ದಾವೆ

ಚುನಾವಣೆ ಮುಂದೂಡಲು ಕೋವಿಡ್ ಸಮರ್ಥನೆ ಸಲ್ಲ; ಬಿಹಾರ ಚುನಾವಣೆ ಮುಂದೂಡಿಕೆ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Bar & Bench

ಕೋವಿಡ್ ಸಾಂಕ್ರಾಮಿಕತೆ ಹಾಗೂ ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿತು.

ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಷಾ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯು ಅಕಾಲಿಕ ಮತ್ತು ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿತು.

ಚುನಾವಣೆ ನಡೆಸುವ ಕುರಿತು ಇನ್ನೂ ಅಧಿಸೂಚನೆಯೇ ಪ್ರಕಟವಾಗಿಲ್ಲ. ಹೀಗಿರುವಾಗ ಮನವಿಯನ್ನು ಪುರಸ್ಕರಿಸುವುದು ಹೇಗೆ ಎಂದು ನ್ಯಾಯಾಲಯವು ಪ್ರಶ್ನಿಸಿತು. ಕೋವಿಡ್ ಸಾಂಕ್ರಾಮಿಕತೆ ನೆಪವೊಡ್ಡಿ ಚುನಾವಣೆಯನ್ನು ಮುಂದೂಡಲಾಗದು. ಚುನಾವಣೆ ದಿನಾಂಕ ನಿಗದಿ ಮಾಡುವಾಗ ಭಾರತೀಯ ಚುನಾವಣಾ ಆಯೋಗವು ಪರಿಸ್ಥಿತಿ ಅವಲೋಕಿಸಿ ನಿರ್ಧರಿಸುತ್ತದೆ ಎಂದು ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿ ಅಶೋಕ್ ಭೂಷಣ್ ಹೀಗೆ ಹೇಳಿದರು:

"ಚುನಾವಣೆ ಮುಂದೂಡಲು ಕೋವಿಡ್ ನೆಪವಾಗಬಾರದು. ವಿಶೇಷವಾಗಿ ಚುನಾವಣೆ ನಡೆಸುವ ಕುರಿತು ಇನ್ನೂ ಅಧಿಸೂಚನೆ ಪ್ರಕಟಿಸಲಾಗಿಲ್ಲ. ತಪ್ಪು ಗ್ರಹಿಕೆಯಿಂದ ಪರಿಚ್ಛೇದ 32ರ ಅಡಿ ಸಲ್ಲಿಸಲಾದ ಅರ್ಜಿಯಾಗಿದ್ದು, ನಾವು ಇದರ ವಿಚಾರಣೆ ನಡೆಸುವುದಿಲ್ಲ”.

ವಿವಿಧ ರಾಷ್ಟ್ರಗಳಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಪ್ರಮುಖವಾದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಮುಂದೂಡಿರುವುದು ಅಥವಾ ರದ್ದುಗೊಳಿಸಿರುವ ಕುರಿತು ತೆಗೆದುಕೊಂಡ ಕ್ರಮಗಳ ಬಗ್ಗೆ ಅರ್ಜಿದಾರರ ಪರ ವಕೀಲರು ತಿಳಿಸಲು ಮುಂದಾದಾಗ, ಇಸಿಐ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕ್ರಮಕೈಗೊಳ್ಳಲಿದೆ ಎಂದು ನ್ಯಾಯಾಲಯವು ಹೇಳಿತು.

“ಚುನಾವಣಾ ಆಯೋಗವು ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದ್ದು, ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಿದೆ. ಅವರು ಈ ಎಲ್ಲವನ್ನೂ ಪರಿಗಣಿಸುವುದಿಲ್ಲ ಎಂದು ನೀವೇಕೆ ಯೋಚಿಸುತ್ತೀರಿ?” ಎಂದು ನ್ಯಾ. ಎಂ ಆರ್ ಷಾ ಪ್ರಶ್ನಿಸಿದರು.

ಆನಂತರ ಅರ್ಜಿ ಹಿಂಪಡೆಯಲು ಅರ್ಜಿದಾರರಿಗೆ ನ್ಯಾಯಾಲಯ ಅವಕಾಶ ಮಾಡಿಕೊಟ್ಟಿತು.

ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿಯಿಂದ ಬಿಹಾರವು ಅತ್ಯಂತ ಕ್ಲಿಷ್ಟಕರವಾದ ಸನ್ನಿವೇಶಕ್ಕೆ ಎದುರಾಗಿದೆ ಎಂದು ಅರ್ಜಿದಾರರ ಪರ ವಕೀಲ ಶಾಂತನು ಸಾಗರ್ ವಿವರಿಸಿದ್ದಾರೆ. ಮುಂದುವರೆದು, ಸಂವಿಧಾನದತ್ತವಾಗಿ ಪರಿಚ್ಛೇದ 324ರ ಅಡಿ ತನಗೆ ದೊರೆತಿರುವ ಅಧಿಕಾರವನ್ನು ಇಸಿಐ ಚಲಾಯಿಸಲಿದೆಯೆ ಅಥವಾ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಇಸಿಐ ಶಿಫಾರಸು ಆಧರಿಸಿ ಚುನಾವಣೆ ನಡೆಸಲು ನಿರ್ಧರಿಸಲಿದ್ದಾರೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದರು.