ದಾವೆ

ಅರ್ಧದಷ್ಟು ಶಾಲಾ ಶುಲ್ಕ ಸ್ವೀಕರಿಸಲು ಅನುಮತಿ ಕೋರಿದ್ದ ಅರ್ಜಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಕೋವಿಡ್ ಹಿನ್ನೆಲೆಯಲ್ಲಿ ಶಾಲಾ ಶುಲ್ಕ ಸ್ವೀಕರಿಸುವುದಕ್ಕೆ ಆಡಳಿತ ಮಂಡಳಿಗಳಿಗೆ ರಾಜ್ಯ ಸರ್ಕಾರವು ನಿರ್ಬಂಧ ವಿಧಿಸಿತ್ತು. ಅದನ್ನು ರದ್ದುಗೊಳಿಸಿ, ಶೇ.50 ಶುಲ್ಕ ಸ್ವೀಕರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ಕೋರಿದ್ದಾರೆ.

Bar & Bench

ಪ್ರಸಕ್ತ ಶೈಕ್ಷಣಿಕ ವರ್ಷದ ಶೇ.50ರಷ್ಟು ಶಾಲಾ ಶುಲ್ಕ ಸಂಗ್ರಹಿಸಲು ಹಾಗೂ ಕಳೆದ ಶೈಕ್ಷಣಿಕ ವರ್ಷದ ಬಾಕಿ ಶಾಲಾ ಶುಲ್ಕವನ್ನು ಒತ್ತಾಯಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗುರುವಾರ‌ ನೋಟಿಸ್ ಜಾರಿಗೊಳಿಸಿದೆ (ಕರ್ನಾಟಕ ಖಾಸಗಿ ಶಾಲೆಗಳ ಸಮಿತಿ v. ಕರ್ನಾಟಕ ಸರ್ಕಾರ ಮತ್ತು ಇತರರು).

ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠವು ಈ ಸಂಬಂಧ ರಾಜ್ಯ ಸರ್ಕಾರ ಹಾಗೂ ಅದರ ಸಂಬಂಧಿತ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ಅರ್ಜಿಯ ತುರ್ತು ಪರಿಗಣಿಸಿ ಎರಡು ವಾರಗಳ ಒಳಗೆ ಪ್ರತಿಕ್ರಿಯಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಸೂಚಿಸಿದೆ.

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಗಳು ಶಾಲಾ ಶುಲ್ಕ ಸ್ವೀಕರಿಸುವುದಕ್ಕೆ ನಿರ್ಬಂಧಗಳನ್ನು ವಿಧಿಸಿ ಕರ್ನಾಟಕ ಸರ್ಕಾರವು ಏಪ್ರಿಲ್ 24 ಮತ್ತು 28ರಂದು ಸುತ್ತೋಲೆ ಹೊರಡಿಸಿತ್ತು. ಇದರಿಂದ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯನ್ನು ಸಂಕಷ್ಟದ ಸ್ಥಿತಿಗೆ ನೂಕಿದ್ದು, ಅಲ್ಲಿನ ಶಿಕ್ಷಕರು ಹಾಗೂ ಸಿಬ್ಬಂದಿಗೆ ವೇತನ ಪಾವತಿಸಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಅರ್ಜಿಯಲ್ಲಿನ ಪ್ರಮುಖ ಅಂಶಗಳು ಇಂತಿವೆ:

  • ನಿಯಮಗಳ ಪ್ರಕಾರ ಖಾಸಗಿ ಸಂಸ್ಥೆಗಳು ಶಿಕ್ಷಕರಿಗೆ ವೇತನ ಪಾವತಿಸುವಂತೆ ಸೂಚಿಸಲಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಸಂಸ್ಥೆಗಳು ಶಾಲಾ ಶುಲ್ಕ ಸ್ವೀಕರಿಸುವುದಕ್ಕೆ ತಡೆ ವಿಧಿಸಲಾಗಿದೆ.

