ದಾವೆ

[ಕೋವಿಡ್‌-19] ಅಂತ್ಯ ಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚು ಮಂದಿ ಇರದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಿ: ಹೈಕೋರ್ಟ್‌

Bar & Bench

ಕೋವಿಡ್‌-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತನ್ನದೇ ನಿಯಮಾವಳಿಗಳನ್ನು “ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ” ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದ್ದು, ಅಂತ್ಯ ಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚು ಮಂದಿ ಸೇರದಂತೆ ಕ್ರಮ ಕೈಗೊಳ್ಳಲು ನಿರ್ದೇಶಿಸಿದೆ.

ಕೋವಿಡ್‌-19 ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೌಕರ್ಯಗಳು ದೊರೆಯದೆ ಇರುವುದರ ಬಗ್ಗೆ ಕ್ರಮ ಕೋರಿ ಸಲ್ಲಿಕೆಯಾದ ಎರಡು ಮನವಿ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ದೇಶನವನ್ನು ಹೈಕೋರ್ಟ್‌ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರುಣ್‌ ಕುಮಾರ್ ಅವರಿರುವ ಪೀಠದ ಮುಂದೆ ರಾಜ್ಯ ಸರ್ಕಾರವು ಆಗಸ್ಟ್‌ 6ರಂದು ಮೃತ ದೇಹಗಳ ನಿರ್ವಹಣೆ ಕುರಿತ ಮಾರ್ಗಸೂಚಿಗಳನ್ನು ಪರಿಷ್ಕರಿಸಿರುವ ಬಗ್ಗೆ ಮಾಹಿತಿ ನೀಡಿತ್ತು.

ಪರಿಷ್ಕೃತ ಮಾರ್ಗಸೂಚಿಯ ಅನ್ವಯ, ದೇಹವನ್ನು ಮುಟ್ಟುವ ಯಾವುದೇ ವಿಧಿವಿಧಾನಗಳನ್ನು ನಿಷೇಧಿಸಲಾಗಿದೆ. ಅಲ್ಲದೆ, ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು 20ಕ್ಕಿಂತ ಹೆಚ್ಚು ಮಂದಿಗೆ ಪರವಾನಗಿ ನೀಡುವುದಿಲ್ಲ ಎಂದು ತಿಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು ಹೀಗೆ ಹೇಳಿದೆ:

“ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆ, 2005ರ ಅಡಿ ಅಂತ್ಯಸಂಸ್ಕಾರದ ವೇಳೆ 20ಕ್ಕಿಂತ ಹೆಚ್ಚು ಮಂದಿ ಸೇರದಂತೆ ಇರುವ ಸೂಚನೆಯನ್ನು ಯಾವ ರೀತಿ ಪಾಲಿಸಲು ಹೇಳಲಾಗಿದೆಯೋ ಅದೇ ರೀತಿ ಪಾಲಿಸಲು ರಾಜ್ಯ ಸರ್ಕಾರವು ಸೂಚಿತ ನಿಯಮಾವಳಿಯ ಅನ್ವಯ ಕ್ರಮ ಕೈಗೊಳ್ಳಬೇಕು. ಈ ನಿಯಮದ ಉಲ್ಲಂಘನೆಯು ದಂಡನಾರ್ಹವಾಗಲಿದೆ. ಹಾಗಾಗಿ, ರಾಜ್ಯ ಸರ್ಕಾರವು ಈ ನಿರ್ದೇಶನವು ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು.”
ಕರ್ನಾಟಕ ಹೈಕೋರ್ಟ್‌

ಇದೇ ವೇಳೆ, ವಕೀಲ ಜಿ ಆರ್ ಮೋಹನ್‌ ಅವರು, ಕೆಲ ಆಸ್ಪತ್ರೆಗಳು ಶವವನ್ನು ಇರಿಸಲು ಅಗತ್ಯವಾದ ಶವಾಗಾರವನ್ನು ಸಹ ಹೊಂದಿಲ್ಲ ಎನ್ನುವ ಅಂಶವನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, “ ಕೋವಿಡ್‌ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರುವ ಕೆಲ ಆಸ್ಪತ್ರೆಗಳಲ್ಲಿ ಶವಾಗಾರಗಳಿಲ್ಲ ಎನ್ನುವುದು ನಿಮ್ಮ ಆರೋಪವಾಗಿದ್ದರೆ ಅದನ್ನು ಅಧಿಕೃತವಾಗಿ ಸಲ್ಲಿಸಿ,” ಎಂದು ಹೇಳಿತು.

ಇದೇ ಪ್ರಕರಣದ ವಿಚಾರಣೆ ವೇಳೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ತನ್ನ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 567 ಮಂದಿ ಪೌರಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ ಎನ್ನುವುದನ್ನು ನ್ಯಾಯಾಲಯಕ್ಕೆ ತಿಳಿಸಿತು. ಇವರಲ್ಲಿ ಎಷ್ಟು ಮಂದಿಗೆ ರೋಗಲಕ್ಷಣಗಳಿವೆ, ಎಷ್ಟು ಮಂದಿಗೆ ರೋಗ ಲಕ್ಷಣಗಳಿಲ್ಲ ಎನ್ನುವುದನ್ನು ಹಾಗೂ ಎಷ್ಟು ಮಂದಿ ಪೌರಕಾರ್ಮಿಕರನ್ನು ಆಸ್ಪತ್ರೆಗೆ ಅಥವಾ ಕೋವಿಡ್‌ ಕೇರ್‌ ಸೆಂಟರ್‌ ಗಳಿಗೆ ಸೇರಿಸಲಾಗಿದೆ ಎನ್ನುವುದನ್ನು ತಿಳಿಸುವಂತೆ ನ್ಯಾಯಾಲಯವು ಬಿಬಿಎಂಪಿಗೆ ಸೂಚಿಸಿತು.