Udaya Holla and NLSIU
Udaya Holla and NLSIU 
ದಾವೆ

ಎನ್‌ಎಲ್ಎಸ್‌ಐಯು ರಾಜ್ಯ ವಿಶ್ವವಿದ್ಯಾಲಯವಲ್ಲ, ರಾಜ್ಯದಿಂದ ಕಡಿಮೆ ಅನುದಾನ ಬಿಡುಗಡೆ: ಹೈಕೋರ್ಟ್‌ಗೆ ಹೊಳ್ಳ ಮಾಹಿತಿ

Bar & Bench

ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಂತೆ ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯು (ಎನ್‌ಎಲ್ಎಸ್ಐಯು) ರಾಜ್ಯ ವಿಶ್ವವಿದ್ಯಾಲಯವಲ್ಲ ಎಂದು ಎನ್‌ಎಲ್ಎಸ್ಐಯು ಪರವಾದಿಸುತ್ತಿರುವ ಹಿರಿಯ ವಕೀಲ ಉದಯ್ ಹೊಳ್ಳ ಗುರುವಾರ ಹೈಕೋರ್ಟ್‌ ಗೆ ವಿವರಿಸಿದರು.

“ನಾವು (ಎನ್‌ಎಲ್ಎಸ್ಐಯು) ರಾಜ್ಯ ವಿಶ್ವವಿದ್ಯಾಲಯ ಎಂಬ ರಾಜ್ಯ ಸರ್ಕಾರದ ಸಲ್ಲಿಸಿರುವ ಹೇಳಿಕೆ ಸರಿಯಲ್ಲ” ಎಂದರು.

ಬೆಂಗಳೂರಿನ ಎನ್‌ಎಲ್ಎಸ್ಐಯುನಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಸ್ಥಳೀಯರಿಗೆ ಶೇ.25 ಮೀಸಲಾತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ.

ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ರವಿ ಹೊಸಮನಿ ಅವರಿದ್ದ ವಿಭಾಗೀಯ ಪೀಠದ ಮುಂದೆ ವಾದಿಸಿದ ಹೊಳ್ಳ ಅವರು ಸ್ಥಳೀಯರಿಗೆ ಶೇ.25 ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಎನ್‌ಎಲ್ಎಸ್ಐಯು ಕಾರ್ಯಕಾರಿ ಸಮಿತಿಯು ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಪ್ರಕರಣದ ನಿರ್ಧಾರವನ್ನು ನ್ಯಾಯಾಲಯಕ್ಕೆ ಬಿಡಲಾಗಿದೆ ಎಂದರು.

“ಎನ್‌ಎಲ್ಎಸ್ಐಯುಗೆ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನ ಅತ್ಯಂತ ಕಡಿಮೆ. ಪ್ರಸಕ್ತ ವರ್ಷದಲ್ಲಿ ರಾಜ್ಯ ಸರ್ಕಾರವು ಎನ್‌ಎಲ್ಎಸ್ಐಯುಗೆ 50 ಲಕ್ಷ ರೂಪಾಯಿ ಅನುದಾನ ನೀಡಿದೆ. ಕಳೆದ 16 ವರ್ಷಗಳಲ್ಲಿ ಸರಾಸರಿ 50 ಲಕ್ಷ ರೂಪಾಯಿ ಅನುದಾನ ನೀಡಿದೆ” ಎಂದು ಹೊಳ್ಳ ಅವರು ನ್ಯಾಯಾಲಯಕ್ಕೆ ವಿವರಿಸಿದರು.

“ಸಾಮಾನ್ಯ ಕೋರ್ಸ್‌ ಗಳು ಮತ್ತು ದೂರ ಶಿಕ್ಷಣ ಕೋರ್ಸ್‌ ಗಳಿಗೆ ವಿದ್ಯಾರ್ಥಿಗಳಿಗೆ ವಿಧಿಸಲಾಗುವ ಶುಲ್ಕವೇ ವಿಶ್ವವಿದ್ಯಾಲಯದ ಪ್ರಮುಖ ಆದಾಯ ಮೂಲವಾಗಿದೆ” ಎಂದಿದ್ದಾರೆ.

ಕರ್ನಾಟಕದ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ. 5ರಷ್ಟು ರಿಯಾಯಿತಿ ಅಂಕ ನೀಡುವುದರ ಬಗ್ಗೆ ಪ್ರತಿಕ್ರಿಯಿಸಿದ ಹೊಳ್ಳ ಅವರು, ಶೇ.25 ಮೀಸಲಾತಿ ಅಡಿ ರಿಯಾಯಿತಿ ಕಲ್ಪಿಸಿದ ಮೇಲೆ ಯಾವೊಬ್ಬ ಅಭ್ಯರ್ಥಿಗೂ ಒಟ್ಟಾರೆ ಅಂಕಕ್ಕಿಂತ ಹೆಚ್ಚಿನ ಅಂಕ ನೀಡಲಾಗುವುದಿಲ್ಲ ಎಂದರು.

ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಪ್ರತಿನಿಧಿಸುತ್ತಿರುವ ವಕೀಲ ಶ್ರೀಧರ್ ಪ್ರಭು ಅವರು “ತನ್ನ ಚಟುವಟಿಕೆಗಳನ್ನ ನಿರ್ವಹಿಸುವುದರ ಕುರಿತು ರಾಜ್ಯ ಸರ್ಕಾರವು ಎನ್‌ಎಲ್ಎಸ್ಐಯುಗೆ ನಿರ್ದೇಶಿಸಲಾಗದು” ಎಂದರು.

ಮುಂದುವರೆದು ವಾದಿಸಿದ ಅವರು “ಶೇ.25 ಮೀಸಲಾತಿ ಲಾಭ ಪಡೆಯಲು ವಿದ್ಯಾರ್ಥಿಯು ಕಳೆದ 10 ವರ್ಷ ಕರ್ನಾಟಕದಲ್ಲಿ ಶಿಕ್ಷಣ ಪೂರೈಸಿದ್ದಾರೆ ಎಂಬುದನ್ನು ಯಾರು ದೃಢೀಕರಿಸುತ್ತಾರೆ? ವಿದ್ಯಾರ್ಥಿಯೇ ಅದನ್ನು ಮಾಡುತ್ತಾರೆಯೇ?" ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಪರ ಸೋಮವಾರ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ವಾದಿಸಲಿದ್ದಾರೆ ಎಂದು ಸರ್ಕಾರದ ಅರ್ಜಿದಾರರಾದ ವಿಕ್ರಂ ಹುಯಿಲಗೋಳ ನ್ಯಾಯಾಲಯಕ್ಕೆ ವಿವರಿಸಿದರು. ಉಳಿದ ಎಲ್ಲಾ ಅರ್ಜಿದಾರರು ತಮ್ಮ ವಾದವನ್ನು ಮಂಡಿಸಿಯಾಗಿದೆ. ಆಗಸ್ಟ್‌ 31ಕ್ಕೆ ವಿಚಾರಣೆ ನಿಗದಿಗೊಳಿಸಲಾಗಿದೆ.