Justice Prathiba M Singh 
ದಾವೆ

ಬಾರ್ ಅಂಡ್ ಬೆಂಚ್ ಕನ್ನಡದಲ್ಲಿ ಮೂಡಿ ಬರುತ್ತಿರುವುದು ಖುಷಿಯ ಸಂಗತಿ: ನ್ಯಾ.ಪ್ರತಿಭಾ.ಎಮ್.ಸಿಂಗ್

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಪ್ರಸ್ತುತ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾ.ಎಮ್.ಸಿಂಗ್ ಕನ್ನಡದಲ್ಲಿ ಪತ್ರ ಬರೆದು ಬಾರ್ ಅಂಡ್ ಬೆಂಚ್ ಕನ್ನಡ ಅವತರಿಣಿಕೆಯ ಅಗತ್ಯತೆ ಬಗ್ಗೆ ವಿವರಿಸಿದ್ದಾರೆ.

Bar & Bench

1986-91ರಲ್ಲಿ ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದಲ್ಲಿ (ULC) ಕಲಿಯುತ್ತಿದ್ದಾಗ ನಾವು ಅಧ್ಯಯನ ಮತ್ತು ಸಂಶೋಧನೆಗೆ ಪುಸ್ತಕಗಳನ್ನು ಅತಿಯಾಗಿ ಆಶ್ರಯಿಸಿದ್ದೆವು. ಸಹಪಾಠಿಗಳೆಲ್ಲರೂ ಗ್ರಂಥಾಲಯದಲ್ಲಿ ಸೇರಿಕೊಂಡು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳ ಮೇಲೆ ಚರ್ಚೆ ನಡೆಸುತ್ತಿದ್ದೆವು. ಅಂದಿನ ಕಾಲದಲ್ಲಿ ಎಐಆರ್, ಎಸ್ ಸಿಸಿ, ಎಸ್‌ ಸಿಆರ್, ಐಎಲ್‌ ಆರ್ ನಂಥ ಕಾನೂನಿನ ಪುಸ್ತಕಗಳು ನಮಗೆ ದಾರಿ ದೀವಿಗೆಯಾಗಿದ್ದವು. 90ರ ದಶಕದ ಆರಂಭದಲ್ಲೂ ಪುಸ್ತಕಗಳೇ ನಮಗೆ ಸಂಶೋಧನೆಗೆ ಮೂಲ ಆಧಾರವಾಗಿದ್ದವು.

1995-96ರಲ್ಲಿ ಇಂಟರ್ ನೆಟ್ ಯುಗ ಆರಂಭವಾಯಿತು. ಇಂಟರ್ ನೆಟ್ ಉದಯದೊಂದಿಗೆ ವಕೀಲರು, ನ್ಯಾಯಾಧೀಶರು ಮತ್ತು ಕಾನೂನಿನ ವೃತ್ತಿಯಲ್ಲಿರುವವರಿಗೆ ಸಂಶೋಧನೆಗೆ ಹೊಸ ವೇದಿಕೆಗಳು ಸೃಷ್ಟಿಯಾಗಲಾರಂಭಿಸಿದವು.

ಬೆಂಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ನ್ಯಾಯಮೂರ್ತಿ ಪ್ರತಿಭಾ.ಎಮ್.ಸಿಂಗ್ ಹಾಗೂ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಒಟ್ಟಿಗೆ ಪಾಲ್ಗೊಂಡಿದ್ದ ಸಂದರ್ಭ

ಹಿಂದೆ ಕಾನೂನು ವೃತ್ತಿಯಲ್ಲಿರುವವರಿಗೆ ಸಮಾಜದಲ್ಲಿ ಅತ್ಯಂತ ಗೌರವವಿತ್ತು. ನ್ಯಾಯಾಧೀಶರು, ವಕೀಲರ ಬಗ್ಗೆ ಹಾಸ್ಯ, ಕುಹಕದ ಮಾತುಗಳು ಅಪರೂಪವಾಗಿದ್ದವು. ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಶ್ರೀಸಾಮಾನ್ಯರಿಗೆ ಇರಲಿಲ್ಲ.