  • ಕಂತುಗಳಲ್ಲಿ ಪ್ರಸಕ್ತ ವರ್ಷದ ಶಾಲಾ ಶುಲ್ಕ ಪಾವತಿಸುವಂತೆ ಸರ್ಕಾರಿ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಕಂತು ಪಾವತಿಸಲು ನಿರ್ದಿಷ್ಟ ಸಮಯ ನಿಗದಿಗೊಳಿಸದೇ ಇರುವುದರಿಂದ ಶೇ.1-2 ರಷ್ಟು ಪೋಷಕರು ಮಾತ್ರ ಶುಲ್ಕ ಪಾವತಿಸಿದ್ದಾರೆ.

  • ಆನ್ ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಅದಾಗ್ಯೂ ಶಿಕ್ಷಣದ ಗುಣಮಟ್ಟದ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ.

  • ಆನ್ ಲೈನ್ ಶಿಕ್ಷಣ ಅಳವಡಿಸಿಕೊಂಡಿರುವುದರಿಂದ ಶಿಕ್ಷಣ ಸಂಸ್ಥೆಗಳಿಗೆ ನಿಯಮಗಳಲ್ಲಿ ಸೂಚಿಸಿರುವುದಕ್ಕಿಂತಲೂ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಶಿಕ್ಷಕರಿಗೆ ವೇತನ ಪಾವತಿಸುವುದರ ಜೊತೆಗೆ ಆನ್ ಲೈನ್ ಶಿಕ್ಷಣ ವ್ಯವಸ್ಥೆ, ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಗೂ ವೇತನ ನೀಡಬೇಕಿದೆ.

  • ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣಗಳು, ನಿಯಂತ್ರಣಗಳು ಮತ್ತು ಪಠ್ಯಕ್ರಮ ಸೂಚನೆ ಇತ್ಯಾದಿ) ನಿಯಮಗಳ ಕಾಯ್ದೆ -1995ರ ನಿಬಂಧನೆಗಳ ಪ್ರಕಾರ ಸಿಬ್ಬಂದಿಯ ವೇತನ ಮತ್ತು ಸಂಸ್ಥೆಯಲ್ಲಿ ನೀಡಲಾಗುವ ಗುಣಮಟ್ಟದ ಶಿಕ್ಷಣಕ್ಕೆ ಸಮನಾಗಿ ಅನುದಾನರಹಿತ ಶಾಲಾಸಂಸ್ಥೆಗಳು ಬೋಧನಾ ಶುಲ್ಕ ವಿಧಿಸಬಹುದು.

  • ಬೋಧನಾ ಶುಲ್ಕದ ಬಾಕಿ ಬಗ್ಗೆ ಸುತ್ತೋಲೆಯಲ್ಲಿ ಉಲ್ಲೇಖಿಸದಿರುವುದರೆಡೆಗೆ ಬೆರಳು ಮಾಡಿರುವ ಅರ್ಜಿದಾರರು, ಹಲವು ಪೋಷಕರು ಕಳೆದ ಶೈಕ್ಷಣಿಕ ವರ್ಷದ ಶುಲ್ಕವನ್ನೇ ಪಾವತಿಸಿಲ್ಲ ಎಂದು ಆತಂಕ ವ್ಯಕ್ತಪಡಿಸಿವೆ.

  • ಏಪ್ರಿಲ್ 24 ಮತ್ತು 28ರಂದು ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಗಳನ್ನು ರದ್ದು ಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.

  • ಮಧ್ಯಂತರ ಪರಿಹಾರವಾಗಿ ಸೆಪ್ಟೆಂಬರ್ 1ರೊಳಗೆ ಕಳೆದ ಶೈಕ್ಷಣಿಕ ವರ್ಷದ ಬಾಕಿ ಶುಲ್ಕ ಹಾಗೂ ಪ್ರಸಕ್ತ ಶೈಕ್ಷಣಿಕ ವರ್ಷದ ಶೇ.50 ಶುಲ್ಕ ಸ್ವೀಕರಿಸಲು ಅನುಮತಿಸುವಂತೆ ಅರ್ಜಿದಾರರು ಕೋರಿದ್ದಾರೆ.