ದಾವೆ

ಡಾ. ಕಫೀಲ್ ಖಾನ್ ಬಂಧನದ ಎನ್‌ಎಸ್‌ಎ ಆದೇಶ ಬದಿಗೆ ಸರಿಸಿ ಬಿಡುಗಡೆಗೆ ಆದೇಶಿಸಿದ ಅಲಹಾಬಾದ್ ಹೈಕೋರ್ಟ್

ಡಾ. ಕಫೀಲ್ ಖಾನ್ ಅವರ ಭಾಷಣದಲ್ಲಿ ಮೇಲ್ನೋಟಕ್ಕೆ ಕೂಡ ದ್ವೇಷ ಅಥವಾ ಹಿಂಸೆಗೆ ಅವಕಾಶ ಮಾಡಿಕೊಡುವ ಅಂಶಗಳು ಇಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿದೆ.

Bar & Bench

ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿ ಡಾ. ಕಫೀಲ್‌ ಖಾನ್‌ ಅವರ ಬಂಧನದ ಆದೇಶವನ್ನು ಬದಿಗೆ ಸರಿಸಿರುವ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಅವರ ಬಿಡುಗಡೆಗೆ ಆದೇಶಿಸುವ ಮೂಲಕ ಮಹತ್ವದ ಸಂದೇಶ ರವಾನಿಸಿದೆ.

ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥೂರ್ ಮತ್ತು ನ್ಯಾ. ಸುಮಿತ್ರಾ ದಯಾಳ್ ಸಿಂಗ್ ಅವರಿದ್ದ ವಿಭಾಗೀಯ ಪೀಠವು ಡಾ. ಖಾನ್ ಪರವಾಗಿ ಸಲ್ಲಿಸಲಾಗಿದ್ದ ರಿಟ್ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಹೀಗೆ ಹೇಳಿದೆ”.

“...ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) 1980ರ ಅಡಿ ಡಾ.ಕಫೀಲ್‌ ಖಾನ್‌ ಅವರ‌ ಬಂಧನವಾಗಲಿ, ಅದರ ವಿಸ್ತರಣೆಯಾಗಲಿ ಕಾನೂನಿನಡಿ ಮಾನ್ಯವಲ್ಲ ಎಂದು ಹೇಳಲು ನಮಗೆ ಯಾವುದೇ ಅಳುಕಿಲ್ಲ”.
ಅಲಹಾಬಾದ್ ಹೈಕೋರ್ಟ್‌

ಮುಂದುವರೆದು ನ್ಯಾಯಾಲಯವು ಹೀಗೆ ಹೇಳಿದೆ,

“ಮೇಲ್ಕಾಣಿಸಿದ ಕಾರಣಗಳಿಂದಾಗಿ ರಿಟ್ ಅರ್ಜಿ ಸಲ್ಲಿಕೆ ಅವಕಾಶ ಮಾಡಿಕೊಡಲಾಗಿದೆ. ಫೆಬ್ರುವರಿ 13, 2020ರಂದು ಅಲಿಗಢದ ಜಿಲ್ಲಾ ಮ್ಯಾಜಿಸ್ಟ್ರೇಟ್ ಬಂಧನ ಆದೇಶ ಹೊರಡಿಸಿದ್ದನ್ನು ಉತ್ತರ ಪ್ರದೇಶ ಸರ್ಕಾರ ಖಚಿತಪಡಿಸಿದ್ದು, ಆದೇಶವನ್ನು ಬದಿಗೆ ಸರಿಸಲಾಗಿದೆ. ಬಂಧಿತ ಡಾ. ಕಫೀಲ್ ಖಾನ್ ಅವರ ಬಂಧನ ಅವಧಿ ವಿಸ್ತರಣೆಯೂ ಅಕ್ರಮ ಎಂದು ಘೋಷಿಸಲಾಗಿದೆ. ಹೇಬಿಯಿಸ್ ಕಾರ್ಪಸ್ ರೂಪದಲ್ಲಿ ರಿಟ್ ಅನ್ನು ರಾಜ್ಯ ಸರ್ಕಾರದ ಬಂಧನದಲ್ಲಿರುವ ಡಾ. ಕಫೀಲ್ ಖಾನ್ ಅವರ ಬಿಡುಗಡೆಗೆ ನೀಡಲಾಗಿದೆ”.

ಡಾ. ಕಫೀಲ್ ಖಾನ್ ಬಿಡುಗಡೆಗೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನು 15 ದಿನಗಳೊಳಗೆ ಪೂರ್ಣಗೊಳಿಸುವಂತೆ ಆಗಸ್ಟ್ 11ರಂದು ಅಲಹಾಬಾದ್ ಹೈಕೋರ್ಟ್‌ಗೆ ಸುಪ್ರೀ ಕೋರ್ಟ್ ಸೂಚಿಸಿತ್ತು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಹೋರಾಟದ ಭಾಗವಾಗಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಡಾ. ಕಫೀಲ್ ಖಾನ್ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎಂಬ ಆರೋಪದ ಮೇಲೆ ಬಂಧಿಸಿ ಅವರನ್ನು ಮಥುರಾ ಜೈಲಿನಲ್ಲಿ ಇರಿಸಲಾಗಿದೆ.

ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸವನ್ನು ಸುಪ್ರೀಂ ಕೋರ್ಟ್ ಮಾಡಿದೆ. ಸದರಿ ಪ್ರಕರಣದಲ್ಲಿ ಡಾ. ಕಫೀಲ್ ಖಾನ್ ಅವರ ವೈಯಕ್ತಿಕ ಸ್ವಾತಂತ್ರ್ಯ ಪ್ರಮುಖವಾಗಿರುವುದರಿಂದ ಅದನ್ನು ಆದಷ್ಟು ಶೀಘ್ರ ತೀರ್ಮಾನಿಸುವಂತೆ ಅಲಹಾಬಾದ್ ನ್ಯಾಯಾಲಯಕ್ಕೆ ಸೂಚಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.

"ಡಾ. ಕಫೀಲ್ ಖಾನ್ ಬಿಡುಗಡೆಗೆ ಸೂಚಿಸಿರುವ ಅಲಹಾಬಾದ್ ನ್ಯಾಯಾಲಯವು, ಡಾ. ಖಾನ್ ಅವರ ಭಾಷಣದಲ್ಲಿ ಮೇಲ್ನೋಟಕ್ಕೆ ಕೂಡ ದ್ವೇಷ ಅಥವಾ ಹಿಂಸೆಗೆ ಅವಕಾಶ ಮಾಡಿಕೊಡುವ ಅಂಶಗಳಿಲ್ಲ. ಅಲಿಗಢ ನಗರದ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವ ವಿಚಾರವನ್ನೂ ಅವರು ಪ್ರಸ್ತಾಪಿಸಿಲ್ಲ. ತಮ್ಮ ಭಾಷಣದಲ್ಲಿ ಅವರು ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಗಾಗಿ ಒಗ್ಗೂಡಲು ಜನರಿಗೆ ಕರೆ ನೀಡಿದ್ದಾರೆ. ಡಾ. ಖಾನ್ ಬಳಸಿರುವ ಭಾಷೆಯಲ್ಲಿ ಯಾವುದೇ ತೆರನಾದ ಹಿಂಸೆಯ ವಿಚಾರ ಪ್ರಸ್ತಾಪವಾಗಿಲ್ಲ” ಎಂದು ಹೇಳಿದೆ.

ಡಾ. ಖಾನ್ ಅವರಿಗೆ ತಮ್ಮ ಬಂಧನ ವಿರುದ್ಧ ಸೂಕ್ತ ಮನವಿ ಸಲ್ಲಿಸಲು ಅಗತ್ಯ ಅವಕಾಶ ಮಾಡಿಕೊಟ್ಟಿಲ್ಲ. ಡಾ. ಖಾನ್ ಅವರಿಗೆ ತಮ್ಮನ್ನು ಬಂಧಿಸಲು ಕಾರಣವಾದ ಭಾಷಣದ ಲಿಪ್ಯಂತರವನ್ನಾಗಲಿ ಅಥವಾ ಅವರ ಭಾಷಣದ ಸಿ ಡಿ ಆಲಿಸಲು ಅಗತ್ಯವಾದ ಸಾಧನವನ್ನಾಗಲಿ ನೀಡಿಲ್ಲ ಎನ್ನುವ ಅಂಶಗಳನ್ನು ನ್ಯಾಯಾಲಯವು ಗಮನಿಸಿತು.

“ಹೀಗೆ ಸಾಮಗ್ರಿ ಪೂರೈಸದಿರುವುದೂ ಸಹ ಸಂವಿಧಾನದ ಪರಿಚ್ಛೇದ 22ರ ಅಡಿ ಪವಿತ್ರವಾದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ಈ ವಿಚಾರದ ಆಧಾರದಲ್ಲಿಯೂ ಸಹ ಡಾ. ಕಫೀಲ್ ಖಾನ್ ಬಂಧನ ಬದಿಗೆ ಸರಿಸಲು ಅರ್ಹವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಡಾ. ಕಫೀಲ್ ಖಾನ್ ಅವರ ಬಂಧನ ವಿಸ್ತರಣೆಗೆ ಸಂಬಂಧಿಸಿದ ಆದೇಶದ ಪ್ರತಿಯನ್ನೂ ಅವರಿಗೆ ನೀಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಡಾ. ಖಾನ್ ಬಂಧನ ಹಾಗೂ ಬಂಧನದ ವಿಸ್ತರಣೆಯು ಕಾನೂನಿಗೆ ವಿರುದ್ಧವಾಗಿವೆ ಎಂದು ಕೋರ್ಟ್ ಹೇಳಿದೆ.

ಡಾ. ಖಾನ್ ಅವರನ್ನು ಎನ್ಎಸ್ಎ ಕಾಯ್ದೆಯಡಿ ಬಂಧಿಸಿರುವುದನ್ನು ಅವರ ತಾಯಿ ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರಲ್ಲದೆ, ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಹಿರಿಯ ವಕೀಲ ದಿಲೀಪ್ ಕುಮಾರ್ ಅವರು ಡಾ. ಕಫೀಲ್ ಖಾನ್ ಅವರ ತಾಯಿ ಪರವಾಗಿ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಮನೀಷ್ ಗೋಯಲ್ ಅವರು ಉತ್ತರ ಪ್ರದೇಶ ಸರ್ಕಾರವನ್ನು ಪ್ರಕರಣದಲ್ಲಿ ಪ್ರತಿನಿಧಿಸಿದ್ದರು.