ಇಂಥ ಪರಿಸ್ಥಿತಿಯ ಬದಲಾವಣೆಗೆ ಶ್ರೀಕಾರ ಹಾಕಿದ್ದುಅ ಬಾರ್ ಅಂಡ್ ಬೆಂಚ್ ನಂಥ ವೆಬ್ ಸೈಟ್ ಗಳು. ಬಾರ್ ಅಂಡ್ ಬೆಂಚ್ ನಲ್ಲಿ ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿ, ಒಳನೋಟಗಳಿಂದ ಕೂಡಿದ ಲೇಖನ ಪ್ರಕಟವಾಗಲಾರಂಭಿಸಿದವು. ಇದರಿಂದ ಬಾರ್ ಅಂಡ್ ಬೆಂಚ್ ಜನಪ್ರಿಯತೆ ಗಳಿಸಲಾರಂಭಿಸಿತು.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಬಾರ್ ಅಂಡ್ ಬೆಂಚ್ ಕಾನೂನು ವಿದ್ಯಾರ್ಥಿಗಳು, ವಕೀಲರು, ಬೋಧಕರು, ಅಧಿಕಾರಿಗಳು ಹಾಗೂ ನ್ಯಾಯಾಧೀಶರಿಗೆ ಒಂದು ಅತ್ಯುತ್ತಮ ಮತ್ತು ಗಮನಾರ್ಹ ಮೂಲವಾಗಿ ರೂಪುಗೊಂಡಿದೆ.

ಬಾರ್ ಅಂಡ್ ಬೆಂಚ್ ವೆಬ್ ಸೈಟಿನಲ್ಲಿ ವೈವಿಧ್ಯಮಯವಾದ ಕಾನೂನು ಸುದ್ದಿಗಳು, ವಿಶ್ಲೇಷಣೆಗಳು, ಖ್ಯಾತನಾಮರ ಸಂದರ್ಶನಗಳು ಪ್ರಕಟವಾಗುತ್ತಿವೆ. ಕಾನೂನು ಕ್ಷೇತ್ರದಲ್ಲಿನ ಪಾರದರ್ಶಕತೆಯನ್ನು ಬಾರ್ ಅಂಡ್ ಬೆಂಚ್ ನಂಥ ವೆಬ್ ಸೈಟಿನಲ್ಲಿ ಗುರುತಿಸಬಹುದಾಗಿದೆ. ಬಾರ್ ಅಂಡ್ ಬೆಂಚ್ ಇಲ್ಲಿಯವರೆಗೆ ಇಂಗ್ಲಿಷ್ ನಲ್ಲಿ ಮಾತ್ರ ಲಭ್ಯವಿತ್ತು. ಶನಿವಾರದಿಂದ (ಆಗಸ್ಟ್ 15, 2020) ಅದು ಕನ್ನಡದಲ್ಲಿಯೂ ಮೂಡಿಬರುತ್ತಿದೆ ಎಂಬ ಸುದ್ದಿ ತಿಳಿದು ಅತೀವ ಸಂತೋಷವಾಗಿದೆ.

ಬಾರ್ ಅಂಡ್ ಬೆಂಚ್ ವೆಬ್ ಸೈಟ್ ಕನ್ನಡದಲ್ಲಿ ಮೂಡಿಬರುತ್ತಿರುವುದು ನನ್ನ ದೃಷ್ಟಿಯಲ್ಲಿ ಅತ್ಯಂತ ಮಹತ್ವಪೂರ್ಣವಾದ ಬೆಳವಣಿಗೆ. ಕನ್ನಡಿಗರಿಗೆ ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳು ಅವರದೇ ಭಾಷೆಯಲ್ಲಿ ಲಭ್ಯವಾಗುತ್ತಿರುವುದು ಖುಷಿಯ ಸಂಗತಿ. ಬಾರ್ ಅಂಡ್ ಬೆಂಚ್ ನ ಎಲ್ಲಾ ಸಂಸ್ಥಾಪಕರು ಹಾಗೂ ಸಿಬ್ಬಂದಿಗೆ ನನ್ನ ಅಭಿನಂದನೆಗಳು.

ಜೈ ಹಿಂದ್, ಜೈ ಕರ್ನಾಟಕ