ಕೋವಿಡ್ -19 ಜಾಗತಿಕ ಸೋಂಕಿನ ನಡುವೆ ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದದ ಕಡೆಯಿಂದ ತಯಾರಿಸಲಾದ ರೋಗ ನಿರೋಧಕ ಉತ್ಪನ್ನಕ್ಕೆ “ಕೊರೊನಿಲ್” ಎನ್ನುವ ಟ್ರೇಡ್ ಮಾರ್ಕ್ ಬಳಸಿದ್ದಕ್ಕೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಗುರುವಾರ ಮದ್ರಾಸ್ ಹೈಕೋರ್ಟ್ ಖಾಯಂಗೊಳಿಸಿ ಆದೇಶಿಸಿದೆ.
ಕಳೆದ ತಿಂಗಳು ಚೆನ್ನೈ ಮೂಲದ ಆರುದ್ರ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪರವಾಗಿ ಮಧ್ಯಂತರ ಆದೇಶವನ್ನು ಕೋರ್ಟ್ ನೀಡಿತ್ತು. ಆರುದ್ರ ಸಂಸ್ಥೆಯು ‘ಕೊರೊನಿಲ್ - 92 B’ ಎನ್ನುವ ಹೆಸರಿನಲ್ಲಿ ಟ್ರೇಡ್ ಮಾರ್ಕ್ ಹೊಂದಿದೆ. ಕೈಗಾರಿಕಾ ಸ್ವಚ್ಛತೆಗೆ ಸಂಬಂಧಿಸಿದ ಉತ್ಪನ್ನಗಳು ಹಾಗೂ ಕೈಗಾರಿಕಾ ಬಳಕೆಗೆ ಬೇಕಾಗುವ ರಾಸಾಯನಿಕಗಳನ್ನು ಸಂಸ್ಥೆಯು ತಯಾರಿಸುತ್ತದೆ. ಕೊರೊನಿಲ್ ಟ್ರೇಡ್ ಮಾರ್ಕ್ ಅನ್ನು ಸಂಸ್ಥೆಯು ರಾಸಾಯನಿಕ ಸವೆತವನ್ನು ತಡೆಯುವ ತನ್ನ ಆಸಿಡ್ ಉತ್ಪನ್ನವೊಂದಕ್ಕೆ 1993ರಲ್ಲಿ ಪಡೆದಿತ್ತು. ಪತಂಜಲಿಯು ಕೊವಿಡ್ - 19 ರೋಗವನ್ನು ಗುಣಪಡಿಸುವುದಾಗಿ ಹೇಳಿಕೊಂಡಿದ್ದ ತನ್ನ ಉತ್ಪನ್ನಕ್ಕೆ ಇದೇ ಹೆಸರನ್ನು ಇಟ್ಟಿದ್ದನ್ನು ಆಕ್ಷೇಪಿಸಿ ಆರುದ್ರ ಸಂಸ್ಥೆಯು ಮದ್ರಾಸ್ ಹೈಕೋರ್ಟ್ ನ ಮೊರೆ ಹೋಗಿತ್ತು.
"ಪ್ರತಿವಾದಿಗಳು ತಮ್ಮದು ರೂ.10000 ಕೋಟಿಯ ಸಂಸ್ಥೆ ಎಂದು ಪದೇಪದೇ ಬಿಂಬಿಸಿಕೊಂಡಿದ್ದಾರೆ. ಆದರೆ, ಅವರು ಈಗಲೂ ಸಹ ಜನಸಾಮಾನ್ಯರಲ್ಲಿ ಕೊರೊನಾ ವೈರಸ್ ಬಗೆಗಿರುವ ಭೀತಿಯನ್ನು ಬಳಸಿಕೊಂಡು ಅದನ್ನು ಗುಣಪಡಿಸುವುದಾಗಿ ಬಿಂಬಿಸಿ ಲಾಭವನ್ನು ಬೆನ್ನಟ್ಟುತ್ತಿದ್ದಾರೆ. ನಿಜದಲ್ಲಿ ಅವರ ‘ಕೊರೊನಿಲ್ ಟ್ಯಾಬ್ಲೆಟ್’ ಖಾಯಿಲೆಯನ್ನು ಗುಣಪಡಿಸುವುದಿಲ್ಲ, ಬದಲಿಗೆ ಅದು ಕೆಮ್ಮು, ನೆಗಡಿ ಮತ್ತು ಜ್ವರದ ವಿರುದ್ಧ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ ಅಷ್ಟೇ"ಮದ್ರಾಸ್ ಹೈಕೋರ್ಟ್
ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ಹೈಕೋರ್ಟ್, “ಹೆಸರುಗಳಲ್ಲಿನ ಸಾಮ್ಯತೆಯು ನಿಸ್ಸಂಶಯದಿಂದ ಕೂಡಿದೆ”, ಎಂದು ಹೇಳಿ ಜುಲೈ 30ರವರೆಗೆ “ಕೊರೊನಿಲ್” ಟ್ರೇಡ್ ಮಾರ್ಕ್ ಅನ್ನು ಬಳಸದಂತೆ ಪತಂಜಲಿಗೆ ಸೂಚಿಸಿ ಮಧ್ಯಂತರ ಆದೇಶ ನೀಡಿತ್ತು. ಈ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಪತಂಜಲಿ ಮತ್ತು ದಿವ್ಯ ಯೋಗ ಮಂದಿರ ಟ್ರಸ್ಟ್ ಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಿ ವಿ ಕಾರ್ತಿಕೇಯನ್ ಅವರು ವಜಾ ಮಾಡುವುದರ ಜೊತೆಗೆ ಇಬ್ಬರು ಅರ್ಜಿದಾರರಿಗೂ ರೂ.10 ಲಕ್ಷ ವೆಚ್ಚವನ್ನು ಭರಿಸುವಂತೆ ಆದೇಶಿಸಿದ್ದಾರೆ.
