ದಾವೆ

[ಕೋವಿಡ್‌-19] “ವಿಶೇಷ ಅವಕಾಶ ಪರೀಕ್ಷೆ”ಗಳನ್ನು ಆನ್‌ ಲೈನ್‌ ಮೂಲಕ ನಡೆಸಬಹುದೇ ತಿಳಿಸಿ, ವಿಟಿಯುಗೆ ಹೈಕೋರ್ಟ್‌ ಸೂಚನೆ

ಸೆಪ್ಟೆಂಬರ್‌ ನಲ್ಲಿ ನಡೆಯಲಿರುವ ವಿಟಿಯು ಅಂತಿಮ ಪರೀಕ್ಷೆಗಳನ್ನು ಆನ್‌ ಲೈನ್‌ ಮೂಲಕ ನಡೆಸುವಂತೆ ಆದೇಶಿಸುವುದು ಸಾಧುವಲ್ಲ ಎಂದ ಹೈಕೋರ್ಟ್‌. ವಿಶೇಷ ಅವಕಾಶ ಪರೀಕ್ಷೆಗಳನ್ನು ಆನ್‌ ಲೈನ್‌ ಮೂಲಕ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಲು ಸೂಚನೆ.

Bar & Bench

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ಅಂತಿಮ ವರ್ಷದ ಪರೀಕ್ಷೆಗಳನ್ನು ಆನ್‌ ಲೈನ್‌ ಮೂಲಕ ನಡೆಸುವಂತೆ ತಿಳಿಸುವ ಯಾವುದೇ ಆದೇಶ ನೀಡುವುದರಿಂದ ಕರ್ನಾಟಕ ಹೈಕೋರ್ಟ್‌ ಹಿಂದೆ ಸರಿದಿದೆ. ತನ್ನ ಬಳಿ ಆನ್‌ ಲೈನ್ ಪರೀಕ್ಷೆಗಳನ್ನು ಕೈಗೊಳ್ಳಲು ಅಗತ್ಯವಾದ ಮೂಲಸೌಕರ್ಯವಾಗಲಿ ಅಥವಾ ಮಾನವ ಸಂಪನ್ಮೂಲವಾಗಲಿ ಇಲ್ಲ ಎಂದು ವಿಟಿಯು ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದ ನಂತರ ಈ ಸಂಬಂಧ ಯಾವುದೇ ಆದೇಶವನ್ನು ನೀಡದೆ ಇರಲು ಹೈಕೋರ್ಟ್‌ ತೀರ್ಮಾನಿಸಿತು.

ಬದಲಿಗೆ, ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ಅವರು ಯಾವ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಗೆ ಹಾಜರಾಗಲು ಸಾಧ್ಯವಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ಮೂಲಕ “ವಿಶೇಷ ಅವಕಾಶ ಪರೀಕ್ಷೆ”ಗಳನ್ನು ನಡೆಸಲು ಇರುವ ಸಾಧ್ಯತೆಗಳ್ನನು ಅನ್ವೇಷಿಸಲು ಸೂಚಿಸಿದರು.

ಈ ಸಂಬಂಧ ವಿಶ್ವವಿದ್ಯಾಲಯವು ತಜ್ಞರ ಸಲಹೆಯನ್ನು ಪಡೆದು ವಿಸ್ತೃತ ಅಫಿಡವಿಟ್‌ ಅನ್ನು ಮುಂದಿನ ಸೆಪ್ಟೆಂಬರ್‌ 25ರ ವಿಚಾರಣೆ ವೇಳೆಗೆ ಸಲ್ಲಿಸಲಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮಾವಳಿಗಳ ಪ್ರಕಾರ ಕೋವಿಡ್‌-19 ಸಾಂಕ್ರಾಮಿಕತೆಯ ನಡುವೆಯೇ ಈ ವರ್ಷದ ಸೆಪ್ಟೆಂಬರ್ ಅಂತ್ಯದೊಳಗೆ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸುವ ಅನಿವಾರ್ಯತೆ ಎದುರಾಗಿದ್ದು ಈ ಸಂಬಂಧ ನ್ಯಾಯಾಲಯವು ಅರ್ಜಿ ವಿಚಾರಣೆಯೊಂದನ್ನು ನಡೆಸುತ್ತಿದೆ (ವೇದಾಂತ್‌ V. ಯುನಿಯನ್‌ ಆಫ್‌ ಇಂಡಿಯಾ).

ಪರೀಕ್ಷೆಗಳನ್ನು ಆನ್‌ ಲೈನ್‌, ಆಫ್‌ ಲೈನ್‌ ಅಥವಾ ಇವೆರಡರ ಮಿಶ್ರಣದ ಮೂಲಕ ನಡೆಸಬೇಕೆ ಎನ್ನುವುದರ ಬಗ್ಗೆ ತೀರ್ಮಾನವನ್ನು ಕೈಗೊಳ್ಳುವುದು ಆಯಾ ವಿಶ್ವವಿದ್ಯಾಲಯಗಳಿಗೆ ಬಿಟ್ಟ ವಿಚಾರ ಎಂದು ಯುಜಿಸಿ ನಿಯಮಾವಳಿ ಹೇಳುತ್ತದೆ. ಆದರೆ, ಅರ್ಜಿದಾರರು ಕರ್ನಾಟಕದಲ್ಲಿ ಬಿಗಡಾಯಿಸುತ್ತಿರುವ ಕೋವಿಡ್‌-19 ಪರಿಸ್ಥಿತಿಯ ಹಿನ್ನೆಲಯಲ್ಲಿ ಪರೀಕ್ಷೆಗಳನ್ನು ಆನ್‌ ಲೈನ್‌ ಮೂಲಕವೇ ನಡೆಸಬೇಕು ಎಂದು ಕೋರಿದ್ದಾರೆ.

ಇಂದು ನೀಡಿರುವ ಆದೇಶದ ಪ್ರಮುಖಾಂಶಗಳು:

  • ಯಾವುದೇ ನಿರ್ಧಾರವನ್ನು ಕೈಗೊಳ್ಳುವಾಗಲೂ ಅಂತಿಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯೇ ಮುಖ್ಯವಾಗಬೇಕು.

  • ಕೋವಿಡ್‌-19 ಸಂಕಷ್ಟದ ಈ ಸಂದರ್ಭದಲ್ಲಿ ಸೂಕ್ತವಾಗಿ ಅನುಷ್ಠಾನಗೊಳಿಸಬಹುದಾದ ಲಭ್ಯವಿರುವ ಎಲ್ಲ ತಾಂತ್ರಿಕ ಆಯ್ಕೆಗಳನ್ನು ಅನ್ವೇಷಿಸಬೇಕು.

  • ಆನ್ ಲೈನ್ ಮೂಲಕ ವಿಶೇಷ ಅವಕಾಶ ಪರೀಕ್ಷೆಯನ್ನು ನಡೆಸುವ ಸಾಧ್ಯತೆಯನ್ನು ವಿಶ್ವವಿದ್ಯಾಲಯವು ಮರುಪರಿಶೀಲಿಸಲು ಸೂಚನೆ. ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸಿ ತಜ್ಞರ ಸಹಕಾರದೊಂದಿಗೆ ಈ ಕುರಿತು ಪರಿಶೀಲಿಸಬೇಕು. ಒಮ್ಮೆ ಪರೀಕ್ಷೆಯನ್ನು ನಡೆಸಿದ ನಂತರ “ವಿಶೇಷ ಅವಕಾಶ ಪರೀಕ್ಷೆ” ಅಗತ್ಯವಿರುವ ವಿದ್ಯಾರ್ಥಿಗಳ ಸಂಖ್ಯೆಯು ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಹಾಗಾಗಿ ಪರೀಕ್ಷೆಯ ನಂತರ ಈ ವಿಚಾರದ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯವು ಉತ್ತಮ ಸ್ಥಿತಿಯಲ್ಲಿರುತ್ತದೆ.

  • ಪರೀಕ್ಷೆಯನ್ನು ಸೆಪ್ಟೆಂಬರ್ 15ರ ಒಳಗೆ ನಡೆಸಬೇಕಿದೆ ಎಂದು ವಿಟಿಯು ಹೇಳಿದೆ. ಸೆಪ್ಟೆಂಬರ್‌ 25ಕ್ಕೆ ಪ್ರಕರಣದ ವಿಚಾರಣೆ ಇದೆ. ಈ ಅವಧಿಯು ಪ್ರಕರಣದ ಬಗ್ಗೆ ಮರುಪರಿಶೀಲಿಸಲು ಸಾಕು ಎಂದು ನ್ಯಾಯಾಲಯವು ತಿಳಿಸಿದೆ.

  • ನಿನ್ನೆ ಮತ್ತು ಇಂದು ನಡೆದ ವಿಚಾರಣೆಯ ವೇಳೆ ನ್ಯಾಯಾಲಯವು ನೀಡಿರುವ ಆದೇಶಗಳನ್ನು ಪರಿಗಣನೆಗೆ ತೆಗೆದುಕೊಂಡು ಸೆಪ್ಟೆಂಬರ್‌ 25ರ ವೇಳೆಗೆ ವಿಶ್ವವಿದ್ಯಾಲಯವು ವಿಸ್ತೃತ ಅಫಿಡವಿಟ್‌ಅನ್ನು ಸಲ್ಲಿಸಬೇಕಿದೆ.

  • ಸಿಇಟಿ ಪರೀಕ್ಷೆಗಳನ್ನು ನಡೆಸುವಾಗ ತೆಗೆದುಕೊಂಡ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಈ ಪರೀಕ್ಷೆಗಳಿಗೂ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಸರ್ಕಾರವು ನ್ಯಾಯಾಲಯಕ್ಕೆ ಹೇಳಿಕೆ ಸಲ್ಲಿಸಿದೆ.