ದಾವೆ

ಜೆಇಇ, ನೀಟ್ - ಯುಜಿ ಪರೀಕ್ಷೆಗಳನ್ನು ನಿಗದಿಯಂತೆ ಸೆಪ್ಟೆಂಬರ್‌ ನಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಗೆ ಪೋಷಕರ ಸಂಘದ ಮನವಿ

ಪರೀಕ್ಷೆಗಳನ್ನು ನಡೆಸಲು ಸಾಂಕ್ರಾಮಿಕ ರೋಗವು ಸೃಷ್ಟಿಸಿರುವ ಸಮಸ್ಯೆಗಳು ಅಡ್ಡಿಯಾಗುತ್ತವೆ ಎನ್ನುವ ವಾದವನ್ನು ಮನವಿಯು ಅಲ್ಲಗಳೆದಿದೆ. ಇದಾಗಲೇ ಹಲವಾರು ಪರೀಕ್ಷೆಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸಿದೆ ಎಂದು ತಿಳಿಸಿದೆ.

Bar & Bench

ಪರಿಷ್ಕೃತ ವೇಳಾಪಟ್ಟಿಯಂತೆ ಸೆಪ್ಟೆಂಬರ್ ನಲ್ಲಿ ಎನ್‌ಇಇಟಿ (ನೀಟ್) ಯುಜಿ - 20 ಮತ್ತು ಜೆಇಇ (ಮೈನ್) - 20 ಪ್ರವೇಶ ಪರೀಕ್ಷೆಗಳನ್ನು ನಡೆಸುವಂತೆ ವಿದ್ಯಾರ್ಥಿಗಳ ಪೋಷಕರ ಒಕ್ಕೂಟವೊಂದು ಸುಪ್ರೀಂ ಕೋರ್ಟ್‌ ನಲ್ಲಿ ಮನವಿ ಸಲ್ಲಿಸಿದೆ. ಗುಜರಾತ್‌ ಪೋಷಕರ ಸಂಘವು ಸಂವಿಧಾನದ 32ನೇ ವಿಧಿಯನ್ವಯ ಮನವಿ ಸಲ್ಲಿಸಿದ್ದು, ಜಯಕೀರ್ತಿ ಎಸ್ ಜಡೇಜಾ ಅವರು ಅಡ್ವೊಕೇಟ್‌ ಆನ್‌ ರೆಕಾರ್ಡ್‌ ಆಗಿದ್ದು (ದಾಖಲೆಗಳಲ್ಲಿರುವಂತೆ ನ್ಯಾಯವಾದಿ) ನ್ಯಾಯವಾದಿ ಮಿತುಲ್‌ ಕೆ ಶೆಲಟ್ ವಾದ ಮಂಡಿಸಲಿದ್ದಾರೆ.

ಒಂದು ವೇಳೆ ಪ್ರವೇಶ ಪರೀಕ್ಷೆಯನ್ನು ಮತ್ತೊಮ್ಮೆ ಮುಂದೂಡಿದರೆ ಉಂಟಾಗುವ ದುಷ್ಟರಿಣಾಮಗಳ ಬಗ್ಗೆ ಮನವಿಯಲ್ಲಿ ಬೆಳಕು ಚೆಲ್ಲಲಾಗಿದ್ದು, 2020-202ನೇ ಬ್ಯಾಚಿನ ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಕೆಡೆಮಿಕ್‌ ಶಿಕ್ಷಣವು ವ್ಯರ್ಥವಾಗಲಿದೆ ಎಂದು ನಿರ್ದಿಷ್ಟವಾಗಿ ತಿಳಿಸಲಾಗಿದೆ.

ಕೆಲ ದಿನದ ಹಿಂದೆ 11 ಜನ ಎನ್‌ಇಇಟಿ-ಯುಜಿ ಮತ್ತು ಜೆಇಇ ವಿದ್ಯಾರ್ಥಿಗಳ ಗುಂಪೊಂದು ಸೆಪ್ಟೆಂಬರ್‌ ನ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿತ್ತು. ಕೊರೊನಾ ವೈರಸ್‌ ನಿಂದಾಗಿ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಮನವಿ ಮಾಡಿತ್ತು.

