ನ್ಯಾಯಾಲಯದ ಕಲಾಪಗಳ ಸಂಗ್ರಹ (ಆರ್ಕೈವ್) ಮಾಡಲಾದ ಆಡಿಯೊ-ವಿಡಿಯೊ ದಾಖಲೆಗಳ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಸ್ವಯಂಚಾಲಿತ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು, 2021ರ ನಿಯಮ 8 ಮತ್ತು 10ರ ಪ್ರಕಾರ ಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು ದಾಖಲೆಗಳ ಪ್ರತಿಗಳನ್ನು ಪಡೆಯುವ ಹಕ್ಕು ಅರ್ಜಿದಾರರಿಗೆ ಲಭ್ಯವಿಲ್ಲ ಎಂದು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರು ಸ್ಪಷ್ಟಪಡಿಸಿದ್ದಾರೆ.
“ನಿಯಮ 8 ಮತ್ತು ನಿಯಮ 10ರ ಸಂಯೋಜಿತ ಓದಿನಿಂದ, ನ್ಯಾಯಾಲಯವು ನಿರ್ದಿಷ್ಟವಾಗಿ ಆದೇಶಿಸದ ಹೊರತು, ಸದರಿ ರೆಕಾರ್ಡಿಂಗ್ಗಳ ಪ್ರತಿಗಳನ್ನು ಕೋರುವ ಯಾವುದೇ ಹಕ್ಕನ್ನು ಅರ್ಜಿದಾರರಿಗೆ ಈ ನಿಯಮಗಳು ಒದಗಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಾಲಯದ ಮೇಲ್ಮನವಿ ವಿಚಾರಣೆಯ ಸಂಗ್ರಹ ಮಾಡಲಾದ ದಾಖಲೆಗಳ ಪ್ರತಿಗಳನ್ನು ನೀಡಲು ನಿರಾಕರಿಸಿದ ಹೈಕೋರ್ಟ್ ಆಡಳಿತ ವಿಭಾಗದ ನಿರ್ಧಾರ ಪ್ರಶ್ನಿಸಿ 72 ವರ್ಷದ ಎ ಸತ್ಯನಾರಾಯಣ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರು 2021ರ ನಿಯಮಗಳ ನಿಯಮ 8(3)ರ ಅಡಿಯಲ್ಲಿ ಕಲಾಪಗಳ ರೆಕಾರ್ಡಿಂಗ್ಗಳ ಪ್ರತಿಗಳನ್ನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ನಿಯಮ 10(1)(ii) ಅನ್ನು ಆಧರಿಸಿ ಹೈಕೋರ್ಟ್ ಆಡಳಿತ ವಿಭಾಗವು ಅವರ ಮನವಿಯನ್ನು ತಿರಸ್ಕರಿಸಿತ್ತು.
ಸಂಗ್ರಹ ಮಾಡಲಾದ ದಾಖಲೆಗಳು ಪೀಠವು ನಿರ್ದಿಷ್ಟವಾಗಿ ನಿರ್ದೇಶಿಸದ ಹೊರತು ನ್ಯಾಯಾಲಯದ ಕಲಾಪಗಳ ಅಧಿಕೃತ ದಾಖಲೆಯ ಭಾಗವಾಗುವುದಿಲ್ಲ ಎಂದು ಆಡಳಿತ ವಿಭಾಗ ತಿಳಿಸಿತ್ತು. ಹೀಗಾಗಿ, ಅರ್ಜಿದಾರರು ಕೋರಿದ್ದ ದಾಖಲೆಗಳನ್ನು ಒದಗಿಸಲು ನಿರಾಕರಿಸಲಾಗಿತ್ತು.
ಈ ನಿರ್ಧಾರದಿಂದ ಅಸಮಾಧಾನಗೊಂಡ ಅರ್ಜಿದಾರರು, ಆಡಳಿತ ವಿಭಾಗದ ಸಂವಹನವನ್ನು ರದ್ದುಗೊಳಿಸಿ ಸಂಗ್ರಹ ದಾಖಲೆಗಳನ್ನು ಪಡೆಯಲು ಅವಕಾಶ ಅನುನತಿಸುವಂತೆ ಹೈಕೋರ್ಟ್ಗೆ ಮನವಿ ಮಾಡಿದ್ದರು.
ನಿಯಮ 8(3)ರ ಅಡಿಯಲ್ಲಿ ನ್ಯಾಯಾಲಯದ ವೆಬ್ಸೈಟ್ ಅಥವಾ ಇತರ ಡಿಜಿಟಲ್ ವೇದಿಕೆಗಳಲ್ಲಿ ಅಪ್ಲೋಡ್ ಮಾಡದ ರೆಕಾರ್ಡಿಂಗ್ಗಳ ಪ್ರತಿಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ, ಆಡಳಿತ ವಿಭಾಗದ ನಿರ್ಧಾರವು ಸಂವಿಧಾನದ 14ನೇ ವಿಧಿಯಡಿ ಖಾತರಿಪಡಿಸಿರುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದು ಅವರು ಆಕ್ಷೇಪಿಸಿದ್ದರು.
ಇದರ ಜೊತೆಗೆ, ನಿಯಮ 8(3)ರ ಅಡಿಯಲ್ಲಿ ಅಧಿಕಾರ ಚಲಾಯಿಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳು ಅಥವಾ ಪ್ರಮಾಣಿತ ಕಾರ್ಯವಿಧಾನಗಳನ್ನು ರೂಪಿಸಿ ಪ್ರಕಟಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಪ್ರಕರಣವನ್ನು ಪರಿಶೀಲಿಸಿದ ನ್ಯಾಯಾಲಯವು 2021ರ ನಿಯಮಗಳ ನಿಯಮ 10(1)(ii)ಯನ್ನು ಉಲ್ಲೇಖಿಸಿತು. ಅದರ ಪ್ರಕಾರ, “ಪೀಠವು ಬೇರೆ ರೀತಿಯಲ್ಲಿ ನಿರ್ದೇಶಿಸದ ಹೊರತು ಸಂಗ್ರಹ ದತ್ತಾಂಶವು ನ್ಯಾಯಾಲಯದ ಕಲಾಪಗಳ ಅಧಿಕೃತ ದಾಖಲೆಯಾಗುವುದಿಲ್ಲ” ಎಂದಿದೆ.
ಈ ನಿಯಮವನ್ನು ಆಧರಿಸಿದ ನ್ಯಾಯಾಲಯವು, ಸಂಗ್ರಹ ಮಾಡಲಾದ ರೆಕಾರ್ಡಿಂಗ್ಗಳ ಪ್ರತಿಗಳನ್ನು ಪಡೆಯಲು ಅರ್ಜಿದಾರರಿಗೆ ಜಾರಿಗೊಳಿಸಬಹುದಾದ ಯಾವುದೇ ಸ್ವತಂತ್ರ ಹಕ್ಕು ಇಲ್ಲ ಎಂದು ಹೇಳಿತು.
"ಅರ್ಜಿದಾರರಿಗೆ ಯಾವುದೇ ಹಕ್ಕು ಇಲ್ಲದಿರುವುದರಿಂದ, ಪ್ರತಿಗಳಿಗಾಗಿ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದನ್ನು ಅವರು ಪ್ರಶ್ನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ" ಎಂದು ನ್ಯಾಯಾಲಯ ತೀರ್ಪು ನೀಡಿದೆ.