ದಾವೆ

ಕೋರ್ಟ್‌ ಸಿಬ್ಬಂದಿಗಳು ಕ್ವಾರಂಟೈನ್‌ ಗೆ ಒಳಗಾದ ಅವಧಿಯನ್ನು ‘ಕರ್ತವ್ಯದ ಮೇಲೆ’ ಎಂದು ಪರಿಗಣಿಸಿ: ಕರ್ನಾಟಕ ಹೈಕೋರ್ಟ್‌

ರಾಜ್ಯದ ಎಲ್ಲ ಕೋರ್ಟ್‌ ಗಳಲ್ಲಿ ಸಿಬ್ಬಂದಿಗಳು ಕ್ವಾರಂಟೈನ್‌ ಗೆ ಒಳಗಾದ ಅವಧಿಯನ್ನು ‘ಕರ್ತವ್ಯದ ಮೇಲೆ’ ಎಂದು ಪರಿಗಣಿಸಲು ಕರ್ನಾಟಕ ಹೈಕೋರ್ಟ್‌ ಸೂಚನೆ ನೀಡಿ ಸೋಮವಾರ ಸುತ್ತೋಲೆಯೊಂದನ್ನು ಹೊರಡಿಸಿದೆ.

Bar & Bench

ಪ್ರಮುಖ ನಿರ್ಧಾರವೊಂದರಲ್ಲಿ ಕರ್ನಾಟಕ ಹೈಕೋರ್ಟ್‌ ತನ್ನ ಸಿಬ್ಬಂದಿ ಹಾಗೂ ಜಿಲ್ಲಾ/ವಿಚಾರಣಾ‌ ನ್ಯಾಯಾಲಯಗಳ ಸಿಬ್ಬಂದಿಯು ಕೋವಿಡ್‌ - 19 ಸಂಬಂಧಿತ ಕ್ವಾರಂಟೈನ್‌ ಗೆ ಒಳಗಾಗಿದ್ದರೆ ಆ ಅವಧಿಯನ್ನು ಕತ್ಯವ್ಯದ ಮೇಲೆ ಎಂದು ಪರಿಗಣಿಸುವುದಾಗಿ ತಿಳಿಸಿದೆ.

ಈ ಸಂಬಂಧ ಸುತ್ತೋಲೆಯನ್ನು ಸೋಮವಾರ ಹೊರಡಿಸಲಾಗಿದ್ದು, ಕ್ವಾರಂಟೈನ್‌ ಅವಧಿಯನ್ನು ಈ ಕೆಳಗಿನ ಷರತ್ತುಗೊಳಪಡಿಸಿ ಕರ್ತವ್ಯದ ಮೇಲೆ ಎಂದು ಪರಿಗಣಿಸಲಾಗುವುದು:

  • ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳ ಸಿಬ್ಬಂದಿಗಳು ಕೋವಿಡ್‌ - 19 ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಕಾರಣದಿಂದಾಗಿ ವೈದ್ಯಕೀಯ ಸಲಹೆಯ ಮೇರೆಗೆ ಕ್ವಾರಂಟೈನ್‌ ಗೆ ಒಳಗಾದರೆ ಅಥವಾ ಇನ್ನಾವುದೇ ಕಾರಣದಿಂದ, ಪಾಸಿಟಿವ್‌ ಎಂದು ಪರೀಕ್ಷಿತರಾದ ಮೇಲೆ, ಆತ/ಆಕೆ ಸಂಬಂಧ ಪಟ್ಟ ಘಟಕದ ಮುಖ್ಯಸ್ಥರಿಗೆ (ಯೂನಿಟ್‌ ಹೆಡ್‌) ಕೂಡಲೇ ಮಾಹಿತಿ ನೀಡುವುದು.

  • ಘಟಕದ ಮುಖ್ಯಸ್ಥರು ಈ ಕುರಿತು ವರದಿಯೊಂದನ್ನು ಸಂಬಂಧಪಟ್ಟ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ/ಪ್ರಧಾನ ನ್ಯಾಯಾಧೀಶರಿಗೆ ಕೂಡಲೇ ಸಲ್ಲಿಸುವುದು.

  • ಅಗತ್ಯವಿರುವಷ್ಟು ಕ್ವಾರಂಟೈನ್‌ ಅವಧಿಯನ್ನು ಪೂರೈಸಿದ ಮೇಲೆ, ಸಂಬಂಧಪಟ್ಟ ಸಿಬ್ಬಂದಿಯು ಜಿಲ್ಲಾ/ತಾಲ್ಲೂಕು ವೈದ್ಯಕೀಯ ಅಧಿಕಾರಿಯಿಂದ ನೀಡಲಾದ ಅಗತ್ಯವಿರುವ ವೈದ್ಯಕೀಯ ಪ್ರಮಾಣಪತ್ರಗಳನ್ನು, ನಿರ್ದಿಷ್ಟವಾಗಿ ನಮೂದಿಸಲಾದ ಕ್ವಾರಂಟೈನ್‌ ಅವಧಿ ಮಾಹಿತಿಯನ್ನು ಘಟಕದ ಮುಖ್ಯಸ್ಥರಿಗೆ ನೀಡುವುದು. ಇನ್ನಾವುದೇ ಪೂರಕ ದಾಖಲೆಗಳಿದ್ದರೆ ಒದಗಿಸುವದು.

  • ಸೂಕ್ತ ಪರಿಶೀಲನೆಯ ನಂತರ ಸಂಬಂಧಪಟ್ಟ ಘಟಕದ ಮುಖ್ಯಸ್ಥರು ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ/ಪ್ರಧಾನ ನ್ಯಾಯಾಧೀಶರಿಗೆ ದಾಖಲೆಗಳನ್ನು ರವಾನಿಸುವುದು.

  • ಕ್ವಾರಂಟೈನ್ ಗೆ ಸಂಬಂಧಿಸಿದ ಮಾಹಿತಿಯು ನಿಜಾಂಶದಿಂದ ಕೂಡಿದೆ ಎಂದು ಮನವರಿಕೆಯಾದ ಮೇಲೆ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ ಗೆ ಈ ಕುರಿತು ಒಂದು ಮಾಹಿತಿಯನ್ನು ನೀಡುವ ಮೂಲಕ ಕ್ವಾರಂಟೈನ್‌ ಅವಧಿಯನ್ನು ಕತ್ಯವ್ಯದ ಮೇಲೆ ಎಂದು ಪರಿಗಣಿಸುವುದು.