ದಾವೆ

ವೇದಾಂತ ಸ್ಟೆರಲೈಟ್ ತಾಮ್ರ ಘಟಕದ‌ ಮರು ಆರಂಭ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್‌ ಹೈಕೋರ್ಟ್‌

Bar & Bench

ತಮಿಳುನಾಡಿನ ತೂತ್ತುಕುಡಿಯಲ್ಲಿ ಮುಚ್ಚಲಾಗಿರುವ ತನ್ನ ಸ್ಟೆರಲೈಟ್‌ ಕಾಪರ್‌ ಪ್ಲ್ಯಾಂಟ್‌ (ತಾಮ್ರ ಸಂಸ್ಕರಣಾ ಘಟಕ) ಅನ್ನು ಮರು ಆರಂಭಿಸಲು ವೇದಾಂತ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ಇಂದು ವಜಾಗೊಳಿಸಿದೆ. ಕೆಲ ವಾರಗಳ ಮಟ್ಟಿಗಾದರೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ವೇದಾಂತ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಆರ್ಯಮಾ ಸುಂದರಂ ಅವರ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತು.

ನ್ಯಾಯಮೂರ್ತಿಗಳಾದ ಟಿ ಎಸ್‌ ಶಿವಜ್ಞಾನಂ ಮತ್ತು ಭುವನಿ ಸುಬ್ಬೊರೊಯನ್‌ ಅವರಿದ್ದ ವಿಭಾಗೀಯ ಪೀಠವು ಇಂದು ತೀರ್ಪು ನೀಡಿತು. ಈ ಸಂಬಂಧದ ವಿಚಾರಣೆಯು ಈ ವರ್ಷದ ಜನವರಿಯಲ್ಲೇ ಮುಗಿದು ತೀರ್ಪನ್ನು ಕಾಯ್ದಿರಿಸಲಾಗಿತ್ತು. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀರ್ಪು ನೀಡುವಿಕೆಯು ಮುಂದೂಡಲ್ಪಟ್ಟಿತ್ತು.

ಈ ವಿಷಯವಾಗಿ ತೀರ್ಪು ನೀಡುವ ವೇಳೆ ತಿಳಿಸಿದ ಪೀಠವು, ಕೋವಿಡ್-19ರ ಸಾಂಕ್ರಾಮಿಕತೆಯ ಪರಿಸ್ಥಿತಿ ಉದ್ಭವಿಸದೆ ಹೋಗಿದ್ದಲ್ಲಿ ಮಾರ್ಚ್‌ 12ರ ವೇಳೆಗೆಲ್ಲಾ ತೀರ್ಪನ್ನು ನೀಡಲಾಗಿರುತ್ತಿತ್ತು ಎಂದು ತಿಳಿಸಿತು. ಕೋವಿಡ್‌ 19ರ ನಿರ್ಬಂಧದ ಕಾರಣದಿಂದಾಗಿ ತೀರ್ಪಿನ ಆದೇಶಗಳನ್ನು ಫೋನ್‌ ಮುಖೇನ ನೀಡಲಾಯಿತು ಎಂದು ನ್ಯಾಯಮೂರ್ತಿ ಶಿವಜ್ಞಾನಂ ತಿಳಿಸಿದರು. ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಚಂದ್ರಚೂಡ್‌ ಅವರ ಮೇಲ್ಪಂಕ್ತಿಯನ್ನು ಇಲ್ಲಿ ನೆನೆಯಬಹುದು.

ಪರಿಸರ ಸಂಬಂಧಿ ನಿಯಮಾವಳಿಗಳ ಉಲ್ಲಂಘನೆಯ ಕಾರಣದಿಂದಾಗಿ ತೂತ್ತುಕುಡಿಯಲ್ಲಿನ ವೇದಾಂತದ ಸ್ಟೆರಲೈಟ್‌ ತಾಮ್ರ ಸಂಸ್ಕರಣಾ ಘಟಕವನ್ನು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯು 2018ರಲ್ಲಿ ಮುಚ್ಚಿಸಿತ್ತು. ಕಾರ್ಖಾನೆಯನ್ನು ವಿಸ್ತರಿಸಲು ಮುಂದಾದ ಕ್ರಮದಿಂದ ರೊಚ್ಚಿಗೆದ್ದ ಸ್ಥಳೀಯರು ಬೃಹತ್‌ ಪ್ರಮಾಣದಲ್ಲಿ ಪ್ರತಿಭಟನೆಯನ್ನು ನಡೆಸಲು ಆರಂಭಿಸಿದ ನಂತರದ ಘಟನಾವಳಿಗಳಲ್ಲಿ ಘಟಕವನ್ನು ಮುಚ್ಚಲಾಗಿತ್ತು. ಪ್ರತಿಭಟನೆಯ ಹಿಂಸಾಚಾರಕ್ಕೆ ತಿರುಗಿದ ಸಂದರ್ಭದಲ್ಲಿ ನಡೆದ ಗೋಲಿಬಾರ್‌ ನಿಂದಾಗಿ 13 ಮಂದಿ ಮೃತರಾಗಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದನ್ನು ನೆನೆಯಬಹುದು.

ತಮಿಳುನಾಡು ಸರ್ಕಾರದ ಆದೇಶವನ್ನು ತಿರಸ್ಕರಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) ಘಟಕದ ಪುನಾರಂಭಕ್ಕೆ ಆದೇಶ ನೀಡಿತ್ತು. ಆದರೆ, ಎನ್‌ ಜಿಟಿಗೆ ಈ ಪ್ರಕರಣವನ್ನು ಆಲಿಸುವ ನ್ಯಾಯಾಂಗ ವ್ಯಾಪ್ತಿಯಿಲ್ಲ ಎನ್ನುವ ಆಧಾರದಲ್ಲಿ ಸುಪ್ರೀಂಕೋರ್ಟ್‌ ಈ ಆದೇಶವನ್ನು ಬದಿಗೆ ಸರಿಸಿತ್ತು. ಅಲ್ಲದೆ, ಕಾರ್ಖಾನೆ ಮುಚ್ಚುವಿಕೆಯ ಆದೇಶವನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ ನಲ್ಲಿ ಮನವಿ ಸಲ್ಲಿಸಲು ಸುಪ್ರೀಂಕೋರ್ಟ್‌ ಅರ್ಜಿದಾರರಿಗೆ ಸೂಚಿಸಿತ್ತು. ಹೀಗೆ ವೇದಾಂತವು ಮದ್ರಾಸ್‌ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಂತರ ಪ್ರಸಕ್ತ ತೀರ್ಪು ಬಂದಿದೆ.