ದಾವೆ

ಹೊಗೆಯಲ್ಲಿ ಮರೆಯಾಯಿತೇ ಕಲಾಪದ ಶಿಷ್ಟಾಚಾರ? ವಿಚಾರಣೆ ವೇಳೆ ಗುಟ್ಕಾ ಜಗಿದ ವಕೀಲನ ಕಿವಿಹಿಂಡಿದ ಸುಪ್ರೀಂ ಕೋರ್ಟ್‌

ಅತ್ತ ಹಿರಿಯ ವಕೀಲ ರಾಜೀವ್‌ ಧವನ್‌ ಅವರು ವರ್ಚುವಲ್‌ ವಿಚಾರಣೆ ವೇಳೆ ಹುಕ್ಕಾ ಸೇದಿ ನ್ಯಾಯಮೂರ್ತಿಗಳಿಂದ ಬುದ್ಧಿವಾದ ಹೇಳಿಸಿಕೊಂಡ ಬೆನ್ನಿಗೇ ವಕೀಲರೊಬ್ಬರು ಗುಟ್ಕಾ ಜಗಿದು ನ್ಯಾಯಮೂರ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Bar & Bench

ಕೋವಿಡ್‌-19 ಸಂಕಷ್ಟದಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನ್ಯಾಯಿಕ ಪ್ರಕ್ರಿಯೆಗಳಿಗೆ ತೊಡಕಾಗದೆ ಇರಲಿ ಎಂದು ಅಂತರ್ಜಾಲ ಆಧರಿತ ವಿಡಿಯೋ ವಿಚಾರಣೆಯನ್ನು (ವರ್ಚುವಲ್‌ ವಿಚಾರಣೆ) ನ್ಯಾಯಾಂಗವು ನಡೆಸುತ್ತಿರುವುದು ತಿಳಿದಿರುವ ವಿಷಯ. ಆದರೆ, ಈ ವರ್ಚುವಲ್‌ ವಿಚಾರಣೆ ವೇಳೆ ನ್ಯಾಯಾಂಗ ಕಲಾಪದ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಪದೇಪದೇ ಕಂಡುಬರುತ್ತಿವೆ.

ರಾಜಸ್ಥಾನದ ಆರು ಮಂದಿ ಬಿಎಸ್‌ಪಿ ಶಾಸಕರು ಕಾಂಗ್ರೆಸ್‌ ನೊಂದಿಗೆ ವಿಲೀನಗೊಳ್ಳಲು ಅಲ್ಲಿನ ವಿಧಾನಸಭಾಧ್ಯಕ್ಷರು ಅನುವು ಮಾಡಿರುವ ಆದೇಶದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ರಾಜಸ್ಥಾನದ ಹೈಕೋರ್ಟ್‌ ಇದೇ ಆಗಸ್ಟ್‌ 11ರಂದು ವಿಚಾರಣೆ ನಡೆಸುತ್ತಿದ್ದ ವೇಳೆ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌ ಅವರು ಕಾಗದವೊಂದನ್ನು ಅರೆಬರೆ ಮರೆಮಾಡಿಕೊಂಡು ಹುಕ್ಕಾ ಸೇದಿದ್ದರು. ಈ ಪ್ರಕರಣ ಇನ್ನೂ ಮಾಸಿಲ್ಲ, ಆಗಲೇ, ಇಂತಹದ್ದೇ ಮತ್ತೊಂದು ಪ್ರಕರಣ ಘಟಿಸಿದೆ.

ಆಗಸ್ಟ್‌ 11ರಂದು ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ವಾದ ಮಂಡನೆ ಮಾಡುತ್ತಿದ್ದ ಸಂದರ್ಭದಲ್ಲಿ ಮತ್ತೊಬ್ಬ ಹಿರಿಯ ನ್ಯಾಯವಾದಿ ರಾಜೀವ್‌ ಧವನ್‌ ಅವರು ಕಾಗದವೊಂದನ್ನು ಮರೆ ಮಾಡಿಕೊಂಡು ಹುಕ್ಕಾ ಸೇದಿದ್ದರು. ಆದರೆ ಅವರ ಧೂಮಲೀಲೆಯನ್ನು ಕಾಗದವು ಅಡಗಿಸಿಡಲಾಗಿರಲಿಲ್ಲ. ಹೊಗೆ ಕಾಗದದಾಚೆಗೂ ವ್ಯಾಪಿಸಿದರೆ, ಕಾಗದ ಸರಿಸಿದ ನಂತರವೂ ಹುಕ್ಕಾ ಧವನ್ ಅವರ ಕೈಯಲ್ಲಿತ್ತು.

