ದಾವೆ

ಅಂತರ ರಾಜ್ಯ ಪ್ರಯಾಣ ನಿರ್ಬಂಧಗಳಲ್ಲಿ ಸಡಿಲಿಕೆ: ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್

ರಾಜ್ಯ ಸರ್ಕಾರವು ಆಗಸ್ಟ್‌ 24ರಂದು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ಕಡ್ಡಾಯ ಕ್ವಾರಂಟೈನ್ ಮತ್ತು ಸೇವಾ ಸಿಂಧು ಪೋರ್ಟಲ್‌ನಲ್ಲಿನ ನೋಂದಣಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸಿದೆ.

Bar & Bench

ರಾಜ್ಯ ಸರ್ಕಾರವು ಅಂತರ ರಾಜ್ಯ ಓಡಾಟಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಿರುವ ಮಾಹಿತಿ ಪಡೆದ ಹೈಕೋರ್ಟ್‌, ಕರ್ನಾಟಕ-ಕೇರಳ ಗಡಿ ಮುಕ್ತಗೊಳಿಸುವುದನ್ನು ಕೋರಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ವಿಲೇವಾರಿ ಮಾಡಿತು.

ರಾಜ್ಯ ಸರ್ಕಾರವು ಆಗಸ್ಟ್‌ 24ರಂದು ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಲ್ಲಿ ಕಡ್ಡಾಯ ಕ್ವಾರಂಟೈನ್ ಮತ್ತು ಸೇವಾ ಸಿಂಧು ಪೋರ್ಟಲ್ ನಲ್ಲಿ ನೋಂದಣಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.

ರಾಜ್ಯ ಸರ್ಕಾರದ ನಡೆಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾ. ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠವು ವಕೀಲ ನಾಗೇಂದ್ರ ನಾಯ್ಕ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.

“ಪರಿಷ್ಕೃತ ಸುತ್ತೋಲೆಯಲ್ಲಿ ನಿರ್ಧಾರ ದಾಖಲಿಸಿರುವುದರಿಂದ ಅರ್ಜಿಯಲ್ಲಿ ಏನೂ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿ ವಿಲೇವಾರಿ ಮಾಡಲಾಗಿದೆ” ಎಂದು ಪೀಠ ಹೇಳಿತು.

ಕೋವಿಡ್‌ ಲಕ್ಷಣರಹಿತ (ಎಸಿಮ್ಟೋಮ್ಯಾಟಿಕ್) ಪ್ರಯಾಣಿಕರು ಯಾವುದೇ ಸ್ವರೂಪದ 14 ದಿನದ ಹೋಮ್ ಕ್ವಾರಂಟೈನ್‌ಗೆ ಒಳಗಾಗದೆ ಕರ್ತವ್ಯಕ್ಕೆ ಹಾಜರಾಗಬಹುದು ಅಥವಾ ರಾಜ್ಯದಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಆದರೆ, ಕೋವಿಡ್ ಸೋಂಕಿನ ಸೂಚನೆಗಳಾದ ಜ್ವರ, ಕೆಮ್ಮು, ಶೀತ, ಗಂಟಲು ಬೇನೆ, ಉಸಿರಾಟದಲ್ಲಿ ತೊಂದರೆ ಇತ್ಯಾದಿ ಕಾಣಿಸಿಕೊಂಡಲ್ಲಿ ಅಂಥವರು 14 ದಿನಗಳ ತಮ್ಮ ಆರೋಗ್ಯದ ಮೇಲೆ ಸ್ವಯಂ ನಿಗಾ ವಹಿಸಬೇಕು. ಜೊತೆಗೆ ಕಡ್ಡಾಯವಾಗಿ ತಕ್ಷಣ ವೈದ್ಯಕೀಯ ನೆರವು ಕೋರಬೇಕು ಅಥವಾ ಆಪ್ತಮಿತ್ರ ಸಹಾಯವಾಣಿ 14410 ಸಂಪರ್ಕಿಸಬೇಕು.