ಅರ್ಜಿದಾರರಾದ ಆರುದ್ರ ಅವರಿಗೆ ಸಂಬಂಧಿಸಿದ ಟ್ರೇಡ್ ಮಾರ್ಕ್ ಹಕ್ಕಿನ ಉಲ್ಲಂಘನೆಯನ್ನು ಪ್ರತಿವಾದಿಗಳಾದ ಪತಂಜಲಿ ಮತ್ತು ಯೋಗ ಮಂದಿರ ಟ್ರಸ್ಟ್ ಉಲ್ಲಂಘಿಸಿರುವುದಾಗಿ ನ್ಯಾಯಾಲಯವು ಸ್ಪಷ್ಟವಾಗಿ ತನ್ನ ತೀರ್ಪಿನಲ್ಲಿ ಹೇಳಿದೆ. ಈ ಸಂಬಂಧ ಅದು ಕೆಳಗಿನ ಪ್ರಮುಖ ಅಂಶಗಳನ್ನು ಪರಿಗಣಿಸಿದೆ:
ಆರುದ್ರ “ಕೊರೊನಿಲ್ - 92 B” ಮತ್ತು “ಕೊರೊನಿಲ್ - 213SPL” ಈಗಲೂ ಚಾಲ್ತಿಯಲ್ಲಿದೆ.
ಪ್ರತಿವಾದಿಗಳು ತಮ್ಮ ‘ಕೊರೊನಿಲ್ ಟ್ಯಾಬ್ಲೆಟ್’ ನೊಂದಾವಣೆಯಾಗಿರುವುದನ್ನು ನಿರೂಪಿಸುವಲ್ಲಿ ಸೋತಿದ್ದಾರೆ. ಬದಲಿಗೆ, ಪ್ರತಿವಾದಿಗಳು ನೊಂದಾವಣೆಗೆ ಅರ್ಜಿ ಸಲ್ಲಿಕೆಯನ್ನಷ್ಟೇ ಮಾಡಿದ್ದು, ಅದರ ಪ್ರಕ್ರಿಯೆಯು ಇನ್ನೂ ಆರಂಭದ ಹಂತದಲ್ಲಿದೆ.
‘ಕೊರೊನಿಲ್’ ಎನ್ನುವ ಪದವು ಒಂದೇ ಅಗಿದ್ದು, ಸಾಮ್ಯತೆ ಹೊಂದಿದೆ.
ಅರ್ಜಿದಾರರು ತಮ್ಮ ಉತ್ಪನ್ನವನ್ನು ‘ಕೊರೊನಿಲ್’ ಎಂದು ಕರೆಯಲು ಕಾರಣವಾದ ಅಂಶದ ಬಗ್ಗೆ ಸೂಕ್ತವಾಗಿ ನಿರೂಪಿಸಿಲ್ಲ. ಅಲ್ಲದೆ, ಇದು ಕೊರೊನಾವೈರಸ್‌ಗೆ ಇದು ಚಿಕಿತ್ಸೆಯೆಂದು ನೇರವಾಗಿ ನಿರೂಪಿಸುವ ಯಾವುದೇ ದಾಖಲೆಗಳನ್ನು ನೀಡಿಲ್ಲ. ಕೊರೊನಾ ಗುಣಪಡಿಸುತ್ತದೆ ಎಂದು ಬಿಂಬಿಸಿದ ಈ ಸಂಬಂಧದ ವರದಿಗಳ ಬಗ್ಗೆ ನವದೆಹಲಿಯ ಆಯುಷ್ ಸಚಿವಾಲಯವು ಸಹ ಆಕ್ಷೇಪ ವ್ಯಕ್ತಪಡಿಸಿದೆ.
