ದಾವೆ

ಬೆಂಗಳೂರು ಗಲಭೆ: ಆಸ್ತಿ ಹಾನಿ ಪ್ರಮಾಣ ಅರಿಯಲು ‘ಕ್ಲೇಮ್ಸ್‌ ಕಮಿಷನರ್’ ನೇಮಿಸುವಂತೆ ಸರ್ಕಾರದಿಂದ ಹೈಕೋರ್ಟ್‌ ಗೆ ಮನವಿ

Bar & Bench

ಇದೇ ಆಗಸ್ಟ್‌ 11ರಂದು ನಡೆದ ಬೆಂಗಳೂರು ಗಲಭೆ ವೇಳೆ ಉಂಟಾದ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ಹಾನಿ ಪ್ರಮಾಣವನ್ನು ತನಿಖೆ ನಡೆಸಿ ಅಂದಾಜು ಮಾಡಲು ‘ಪರಿಹಾರ ಆಯುಕ್ತ’ರನ್ನು ನೇಮಿಸುವಂತೆ ಕೋರಿ ರಾಜ್ಯ ಸರ್ಕಾರವು ಹೈಕೋರ್ಟ್‌ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದೆ.

ಅಲ್ಲದೆ, ಗುಂಪು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿತು ಹಾಗೂ ಡಿ ಜೆ ಹಳ್ಳಿ ಮತ್ತು ಕೆ ಜೆ ಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಮೇಲೆ ಹಲ್ಲೆಯನ್ನು ಮಾಡಿತು. ಸುಮಾರು 80ಕ್ಕೂ ಹೆಚ್ಚು ಸಿಬ್ಬಂದಿಗಳ ಮೇಲೆ ಕಲ್ಲು ತೂರುವ ಮೂಲಕ ಹಾಗೂ ಮಾರಣಾಂತಿಕ ಆಯುಧಗಳಿಂದ ದಾಳಿ ನಡೆಸಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮುಂದುವರೆದು,:

33 ಸರ್ಕಾರಿ ವಾಹನಗಳು, 109 ಖಾಸಗಿ ವಾಹನಗಳು ಸಂಪೂರ್ಣವಾಗಿ ಆಹುತಿಯಾಗಿವೆ ಇಲ್ಲವೇ ಗಂಭೀರವಾಗಿ ಜಖಂಗೊಂಡಿವೆ. ಡಿ ಜೆ ಹಳ್ಳಿ ಹಾಗೂ ಕೆ ಜೆ ಹಳ್ಳಿ ಪೊಲೀಸ್‌ ಠಾಣೆಗಳಿಗೆ ಹಾಗೂ ಶಾಸಕರ ಮನೆಗೆ ಗಂಭೀರ ಹಾನಿಯಾಗಿದೆ. ಅಲ್ಲದೆ, 8 ಕಟ್ಟಡಗಳಿಗೂ ಸಹ ಈ ವಿಧ್ವಂಸಕ ಕೃತ್ಯದಿಂದಾಗಿ, ಬೆಂಕಿ ಹಚ್ಚಿದ್ದರಿಂದಾಗಿ ಹಾನಿಯಾಗಿದೆ. ಪೊಲೀಸರು ಬಳಸುವ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಶಮಾಡಲಾಗಿದೆ
ಸರ್ಕಾರ ಸಲ್ಲಿಸಿರುವ ಪಿಐಎಲ್ ನಲ್ಲಿನ ಹೇಳಿಕೆ

ಈವರೆಗೆ ಗಲಭೆಯ ಸಂಬಂಧ 64 ಕ್ರಿಮಿನಲ್‌ ಪ್ರಕರಣಗಳನ್ನು ದಾಖಲಿಸಲಾಗಿದ್ದು, ತನಿಖೆಯು ನಡೆದಿದೆ. 270 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ.

ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ನಾಶದ ಕುರಿತ ಪ್ರಕರಣದಲ್ಲಿ ಗಲಭೆ, ದೊಂಬಿಯಿಂದ ಉಂಟಾಗುವ ಆಸ್ತಿಪಾಸ್ತಿ ಹಾನಿಯ ಕುರಿತ ತನಿಖೆ ಹಾಗೂ ಪರಿಹಾರದ ಕುರಿತು ಸುಪ್ರೀಂ ಕೋರ್ಟ್‌ ವಿವರವಾದ ಮಾರ್ಗದರ್ಶಿ ನಿಯಮಾವಳಿ ನೀಡಿದೆ. ಇದೇ ತೀರ್ಪಿನಲ್ಲಿ, ಹೈಕೋರ್ಟ್‌ ಈ ಸಂಬಂಧ ಹಾಲಿ ಅಥವಾ ನಿವೃತ್ತ ಹೈಕೋರ್ಟ್‌ ನ್ಯಾಯಾಧೀಶರು/ಜಿಲ್ಲಾ ನ್ಯಾಯಾಧೀಶರನ್ನು ಪರಿಹಾರ ಆಯುಕ್ತರನ್ನಾಗಿ (ಕ್ಲೇಮ್ಸ್ ಕಮಿಷನರ್‌) ನೇಮಿಸಬಹುದು ಎಂದಿದೆ. ಆ ಮೂಲಕ ಆಸ್ತಿಪಾಸ್ತಿ ನಷ್ಟದ ಕುರಿತು ಅಂದಾಜು ಮಾಡುವುದು, ತನಿಖೆ ನಡೆಸುವುದು ಸಾಧ್ಯವಾಗಿಸಿದೆ.

ಹಾಗಾಗಿ, ನ್ಯಾಯಾಲಯವು ಸ್ವಯಂ ಪ್ರೇರಣೆಯಿಂದ ‘ಪರಿಹಾರ ಆಯುಕ್ತ’ರನ್ನು ನೇಮಿಸುವಂತೆ ರಾಜ್ಯ ಸರ್ಕಾರವು ತನ್ನ ಅರ್ಜಿಯಲ್ಲಿ ಹೈಕೋರ್ಟ್‌ ಅನ್ನು ಒತ್ತಾಯಿಸಿದೆ. ಆ ಮೂಲಕ ಸುಪ್ರೀಂ ಕೋರ್ಟ್‌ ಮಾರ್ಗದರ್ಶಿ ಸೂಚನೆಗಳ ಅನ್ವಯ ಆಸ್ತಿಪಾಸ್ತಿ ಹಾನಿಯ ಕುರಿತು ತನಿಖೆ ನಡೆಸಿ, ಅಂದಾಜು ಹಾನಿಯನ್ನು ದಾಖಲಿಸಿ, ಪರಿಹಾರ ನಿರ್ಧರಿಸಬೇಕು ಎಂದು ಕೋರಿದೆ.