ದಾವೆ

ಕೋವಿಡ್ ಹಿನ್ನೆಲೆಯಲ್ಲಿ ಆಸ್ತಿ ತೆರಿಗೆ ವಿನಾಯಿತಿ ಕೋರಿ ಮನವಿ; ರಾಜ್ಯ ಸರ್ಕಾರ, ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

ಕೋವಿಡ್‌ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅನೇಕ ಬಾಡಿಗೆದಾರರು ಬಾಡಿಗೆ ನೀಡದ ಪರಿಣಾಮ ಮನೆ ಮಾಲೀಕರು ತೊಂದರೆಗೆ ಸಿಲುಕಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಮನೆ ಮಾಲೀಕರು ಆಸ್ತಿ ತೆರಿಗೆ ಕಟ್ಟುವ ಸ್ಥಿತಿಯಲ್ಲಿ ಇಲ್ಲ ಎಂದು ಅಹವಾಲು.

Bar & Bench

ಕೋವಿಡ್‌ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಆರ್ಥಿಕ ಸಂಕಷ್ಟದಿಂದಾಗಿ ಆಸ್ತಿ ತೆರಿಗೆಯಿಂದ ವಿನಾಯಿತಿ ನೀಡುವಂತೆ ನಿರ್ದೇಶನ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು (ಪಿಐಎಲ್) ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ನೋಟಿಸ್‌ ಜಾರಿಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್ ಓಕ ಮತ್ತು ನ್ಯಾಯಮೂರ್ತಿ ಆಶೋಕ್‌ ಎಸ್‌ ಕಿಣಗಿ ನೇತೃತ್ವದ ವಿಭಾಗೀಯ ಪೀಠವು ಪಿಐಎಲ್‌ ವಿಚಾರಣೆ ನಡೆಸುತ್ತಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್‌ ಸಂಕಷ್ಟದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹಾಗೂ ಕೈಗಾರಿಕೆ, ಪ್ರವಾಸೋದ್ಯಮ ಸಹಿತ ವಿವಿಧ ವಲಯಗಳಿಗೆ ಅನೇಕ ರೀತಿಯಲ್ಲಿ ಸಹಾಯ ನೀಡಿವೆ. ಆದರೆ, ವಸತಿ ಮತ್ತು ವಸತಿಯೇತರ ಕಟ್ಟಡಗಳ ಮಾಲೀಕರಿಗೆ ಈ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ರೀತಿಯ ಸವಲತ್ತುಗಳ ಲಭ್ಯವಾಗಿಲ್ಲ ಎನ್ನುವುದನ್ನು ಅರ್ಜಿಯಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ಅರ್ಜಿದಾರರಾದ ವಕೀಲ ಕೆ ಗುರುದತ್ತ ಅವರು ಈ ಸಂಬಂಧ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಮೇ 11ರಂದು ಮನವಿಯೊಂದನ್ನು ನೀಡಿ, ಕೋವಿಡ್‌ ಸನ್ನಿವೇಶದ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಆಸ್ತಿ ತೆರಿಗೆಯನ್ನು ಮನ್ನಾ ಮಾಡುವಂತೆ ಕೋರಿದ್ದರು. ಆದರೆ, ಇದಕ್ಕೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿರಲಿಲ್ಲ. ಹಾಗಾಗಿ, ಅರ್ಜಿದಾರರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸುವ ಮೂಲಕ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.

ಕೋವಿಡ್ ಸಂಕಷ್ಟದಿಂದ ಉಂಟಾಗಿರುವ ಆರ್ಥಿಕ ಹಿನ್ನೆಡೆಯಿಂದಾಗಿ ಬಾಡಿಗೆದಾರರು ಬಾಡಿಗೆಯನ್ನು ನೀಡದೆ ಇರುವ ಪರಿಣಾಮ ಸಾಕಷ್ಟು ಸಂಖ್ಯೆಯಲ್ಲಿ ಆಸ್ತಿ ಮಾಲೀಕರು ಆಸ್ತಿ ತೆರಿಗೆಯನ್ನು ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಈ ಹಿಂದೆ ರಾಜ್ಯದ ಕಂದಾಯ ಸಚಿವರು ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಆಸ್ತಿ ಮಾಲೀಕರು ತಮ್ಮ ಬಾಡಿಗೆದಾರರನ್ನು ಬಾಡಿಗೆಗೆ ಒತ್ತಾಯಿಸುವುದಾಗಲಿ, ಕಟ್ಟಡದಿಂದ ತೆರವುಗೊಳಿಸುವುದಾಗಲಿ ಮಾಡುವಂತಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ, ವಿಪತ್ತು ನಿರ್ವಹಣಾ ಕಾಯಿದೆಯಡಿ ಕ್ರಿಮಿನಲ್‌ ಕ್ರಮ ಜರುಗಿಸಲಾಗುವುದು ಎಂದಿದ್ದರು ಎನ್ನುವುದನ್ನು ಸಹ ಅರ್ಜಿದಾರರು ಪಿಐಎಲ್‌ನಲ್ಲಿ ತಿಳಿಸಿದ್ದಾರೆ.

ಆಗಸ್ಟ್‌ 27ರಂದು ಪ್ರಕರಣ ಮತ್ತೆ ವಿಚಾರಣೆಗೆ ಬರಲಿದೆ. ಅರ್ಜಿದಾರರ ಪರವಾಗಿ ವಕೀಲ ಅಮೃತೇಶ್‌ ನ್ಯಾಯಾಲಯದಲ್ಲಿ ವಾದಿಸಲಿದ್ದಾರೆ.