನ್ಯಾಯಮಂಡಳಿ ಈ ಮೂಲಭೂತ ಅಂಶವನ್ನು ಸರಿಯಾಗಿ ಪರಿಗಣಿಸದೆ ಆದೇಶ ಹೊರಡಿಸಿದೆ ಎಂದು ಹೈಕೋರ್ಟ್ ಹೇಳಿದೆ.

“ಇಂತಹ ಮೂಲಭೂತ ಅಂಶವನ್ನು ನ್ಯಾಯಮಂಡಳಿ ಸರಿಯಾಗಿ ಪರಿಗಣಿಸಿಲ್ಲ ಮತ್ತು ಪ್ರಶ್ನಿತ ಆದೇಶ ಹೊರಡಿಸುವಲ್ಲಿ ತಪ್ಪು ಮಾಡಿದೆ” ಎಂದು ಪೀಠ ತಿಳಿಸಿದೆ.

ಅಂತಿಮವಾಗಿ, ಕೆಎಟಿ 2025ರ ಜೂನ್ 5ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ ಹೈಕೋರ್ಟ್, ಅರ್ಜಿದಾರರ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿತು. ಮೂಲ ಅರ್ಜಿಯನ್ನು ಕಾನೂನಿನ ಪ್ರಕಾರ ವಿಲೇವಾರಿ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶಿಸಿದೆ.