ದಾವೆ

ಕಾಮೆಡ್‌-ಕೆ ಪ್ರವೇಶ ಪರೀಕ್ಷೆ ತಡೆಗೆ ಮಧ್ಯಪ್ರವೇಶಿಸಲು ಹೈಕೋರ್ಟ್‌ ನಕಾರ; ಆಗಸ್ಟ್‌ 19ರಂದು ಪರೀಕ್ಷೆ

ಕಾಮೆಡ್‌ಕೆ ಪ್ರವೇಶ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿದ್ದ ಅರ್ಜಿಯ ವಿಚಾರಣೆ ವೇಳೆ ಮದ್ಯಪ್ರವೇಶಿಸಲು ಕೋರ್ಟ್‌ ನಿರಾಕರಿಸಿದೆ. ಸೂಕ್ತ ಮುಂಜಾಗಕರೂಕತಾ ಕ್ರಮಗಳ ಮೂಲಕ ಪರೀಕ್ಷೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

Bar & Bench

ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಮತ್ತು ದಂತವೈದ್ಯಕೀಯ ಕಾಲೇಜುಗಳ ಒಕ್ಕೂಟವು (ಕಾಮೆಡ್‌ಕೆ) ಖಾಸಗಿ ವೈದ್ಯಕೀಯ, ಎಂಜಿನಿಯರಿಂಗ್, ದಂತವೈದ್ಯಕೀಯ ಪದವಿ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸಿದ ಹೈಕೋರ್ಟ್ ಪರೀಕ್ಷೆ ಮುಂದೂಡುವಿಕೆಯ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸ್ಪಷ್ಟವಾಗಿ ನಿರಾಕರಿಸಿದೆ.

ಅಬ್ದುಲ್ಲಾ ಮನ್ನನ್ ಖಾನ್‌ ಎನ್ನುವವರು ಸಲ್ಲಿಸಿದ್ದ ಅರ್ಜಿಯಲ್ಲಿ ನೀಟ್‌, ಜೆಇಇ ಪರೀಕ್ಷೆಗಳ ನಂತರ ಹಾಗೂ “ಕೋವಿಡ್‌ ಸಂಕಷ್ಟ ಮುಗಿದ ಮೇಲೆ” ಪರೀಕ್ಷೆಗಳನ್ನು ನಡೆಸುವಂತೆ ಕೋರಲಾಗಿತ್ತು. ವಿವಿಧ ರಾಜ್ಯಗಳಲ್ಲಿ ಲಾಕ್‌ ಡೌನ್‌ ಹಾಗೂ ಪ್ರವಾಹ ಪರಿಸ್ಥಿತಿಗಳಿರುವುದರಿಂದ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ತೊಂದರೆಯಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

ವಿಚಾರಣೆ ವೇಳೆ ಅಬ್ದುಲ್‌ ಮನ್ನನ್ ಖಾನ್‌ ಅವರು ತಾವು ಎರಡು ಲಕ್ಷ ವಿದ್ಯಾರ್ಥಿಗಳ ಪಕ್ಷಕಾರರಾಗಿ ಪ್ರತಿನಿಧಿಸುತ್ತಿರುವುದಾಗಿ ತಿಳಿಸಿದರು. ಇದಕ್ಕೆ ಪೀಠವು ವಕೀಲರು ಏಕೆ ಪಕ್ಷಕಾರಾಗುತ್ತಾರೆ? ವಿದ್ಯಾರ್ಥಿಗಳನ್ನು ಅರ್ಜಿದಾರರಾಗಲು ತಿಳಿಸಿ, ನೀವು ವಕೀಲರಾಗಿ ಎಂದು ಹೇಳಿತು. ಮುಂದುವರೆದು, ಒಂದೊಮ್ಮೆ ಪರೀಕ್ಷೆಗಳನ್ನು ನಡೆಸದೆ ಹೋದರೆ ವಿದ್ಯಾರ್ಥಿಗಳು ತೊಂದರೆಗೀಡಾಗುತ್ತಾರೆ ಎಂದಿತು.

ಈ ಸಂದರ್ಭದಲ್ಲಿ ಅರ್ಜಿದಾರರು, ಮಹಾರಾಷ್ಟ್ರ, ತಮಿಳುನಾಡು ಮತ್ತಿತರೆ ರಾಜ್ಯಗಳ ಹೈಕೋರ್ಟ್‌ ಗಳು ಪರೀಕ್ಷೆಗಳಿಗೆ ತಡೆಯಾಜ್ಞೆ ನೀಡಿರುವುದರ ಬಗ್ಗೆ ಗಮನಸೆಳೆದರು. ಈ ಸಂದರ್ಭದಲ್ಲಿ ಪೀಠವು, ಆ ಎಲ್ಲ ಹೈಕೋರ್ಟ್‌ ಗಳನ್ನು ಗೌರವಿಸುತ್ತಾ, ನಮ್ಮಂತೆ ಅವರು ಕಾರ್ಯಚಟುವಟಿಕೆಯಲ್ಲಿ ತೊಡಗಿಲ್ಲ ಎಂದು ಹೇಳಿತು.

ಕಾಮೆಡ್‌ ಕೆ ಪರೀಕ್ಷೆಗಳನ್ನು ನಡೆಸುತ್ತಿರುವ ಸಂಸ್ಥೆಯು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸುವ ದೃಷ್ಟಿಯಿಂದ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಕ್ರಮಗಳ ಹೊರತಾಗಿಯೂ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಿ.
ಕರ್ನಾಟಕ ಹೈಕೋರ್ಟ್

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಮೆಡ್‌ ಕೆ ವಕೀಲರು, ಅರ್ಜಿದಾರರು ಕೇವಲ 19 ವಿದ್ಯಾರ್ಥಿಗಳ ಇಮೇಲ್‌ ಗಳನ್ನು ಸಲ್ಲಿಸಿದ್ದಾರೆ. ಇದು ಅರ್ಜಿದಾರರು ಈ ವಿದ್ಯಾರ್ಥಿಗಳೊಂದಿಗೆ ಸಂಕರ್ಪ ಹೊಂದಿದ್ದರು ಎನ್ನುವಂತೆ ಕಾಣುತ್ತದೆ. ಇದು “ಪ್ರಚಾರಕ್ಕಾಗಿ ಪ್ರಕ್ರಿಯೆಯನ್ನು ತಡೆಯುವ” ಉದ್ದೇಶವಾಗಿದೆ ಎಂದರು.

ಟಾಟಾ ಕನ್ಸಲ್ಟೆನ್ಸಿ ಪರೀಕ್ಷೆಯನ್ನು ನಡೆಸುತ್ತಿದ್ದು, ನಿಯಮಾವಳಿಗಳ ಅನುಸಾರವೇ ಅವರು ಯಾವಾಗಲೂ ನಡೆದುಕೊಳ್ಳುತ್ತಾರೆ. ಪರೀಕ್ಷೆಯನ್ನು ಕೇವಲ 119 ಕಾಲೇಜುಗಳ, 20,000 ಸೀಟುಗಳಿಗಾಗಿ ನಡೆಸಲಾಗುವುದು ಎಂದು ಇದೇ ವೇಳೆ ಕಾಮೆಡ್‌ ಕೆ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಅಂತಿಮವಾಗಿ ಪೀಠವು ಆದೇಶ ನೀಡಿ, ಇದಾಗಲೇ ಕೋವಿಡ್‌-19ರಿಂದಾಗಿ ಪರೀಕ್ಷೆಗಳನ್ನು ನಡೆಸುವಲ್ಲಿ ಸಾಕಷ್ಟು ವಿಳಂಬವಾಗಿದೆ. ಸಮಯ ಕಳೆದಂತೆ ಕರ್ನಾಟಕ ಸರ್ಕಾರವು ಹತ್ತನೇ ತರಗತಿ ಪರೀಕ್ಷೆಗಳನ್ನು, ಸಾಮಾನ್ಯ ಪ್ರವೇಶ ಪರೀಕ್ಷೆಗಳನ್ನು(ಕೆಸಿಇಟಿ 2020) ನಡೆಸಿದೆ. ದೇಶಾದ್ಯಂತ 30 ರಾಜ್ಯಗಳ 342 ಕೇಂದ್ರದಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. 190 ಖಾಸಗಿ ಕಾಲೇಜುಗಳು ಹಾಗೂ ರಾಜ್ಯದ 7 ವಿಶ್ವವಿದ್ಯಾಲಯಗಳ 20,000 ಸೀಟುಗಳಿಗಾಗಿ ಪರೀಕ್ಷೆ ನಡೆಯುತ್ತಿದೆ. ಈ ಸದಂರ್ಭದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿತು. ಇದೇ ವೇಳೆ, ಕಾಮೆಡ್‌ ಕೆ ಪರೀಕ್ಷೆಗಳನ್ನು ನಡೆಸುತ್ತಿರುವ ಸಂಸ್ಥೆಯು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸುವ ದೃಷ್ಟಿಯಿಂದ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಅಗತ್ಯ ಬಿದ್ದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿರುವುದರ ಹೊರತಾಗಿಯೂ ಹೆಚ್ಚುವರಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಿ ಎಂದು ಸೂಚಿಸಿತು.