ಒಂದು ರೂಪಾಯಿ ನಾಣ್ಯ ಪ್ರದರ್ಶಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ 
ದಾವೆ

ಯಾವಾಗ ಸುಪ್ರೀಂ ಕೋರ್ಟ್‌ ಗೆಲ್ಲುತ್ತದೋ ಆಗ ಪ್ರತಿಯೊಬ್ಬ ಭಾರತೀಯನೂ ಗೆಲ್ಲುತ್ತಾನೆ: ಭೂಷಣ್

ಸುಪ್ರೀಂ ಕೋರ್ಟ್‌ ಬಗ್ಗೆ ಅಪಾರ ಗೌರವ ಹೊಂದಿರುವುದಾಗಿ ಹೇಳಿರುವ ಭೂಷಣ್ ಅವರು ಈ ವಿಚಾರವು ನನ್ನ ಮತ್ತು ಸುಪ್ರೀಂ ಕೋರ್ಟ್‌ ವಿರುದ್ಧವಲ್ಲ. “ಸುಪ್ರೀಂ ಕೋರ್ಟ್‌ ಗೆದ್ದಾಗ ಎಲ್ಲಾ ಭಾರತೀಯರು ಗೆಲ್ಲುತ್ತಾರೆ” ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

Bar & Bench

ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ. ಅರುಣ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಹಿರಿಯ ವಕೀಲ ಪ್ರಶಾಂತ್ ಭೂ‍ಷಣ್ ಅವರಿಗೆ ಸಾಂಕೇತಿಕವಾಗಿ ಒಂದು ರೂಪಾಯಿ ದಂಡ ವಿಧಿಸುವ ತೀರ್ಪು ಪ್ರಕಟಿಸಿದ ಕೆಲ ಗಂಟೆಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ ಭೂಷಣ್ ಅವರು ದಂಡ ಪಾವತಿಸುವುದಾಗಿ ಘೋಷಿಸಿದರು. ಅಲ್ಲದೇ ಸುಪ್ರೀಂ ಕೋರ್ಟ್‌ ನ ತೀರ್ಪು ಮರುಪರಿಶೀಲನೆ ಕೋರುವ ಹಕ್ಕನ್ನು ಕಾಯ್ದಿರಿಸಿಕೊಂಡಿರುವುದಾಗಿ ಹೇಳಿದರು.

ಈ ಪ್ರಕರಣವು ನನ್ನ ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳ ನಡುವಿನದಲ್ಲ. ಹಾಗೆಯೇ ಇದು ನನ್ನ ಮತ್ತು ಸುಪ್ರೀಂ ಕೋರ್ಟ್ ನಡುವಿನದ್ದೂ ಅಲ್ಲ. ಯಾವಾಗ ಭಾರತದ ಸುಪ್ರೀಂ ಕೋರ್ಟ್‌ ಗೆಲ್ಲುತ್ತದೋ ಆಗ ಪ್ರತಿಯೊಬ್ಬ ಭಾರತೀಯನೂ ಗೆಲ್ಲುತ್ತಾನೆ. ಪ್ರತಿಯೊಬ್ಬ ಭಾರತೀಯನೂ ಬಲಿಷ್ಠ ಮತ್ತು ಸ್ವತಂತ್ರ ನ್ಯಾಯಾಂಗವನ್ನು ಬಯಸುತ್ತಾನೆ. ನ್ಯಾಯಾಲಯಗಳು ದುರ್ಬಲಗೊಂಡರೆ ಖಚಿತವಾಗಿ ಗಣರಾಜ್ಯವು ದುರ್ಬಲಗೊಳ್ಳುತ್ತದೆ. ಎಲ್ಲ ನಾಗರಿಕರಿಗೂ ಕೆಡುಕಾಗುತ್ತದೆ.
ಪ್ರಶಾಂತ್ ಭೂಷಣ್, ಹಿರಿಯ ವಕೀಲ

ಭೂಷಣ್ ಹೇಳಿಕೆಯ ಪ್ರಮುಖ ಅಂಶಗಳು ಹೀಗಿವೆ:

  • ನನ್ನ ವಿರುದ್ಧದ ನ್ಯಾಯಾಂಗ ನಿಂದನೆ ಆರೋಪದಲ್ಲಿ ಸುಪ್ರೀಂ ಕೋರ್ಟ್‌ ದೋಷಿ ಎಂದು ನನ್ನನ್ನು ಪರಿಗಣಿಸಿದ್ದು ರೂ.1 ಜುಲ್ಮಾನೆಯನ್ನು ನನಗೆ ವಿಧಿಸಿದೆ.

