ಇದೇ ಆಗಸ್ಟ್ 19ರಂದು ನಡೆಯಲಿರುವ ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟದ (ಕಾಮೆಡ್ ಕೆ) ಪ್ರವೇಶ ಪರೀಕ್ಷೆಗಳನ್ನು ತಡೆಹಿಡಿಯುವಂತೆ ಕೋರಿ ರಾಜ್ಯದ ವಕೀಲರೊಬ್ಬರು ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ.
ಅಬ್ದುಲ್ಲಾ ಮನನ್ ಖಾನ್ ಎನ್ನುವವರು ಸಲ್ಲಿಸಿರುವ ಅರ್ಜಿಯಲ್ಲಿ ಕಾಮೆಡ್ ಕೆ ಪ್ರವೇಶ ಪರೀಕ್ಷೆಗಳನ್ನು ನೀಟ್, ಜೆಇಇ ಪರೀಕ್ಷೆಗಳ ನಂತರ ನಡೆಸುವಂತೆ ಹಾಗೂ “ಕೊರೊನಾ ಸಂಕಷ್ಟ” ನೀಗಿದ ನಂತರ, ವಿವಿಧ ರಾಜ್ಯಗಳ ಲಾಕ್ ಡೌನ್ ಗಳ ತೆರವಿನ ನಂತರ ಪರಿಗಣಿಸುವಂತೆ ಕೋರಲಾಗಿದೆ. ಕಾಮೆಡ್2020ಯು ಅತ್ಯಂತ ಪ್ರಮುಖ ಪರೀಕ್ಷೆಗಳಲ್ಲಿ ಒಂದಾಗಿದ್ದು, ಸಾವಿರಾರು ವಿದ್ಯಾಥಿಗಳ ಭವಿಷ್ಯದ ದೃಷ್ಟಿಯಿಂದ ಮಹತ್ವ ಪಡೆದಿದೆ.
ಕೋವಿಡ್ ಹಾಗೂ ಲಾಕ್ ಡೌನ್ ಗಳ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪರ್ಕದ ತೊಂದರೆ ಉದ್ಭವಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳು ಪ್ರವೇಶ್ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಸಂವಿಧಾನದ 19ನೇ ವಿಧಿಯ ಉಲ್ಲಂಘನೆಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಲಾಕ್‌ಡೌನ್ ಗೆ ಒಳಗಾಗಿರುವ ರಾಜ್ಯಗಳ ಹಾಗೂ ನಿರ್ದಿಷ್ಟವಾಗಿ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಕಾಮೆಡ್‌ಕೆ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ತೊಂದರೆಯಾಗುವ ಸಾಧ್ಯತೆ ಇದೆ.ಅರ್ಜಿದಾರರ ಮನವಿ
ಅಲ್ಲದೆ ಮನವಿಯಲ್ಲಿ, ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ಸಂವಿಧಾನದ 14ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಇದಾಗಲಿದೆ ಎಂದು ತಿಳಿಸಲಾಗಿದ್ದು, ಕೆಲ ರಾಜ್ಯಗಳ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತರೆ, ಲಾಕ್‌ಡೌನ್ ಗೆ ಒಳಗಾಗಿರುವ ರಾಜ್ಯಗಳ ಹಾಗೂ ನಿರ್ದಿಷ್ಟವಾಗಿ ಕಂಟೈನ್‌ಮೆಂಟ್ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ತೊಂದರೆಯಾಗುವ ಸಾಧ್ಯತೆ ಇರುತ್ತದೆ ಎಂದು ವಿವರಿಸಲಾಗಿದೆ.
“ಕಾಮೆಡ್ 2020 ಅನ್ನು ತಕ್ಷಣವೇ ನಡೆಸುವ ಯಾವುದೇ ತುರ್ತು ಇಲ್ಲ. ಇದರಿಂದ ವಿದ್ಯಾರ್ಥಿಗಳ ಅಕೆಡೆಮಿಕ್ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ,” ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಇದಾಗಲೇ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಾದ ಜೆಇಇ, ನೀಟ್, ಎಐಬಿಇ, ಸಿಎಲ್‌ಎಟಿ ಪರೀಕ್ಷೆಗಳನ್ನು ದೇಶದಲ್ಲಿ ಕೋವಿಡ್-19 ನ ಭೀಕರ ಸನ್ನಿವೇಶದಿಂದಾಗಿ ಮುಂದೂಡಲಾಗಿದೆ,” ಎಂದೂ ಮನವಿಯಲ್ಲಿ ನ್ಯಾಯಾಲಯದ ಗಮನಸೆಳೆಯಲಾಗಿದೆ. ಅಲ್ಲದೆ, ಕಾಮೆಡ್ ಕೆ ಪರೀಕ್ಷೆಯನ್ನು ಮೇ ತಿಂಗಳಿನಿಂದ ಇಲ್ಲಿಯವರೆಗೆ ಒಂದಕ್ಕಿಂತ ಹೆಚ್ಚು ಬಾರಿ ಮುಂದೂಡಲಾಗಿದೆ. ಹಾಗಾಗಿ ಕೋವಿಡ್-19ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆಯನ್ನು ನಡೆಸುವ ಅಗತ್ಯವಿಲ್ಲ ಎನ್ನಲಾಗಿದೆ.
ಆಗಸ್ಟ್ 19ರಿಂದ ಆರಂಭವಾಗಲಿರುವ ಕಾಮೆಡ್ ಕೆ - 2020 ಪ್ರವೇಶ ಪರೀಕ್ಷೆಯಲ್ಲಿ ದೇಶಾದ್ಯಂತ ಸುಮಾರು 70 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.