ಮುಂದುವರೆದು ಸುತ್ತೋಲೆಯಲ್ಲಿ, ಅಂತರ ರಾಜ್ಯ ಪ್ರಯಾಣಿಕರು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯವಲ್ಲ ಎಂದು ಹೇಳಲಾಗಿದೆ. ರಾಜ್ಯದ ಗಡಿ ಅಥವಾ ಬಸ್ಸು, ವಿಮಾನ ನಿಲ್ದಾಣ ಅಥವಾ ರೈಲು ನಿಲ್ದಾಣಗಳಲ್ಲಿ ಅವರನ್ನು ಕಡ್ಡಾಯವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ. ಇದರ ಜೊತೆಗೆ 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಿಸುವುದು ಅಥವಾ ಪ್ರತ್ಯೇಕವಾಗಿಟ್ಟು ತಪಾಸಣೆ ನಡೆಸುವ ವ್ಯವಸ್ಥೆಯನ್ನೂ ಹಿಂಪಡೆಯಲಾಗಿದೆ.

ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ಹೋಮ್ ಕ್ವಾರಂಟೈನ್, ಮನೆಯ ಮೇಲೆ ಪೋಸ್ಟರ್ ಅಂಟಿಸುವುದು, ನೆರೆಹೊರೆಯವರು/ನಿವಾಸಿಗಳ ಕಲ್ಯಾಣ ಸಂಸ್ಥೆಗಳು/ಅಪಾರ್ಟ್ ಮೆಂಟ್ ಮಾಲೀಕರ ಸಂಸ್ಥೆಗಳು, ಪಂಚಾಯಿತಿಗಳಿಂದ ನಿಗಾ/ವಾರ್ಡ್‌ ಮಟ್ಟದ ತಂಡಗಳು, ಫ್ಲೈಯಿಂಗ್ ಸ್ಕ್ವಾಡ್, ಐ ವಿ ಆರ್ ಎಸ್‌ ಕಾಲ್ ಸೆಂಟರ್ ಔಟ್ ಬೌಂಡ್ ಕಾಲ್ ಗಳು ಮತ್ತು ಕ್ವಾರಂಟೈನ್ ವಾಚ್ ಅಪ್ಲಿಕೇಶನ್ ನಿಗಾ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ.

ಕಳೆದ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠವು, ಆಗಸ್ಟ್ 15ರಂದು ಕೇರಳ-ಕರ್ನಾಟಕ ಗಡಿಯನ್ನು ತೆರೆದಿದ್ದರೂ ಅಂತರ ರಾಜ್ಯ ಪ್ರಯಾಣ ಕೈಗೊಳ್ಳುವವರನ್ನು ಕಡ್ಡಾಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿರುವುದು ಮತ್ತು ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾವಣಿ ಸೇರಿದಂತೆ ಹಲವು ಷರತ್ತುಗಳನ್ನು ಗಮನಕ್ಕೆ ತೆಗೆದುಕೊಂಡಿತ್ತು.

ಹಂತಹಂತವಾಗಿ ಮರು ಆರಂಭಿಸುವ (ಅನ್‌ಲಾಕ್ 3) ಜೂನ್‌ 29ರ ನಿಯಮಾವಳಿಗಳ ಐದನೇ ನಿಬಂಧನೆಯನ್ನು ಪರಿಗಣಿಸಿದ ನಂತರ ಅಂತರ ರಾಜ್ಯ ಪ್ರಯಾಣಿಕರ ಮೇಲೆ ನಿರ್ಬಂಧ ವಿಧಿಸಬಹುದೇ ಎಂಬುದಕ್ಕೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ಸೂಚಿಸಿತು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಅನ್ ಲಾಕ್-3 ನಿಯಮಾವಳಿ ಅನುಸಾರ ಅಂತರ ರಾಜ್ಯ ಓಡಾಟಕ್ಕೆ ಪ್ರತ್ಯೇಕವಾಗಿ ಅನುಮತಿ, ಒಪ್ಪಿಗೆ, ಇ-ಪರ್ಮಿಟ್ ಪಡೆಯುವ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಇದೇ ತಳಹದಿಯ ಮೇಲೆ ಕರ್ನಾಟಕ ಹೈಕೋರ್ಟ್ ನಿನ್ನೆ ತಮಿಳುನಾಡು-ಕರ್ನಾಟಕ ಗಡಿಯನ್ನು ಅಂತರ ರಾಜ್ಯ ಪ್ರಯಾಣಕ್ಕೆ ಮುಕ್ತಗೊಳಿಸುವಂತೆ ಕೋರಿದ್ದ ಅರ್ಜಿಯನ್ನೂ ವಿಲೇವಾರಿ ಮಾಡಿತ್ತು.