ರಾಷ್ಟ್ರೀಯ ಕಾನೂನು ಶಾಲೆ ಭಾರತೀಯ ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಎಸ್‌ಐಯು) ಸ್ಥಳೀಯರಿಗೆ 25% ಪ್ರಾತಿನಿಧ್ಯ ಕಲ್ಪಿಸಿರುವುದರ ವಿರುದ್ಧ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಕರ್ನಾಟಕ ಹೈಕೋರ್ಟಿನ ಮುಂದೆ ಅರ್ಜಿಯನ್ನು ಸಲ್ಲಿಸಿದೆ, (ಬಾರ್ ಕೌನ್ಸಿಲ್ ಆಫ್ ಇಂಡಿಯಾ Vs ಕರ್ನಾಟಕ ಸರ್ಕಾರ).
ಈ ಮುಂಚೆ ಹೈಕೋರ್ಟ್ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ) ಆಕಾಂಕ್ಷಿಯೊಬ್ಬರು ಸಲ್ಲಿಸಿದ್ದ ಇಂತಹದ್ದೇ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿತ್ತು.
ವಕೀಲ ಶ್ರೀಧರ ಪ್ರಭು ಅವರ ಮೂಲಕ ಬಿಸಿಐ ಸಲ್ಲಿಸಿರುವ ಈ ಅರ್ಜಿಯಲ್ಲಿ, ಕರ್ನಾಟಕ ರಾಜ್ಯ ಸರ್ಕಾರವು ಸಂಬಂಧಪಟ್ಟವರೊಂದಿಗೆ ಮುಂಚಿತವಾಗಿ ಚರ್ಚಿಸದೆ, ಕರ್ನಾಟಕ ಸರ್ಕಾರವು ತಾನಾಗಿಯೂ ಮುಂದೆ ಹೋಗಿ ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ (ತಿದ್ದುಪಡಿ) ನಿಯಮ, 2020 ಅನ್ನು ರೂಪಿಸಿದೆ ಎಂದಿದೆ.
ಈ ತಿದ್ದುಪಡಿಯ ಅನ್ವಯ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ, 2020ಕ್ಕೂ (ಸಿಎಲ್‌ಎಟಿ 2020) ಮುಂಚಿತವಾಗಿ ಹತ್ತು ವರ್ಷಗಳಿಂದ ಕರ್ನಾಟಕದಲ್ಲಿ ವಿದ್ಯಾಭ್ಯಾಸ ನಡೆಸಿರುವವರಿಗೆ ಸಮತಲ ಮೀಸಲಾತಿ (ಹಾರಿಜಾಂಟಲ್ ರಿಸರ್ವೇಷನ್) ನೀಡಿದೆ. ಆದರೆ, ಇದನ್ನು ವಿರೋಧಿಸಿರುವ ಬಿಸಿಐ ಈ ತಿದ್ದುಪಡಿಯು ಎನ್‌ಎಲ್‌ಎಸ್‌ಐಯುನ ಶಾಸನಾತ್ಮಕ ಕರ್ತವ್ಯಗಳಲ್ಲಿನ ಹಸ್ತಕ್ಷೇಪ ಮತ್ತು ಉಲ್ಲಂಘನೆಯಾಗಿದ್ದು, ಅಕ್ರಮ ಮತ್ತು ಅಸಮರ್ಥನೀಯವಾಗಿದೆ ಎಂದಿದೆ.
ಎನ್‌ಎಲ್‌ಎಸ್‌ಐಯು ದೇಶದಲ್ಲಿಯೇ ಕಾನೂನು ಶಿಕ್ಷಣಕ್ಕಾಗಿ ಮಾದರಿ ವಿಶ್ವವಿದ್ಯಾಲಯವೆಂದು ಪರಿಗಣಿಸಲ್ಪಡುತ್ತದೆ ಎಂದಿರುವ ಬಿಸಿಐ, ತನ್ನ ಅರ್ಜಿಯಲ್ಲಿ ಹೀಗೆ ಹೇಳಿದೆ:
“ಎನ್‌ಎಲ್‌ಎಸ್‌ಐಯುನ ರಾಷ್ಟ್ರೀಯ ಸ್ವರೂಪವು ಅದರ ಸಂವಿಧಾನಕ್ಕೆ ಪೂರಕವಾಗಿದೆ. ಒಮ್ಮೆ ಈ ರಾಷ್ಟ್ರೀಯ ಸ್ವರೂಪಕ್ಕೆ ಧಕ್ಕೆ ಬಂದರೆ, ಎರಡನೇ ಪ್ರತಿವಾದಿಯನ್ನು (ಎನ್‌ಎಲ್‌ಎಸ್‌ಯುಐ) ಸ್ಥಾಪಿಸಿರುವ ಮೂಲ ಉದ್ದೇಶಕ್ಕೇ ಸೋಲಾಗಲಿದೆ.”ಬಿಸಿಐ ಅರ್ಜಿಯಲ್ಲಿನ ಮನವಿ
ಮುಂದುವರೆದು ಅರ್ಜಿಯಲ್ಲಿ, ವಕೀಲರ ಕಾಯಿದೆ, 1961ರ ಅಡಿ ಬಿಸಿಐನ ಶಾಸನಾತ್ಮಕ ಕಾರ್ಯಗಳ ಜೀವಿತ ಪ್ರತಿರೂಪದಂತೆ ಎನ್‌ಎಲ್‌ಎಸ್ಯುಐ ಪ್ರಕಟವಾಗಿದೆ. ಹಾಗಾಗಿ, ರಾಜ್ಯ ಸರ್ಕಾರದ ತಿದ್ದುಪಡಿಯು ಬಿಸಿಐನ ಶಾಸನಾತ್ಮಕ ಕಾರ್ಯದ ಮೇಲಿನ ಹಸ್ತಕ್ಷೇಪವೂ ಆಗಿದೆ ಎಂದು ಹೇಳಲಾಗಿದೆ.
ತಿದ್ದುಪಡಿಯ ನಂತರ ಬಿಎ ಎಲ್ ಎಲ್ ಬಿ (ಆನರ್ಸ್) ಮತ್ತು ಎಲ್‌ಎಲ್ಎಂ ಪದವಿಗಳಿಗೆ ಆಗಸ್ಟ್ 4ರಂದು ಎನ್‌ಎಲ್‌ಎಸ್‌ಐಯು ಹೊರಡಿಸಿದ್ದ ಪರಿಷ್ಕೃತ ಸೀಟು ಹಂಚಿಕೆ ವಿವರಗಳ ಪ್ರಕಟಣೆಯನ್ನು ಸಹ ರದ್ದು ಪಡಿಸುವಂತೆ ಬಿಸಿಐ ಅರ್ಜಿಯಲ್ಲಿ ಕೋರಿದೆ.
ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಆಗಸ್ಟ್ ೧೩ರಂದು ಕೈಗೆತ್ತಿಕೊಳ್ಳುವ ನಿರೀಕ್ಷೆ ಇದೆ.