ಆದರೆ, ಮತ್ತೊಂದೆಡೆ, ಪರೀಕ್ಷೆಯನ್ನು ಎರಡನೇ ಬಾರಿಗೆ ಪರಿಷ್ಕೃತ ವೇಳಾಪಟ್ಟಿಯಂತೆ ನಡೆಸುವುದು ಅತ್ಯಗತ್ಯವಾಗಿದೆ ಎಂದಿರುವ ಪೋಷಕರು, ಸುಪ್ರೀಂ ಕೋರ್ಟಿನ ಆದೇಶದ ಮೇರೆಗೆ ಇಡೀ ದಾಖಲಾತಿ ಪ್ರಕ್ರಿಯೆಯು ಕಾಲಮಿತಿಗೆ ಒಳಪಟ್ಟಿದೆ. ಈ ವಿಚಾರವನ್ನು ಇದಾಗಲೇ ಸುಪ್ರೀಂ ಕೋರ್ಟ್‌ ನಿರ್ಧರಿಸಿದ್ದು, ಇದರಲ್ಲಿ ಮತ್ತೆ ಬದಲಾವಣೆ ಅಗತ್ಯವಿರುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪರೀಕ್ಷೆಗಳು ಬಹು ಮುಖ್ಯವಾಗಿದ್ದು ಅವು ವಿದ್ಯಾರ್ಥಿಗಳ ವೃತ್ತಿಜೀವನ ಹಾಗೂ ಬದುಕನ್ನು ನಿರ್ಧರಿಸುತ್ತವೆ. ಮತ್ತೊಮ್ಮೆ ಪರೀಕ್ಷೆಗಳ ಮುಂದೂಡುವಿಕೆಯು ವಿದ್ಯಾರ್ಥಿಗಳ ಮೇಲೆ ಇದಾಗಲೇ ಇರುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸಲಿದೆ.
ಗುಜರಾತ್‌ ಪೋಷಕರ ಸಂಘದ ಮನವಿ

ದಾಖಲಾತಿ ಪ್ರಕ್ರಿಯೆಯು ವಿಶೇಷವಾಗಿದ್ದು, ಶಾಸನಬದ್ಧ ನಿಗದಿತ ಕಾಲಮಿತಿಯ ನಿಯಂತ್ರಣಕ್ಕೊಳಪಟ್ಟಿದೆ. ಇದರ ಅನ್ವಯ 3 ಹಂತಗಳಲ್ಲಿ ಪ್ರಕ್ರಿಯೆ ನಡೆಯುತ್ತದೆ ಎಂದು ವಿವರಿಸಲಾಗಿದೆ. ವಿದ್ಯಾರ್ಥಿಗಳು ನೀಟ್‌/ಜೆಇಇ ಪರೀಕ್ಷೆಗಳಿಗೆ, ಹತ್ತನೇ ತರಗತಿಯಲ್ಲಿರುವಾಗಿನಿಂದ ಅಂದರೆ ಕಳೆದ 3 ವರ್ಷಗಳಿಂದ ಗಂಭೀರವಾಗಿ ತಯ್ಯಾರಿ ನಡೆಸಿದ್ದಾರೆ. ಹಾಗಾಗಿ ಮತ್ತಷ್ಟು ಪರೀಕ್ಷೆಯನ್ನು ನಡೆಸುವಲ್ಲಿ ಮತ್ತಷ್ಟು ವಿಳಂಬ ಕೂಡದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

“ಪರೀಕ್ಷೆಗಳು ಬಹು ಮುಖ್ಯವಾಗಿದ್ದು ಅವು ವಿದ್ಯಾರ್ಥಿಗಳ ವೃತ್ತಿಜೀವನ ಹಾಗೂ ಬದುಕನ್ನು ನಿರ್ಧರಿಸುತ್ತವೆ. ಮತ್ತೊಮ್ಮೆ ಪರೀಕ್ಷೆಗಳ ಮುಂದೂಡುವಿಕೆಯು ವಿದ್ಯಾರ್ಥಿಗಳ ಮೇಲೆ ಇದಾಗಲೇ ಇರುವ ಒತ್ತಡವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದು ಅವರನ್ನು ಭವಿಷ್ಯದೆಡೆಗೆ ಆತಂಕಿತರನ್ನಾಗಿಸಿ ಮತ್ತಷ್ಟು ಮಾನಸಿಕ ಕ್ಷೋಭೆಗೆ ದೂಡಲಿದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯ ಮೇಲೆ ಪರಿಣಾಮ ಉಂಟಾಗುತ್ತದೆ,” ಎಂದು ಮನವಿಯಲ್ಲಿ ತಿಳಿಸಲಾಗಿದೆ.