ಇತ್ತ ಗುರುವಾರ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರ ನೇತೃತ್ವದ ಪೀಠವು ವರ್ಚುವಲ್‌ ವಿಚಾರಣೆ ನಡೆಸುತ್ತಿದ್ದ ವೇಳೆ ವಕೀಲರೊಬ್ಬರು ಗುಟ್ಕಾ ಜಗಿಯುತ್ತಿದ್ದುದು ಕಂಡುಬಂದಿದೆ. ಇದನ್ನು ಗಮನಿಸಿದ ನ್ಯಾಯಮೂರ್ತಿ ಮಿಶ್ರಾ ಅವರು ಕೂಡಲೇ ಆ ವಕೀಲರನ್ನು ತರಾಟೆಗೆ ತೆಗೆದುಕೊಂಡರು. ಗಲಿಬಿಲಿಗೊಂಡ ಆ ವಕೀಲ ಕ್ಷೀಣ ದನಿಯಲ್ಲಿ “ಸಾರಿ” ಎಂದು ಕ್ಷಮೆಯಾಚಿಸಿದರು.

ವಕೀಲರ ಈ ಅಶಿಷ್ಟ ವರ್ತನೆಯ ಬಗ್ಗೆ ಎಚ್ಚರಿಕೆ ನೀಡಿದ ನ್ಯಾಯಮೂರ್ತಿ ಮಿಶ್ರಾ ಅವರು ಹೀಗೆಂದರು:

“ಏನು ಮಾಡುತ್ತಿದ್ದೀರಿ? ನೀವು ಮಾಡಿದ್ದನ್ನು ಗಮನಿಸಿದೆವು. ಸಾರಿ ಹೇಳಬೇಡಿ. ಮುಂದೆ ಇದನ್ನುನೀವು ಪುನರಾವರ್ತಿಸದಂತೆ ನೋಡಿಕೊಳ್ಳಿ. ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ”
ನ್ಯಾಯಮೂರ್ತಿ ಅರುಣ್‌ ಮಿಶ್ರಾ

ವರ್ಚುವಲ್‌ ವಿಚಾರಣೆ ವೇಳೆ ವಕೀಲರು ಶಿಷ್ಟಾಚಾರ ಉಲ್ಲಂಘನೆ ಮಾಡುವ ಅನೇಕ ಪ್ರಕರಣಗಳು ಸಾಕಷ್ಟು ಬಾರಿ ವರದಿಯಾಗಿವೆ. ಭೌತಿಕ ವಿಚಾರಣೆ ವೇಳೆ ಪಾಲಿಸುವಂತಹ ಶಿಷ್ಟಾಚಾರಗಳನ್ನು ಪಾಲಿಸದೆ ಹೆಚ್ಚೆಚ್ಚು ಅನೌಪಚಾರಿಕವಾಗಿ ವಕೀಲರು ವರ್ಚುವಲ್‌ ವಿಚಾರಣೆ ವೇಳೆ ನಡೆದುಕೊಂಡಿರುವ ಪ್ರಕರಣಗಳ ಸಂಖ್ಯೆ ಹೆಚ್ಚೇ ಇದೆ. ವಿಚಾರಣೆ ಸಂದರ್ಭದಲ್ಲಿಯೇ ಗಬಗಬನೇ ತಿಂಡಿ ತಿನ್ನುವುದು, ಊಟ ಮಾಡುವಂಥ ಪ್ರಕರಣಗಳು ಒಂದೆಡೆಯಾದರೆ, ಸಂಪೂರ್ಣ ಶಿಷ್ಟಾಚಾರವನ್ನೇ ಮರೆತು ಬನಿಯನ್‌ ನಲ್ಲಿ ವರ್ಚುವಲ್‌ ವಿಚಾರಣೆಗೆ ಹಾಜರಾದ ವಕೀಲರೂ ಇದ್ದಾರೆ. ಇಂತಹ ಎರಡು ಪ್ರಕರಣಗಳು ರಾಜಸ್ಥಾನದಲ್ಲಿ ಘಟಿಸಿದ್ದವು.

ರಾಜಸ್ಥಾನದ ನ್ಯಾಯಾಲಯವಂತೂ ಒಮ್ಮೆ, ಓರ್ವ ವಕೀಲರು ಜಾಮೀನು ಪ್ರಕರಣದ ವಿಚಾರಣೆ ವೇಳೆ ಬನಿಯನ್‌ ನಲ್ಲಿಯೇ ತಮ್ಮ ಕಕ್ಷಿದಾರರ ಪರ ವಾದ ಮುಂಡಿಸಲು ಮುಂದಾದಾಗ ಕೆಂಡಾಮಂಡಲವಾಗಿ ವಿಚಾರಣೆಯನ್ನೇ ಮುಂದೂಡಿತ್ತು.