  • ನ್ಯಾಯಾಲಯಕ್ಕೆ ನೀಡಿದ ನನ್ನ ಮೊದಲ ಹೇಳಿಕೆಯಲ್ಲಿಯೇ ನಾನು, “ನ್ಯಾಯಾಲಯವು ಅಪರಾಧ ಎಂದು ಪರಿಗಣಿಸಿರುವ, ನನ್ನ ದೃಷ್ಟಿಯಲ್ಲಿ ನಾಗರಿಕನ ಅತ್ಯುನ್ನತವಾದ ಕರ್ತವ್ಯ ಎಂದು ಭಾವಿಸಲಾದ ಕ್ರಿಯೆಗೆ ಕಾನೂನಾತ್ಮಕವಾಗಿ ನನಗೆ ನೀಡುವ ಶಿಕ್ಷೆಯನ್ನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ,” ಎಂದಿದ್ದೇನೆ.

  • ಸೂಕ್ತ ಕಾನೂನು ಪರಿಹಾರದ ಮೂಲಕ ನನಗೆ ನೀಡಲಾಗಿರುವ ಶಿಕ್ಷೆಯ ಮರುಪರಿಶೀಲನೆಯ ನನ್ನ ಹಕ್ಕನ್ನು ನಾನು ಕಾಯ್ದಿರಿಸುತ್ತೇನೆ. ಇದೇ ವೇಳೆ, ನಾನು ಈ ಆದೇಶಕ್ಕೆ ಒಳಪಟ್ಟು ನನಗೆ ವಿಧಿಸಿರುವ ದಂಡವನ್ನು ಗೌರವಯುತವಾಗಿ ಕಟ್ಟುತ್ತೇನೆ.

  • ಅಬಲರು ಮತ್ತು ತುಳಿತಕ್ಕೆ ಒಳಗಾದವರು ಹಾಗೂ ಶಕ್ತಿಯುತವಾದ ಕಾರ್ಯಾಂಗದಿಂದ ತಮ್ಮ ಹಕ್ಕು ರಕ್ಷಣೆಗಾಗಿ ಜನರು ಸುಪ್ರೀಂ ಕೋರ್ಟ್ ಕದತಟ್ಟುತ್ತಾರೆ. ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವಿದ್ದು, ಅದು ನಾನು ನಂಬಿರುವ ಕೊನೆಯ ಭರವಸೆ.

  • ಈ ಪ್ರಕರಣವು ನನ್ನ ಮತ್ತು ಗೌರವಾನ್ವಿತ ನ್ಯಾಯಮೂರ್ತಿಗಳ ನಡುವಿನದಲ್ಲ. ಹಾಗೆಯೇ ಇದು ನನ್ನ ಮತ್ತು ಸುಪ್ರೀಂ ಕೋರ್ಟ್ ನಡುವಿನದ್ದೂ ಅಲ್ಲ. ಯಾವಾಗ ಭಾರತದ ಸುಪ್ರೀಂ ಕೋರ್ಟ್‌ ಗೆಲ್ಲುತ್ತದೋ ಆಗ ಪ್ರತಿಯೊಬ್ಬ ಭಾರತೀಯನೂ ಗೆಲ್ಲುತ್ತಾನೆ. ಪ್ರತಿಯೊಬ್ಬ ಭಾರತೀಯನೂ ಬಲಿಷ್ಠ ಮತ್ತು ಸ್ವತಂತ್ರ ನ್ಯಾಯಾಂಗವನ್ನು ಬಯಸುತ್ತಾನೆ. ನ್ಯಾಯಾಲಯಗಳು ದುರ್ಬಲಗೊಂಡರೆ ಖಚಿತವಾಗಿ ಗಣರಾಜ್ಯವು ದುರ್ಬಲಗೊಳ್ಳುತ್ತದೆ. ಎಲ್ಲ ನಾಗರಿಕರಿಗೂ ಕೆಡುಕಾಗುತ್ತದೆ.

  • ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯು ನನ್ನ ಭರವಸೆಯನ್ನು ಹೆಚ್ಚಿಸಿದ್ದು, ವಾಕ್ ಸ್ವಾತಂತ್ರ್ಯ ಮತ್ತು ನ್ಯಾಯಾಂಗದ ಹೊಣೆಗಾರಿಕೆ ಮತ್ತು ಸುಧಾರಣೆಯ ಕುರಿತು ದೇಶದ ಗಮನ ಹೆಚ್ಚಾಗಬಹುದು. ಈ ಪ್ರಕರಣವು ವಾಕ್ ಸ್ವಾತಂತ್ರ್ಯಕ್ಕೆ ನಿರ್ಣಾಯಕ ಘಳಿಗೆಯಾಗಿದ್ದು, ಇದರಿಂದ ಹೆಚ್ಚು ಹೆಚ್ಚು ಜನರು ನಮ್ಮ ದೇಶದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡಲು ಪ್ರೇರೇಪಣೆಯಾಗಲಿದೆ.