ಮುಂದುವರೆದು ನ್ಯಾಯಾಲಯವು, “… ಪ್ರತಿವಾದಿಗಳು ತಮ್ಮದು ರೂ.10000 ಕೋಟಿಯ ಸಂಸ್ಥೆ ಎಂದು ಪದೇಪದೇ ಬಿಂಬಿಸಿಕೊಂಡಿದ್ದಾರೆ. ಆದರೆ, ಅವರು ಈಗಲೂ ಸಹ ಜನಸಾಮಾನ್ಯರಲ್ಲಿ ಕೊರೊನಾ ವೈರಸ್ ಬಗೆಗಿರುವ ಭೀತಿಯನ್ನು ಬಳಸಿಕೊಂಡು ಅದನ್ನು ಗುಣಪಡಿಸುವುದಾಗಿ ಬಿಂಬಿಸಿ ಲಾಭವನ್ನು ಬೆನ್ನಟ್ಟುತ್ತಿದ್ದಾರೆ. ನಿಜದಲ್ಲಿ ಅವರ ‘ಕೊರೊನಿಲ್ ಟ್ಯಾಬ್ಲೆಟ್’ ಖಾಯಿಲೆಯನ್ನು ಗುಣಪಡಿಸುವುದಿಲ್ಲ, ಬದಲಿಗೆ ಅದು ಕೆಮ್ಮು, ನೆಗಡಿ ಮತ್ತು ಜ್ವರದ ವಿರುದ್ಧ ರೋಗನಿರೋಧಕತೆಯನ್ನು ಹೆಚ್ಚಿಸುತ್ತದೆ ಅಷ್ಟೇ,” ಎಂದು ಪತಂಜಲಿ ಸಂಸ್ಥೆಗೆ ತಪರಾಕಿ ನೀಡಿದೆ.
ಇದೇ ವೇಳೆ, “ಈ ಸಂಕಷ್ಟದ ಸಂದರ್ಭದಲ್ಲಿ ಯಾವುದೇ ಪ್ರಚಾರದ ಉದ್ದೇಶವಿಲ್ಲದೆ ಅನೇಕ ಸಂಸ್ಥೆಗಳು ಜನತೆಗೆ ಸಹಾಯ ಮಾಡುತ್ತಿವೆ ಎನ್ನುವುದನ್ನು ಪ್ರತಿವಾದಿಗಳು ತಿಳಿಯಬೇಕು. ಅಂತಹವರಿಗೆ ವೆಚ್ಚಭರಿಕೆಯನ್ನು ಸಲ್ಲಿಸುವುದು ಸೂಕ್ತ” ಎಂದು ನ್ಯಾಯಾಲಯವು ಸೂಚಿಸಿತು. ಈ ಅಂಶಗಳ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಪ್ರತಿವಾದಿಗಳಿಬ್ಬರೂ ತಲಾ ರೂ.5 ಲಕ್ಷವನ್ನು ಆದ್ಯಾರ್ ಕ್ಯಾನ್ಸರ್ ಸಂಸ್ಥೆ ಹಾಗೂ ಅರುಂಬಕಂ ನಲ್ಲಿರುವ ಸರ್ಕಾರಿ ಯೋಗ ಮತ್ತು ನ್ಯಾಚುರೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ನೀಡುವಂತೆ ಆದೇಶಿಸಿದರು. “ಈ ಸಂಸ್ಥೆಗಳಲ್ಲಿ ಉಚಿತ ವೈದ್ಯಕೀಯ ಶುಶ್ರೂಷೆಯನ್ನು ಯಾವುದೇ ಟ್ರೇಡ್ ಮಾರ್ಕ್, ಟ್ರೇಡ್ ನೇಮ್, ಪೇಟೆಂಟ್ ಅಥವಾ ಡಿಸೈನ್ ಗಳಿಗೆ ಹಕ್ಕುಸಲ್ಲಿಸದೆ ಕೇವಲ ಸೇವೆಯ ಸದುದ್ದೇಶದಿಂದ ನೀಡಲಾಗುತ್ತಿದೆ,” ಎನ್ನುವ ಮೂಲಕ ಪ್ರತಿವಾದಿಗಳ ಬುದ್ಧಿವಾದ ಹೇಳಿದರು.