ದಾವೆ

ಸುಶಾಂತ್ ಆತ್ಮಹತ್ಯೆ ಪ್ರಕರಣ, ರಿಯಾ ಚಕ್ರವರ್ತಿ ವರ್ಗಾವಣೆ ಅರ್ಜಿ ಪರಿಗಣನೆಗೆ ಅರ್ಹವಲ್ಲ: ಬಿಹಾರ ಪೋಲಿಸ್‌

Bar & Bench

ಬಾಲಿವುಡ್ ನಟ ಸುಶಾಂತ್ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ವಿರುದ್ಧ ಪಟ್ನಾದಲ್ಲಿ ದಾಖಲಾಗಿರುವ ದೂರನ್ನು ಮುಂಬೈಗೆ ವರ್ಗಾಯಿಸುವಂತೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸದೆ ಇರುವಂತೆ ಬಿಹಾರ ಪೊಲೀಸರು ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ಕೋರಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ಮುಂದೆ ಬಿಹಾರ ಪೊಲೀಸರು ಸಲ್ಲಿಸಿರುವ ಅಫಿಡವಿಟ್‌ ನಲ್ಲಿ ಅಪರಾಧ‌ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯ 406ನೇ ಕಲಮನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಕರಣದ ತನಿಖೆಯನ್ನು ವರ್ಗಾಯಿಸಲು ಬಳಸಲಾಗದು ಎಂದು ಹೇಳಿದ್ದಾರೆ.

ಅಫಿಡವಿಟ್‌ ನಲ್ಲಿ ಹೇಳಲಾಗಿರುವ ಅಂಶ ಹೀಗಿದೆ,

“ ಸಿಆರ್.ಪಿ.ಸಿ ಕಲಮು 406 ಅನ್ನು ಗಮನಿಸಿದರೆ, ಅದು “ಪ್ರಕರಣ ಮತ್ತು ಮನವಿ”ಗಳ ವರ್ಗಾವಣೆಯನ್ನು ಒಂದು ಹೈಕೋರ್ಟ್‌ ನಿಂದ ಮತ್ತೊಂದು ಹೈಕೋರ್ಟ್‌ ಗೆ ವರ್ಗಾಯಿಸಲು ಅಥವಾ ಒಂದು ಹೈಕೋರ್ಟ್‌ ನ ಅಧೀನ ಅಪರಾಧ ನ್ಯಾಯಾಲಯದಿಂದ ಮತ್ತೊಂದು ಹೈಕೋರ್ಟ್‌ ನ ಅಧೀನ ಅಥವಾ ಅದರ ಮೇಲಿನ ನ್ಯಾಯವ್ಯಾಪ್ತಿಯ ಕೋರ್ಟ್‌ ಗೆ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಆದರೆ, ಸಿಆರ್.ಪಿ.ಸಿ. 406ನೇ ಕಲಮಿನ ಉದ್ದೇಶ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತನಿಖೆಯನ್ನು ವರ್ಗಾಯಿಸುವುದಲ್ಲ.”
ಸುಪ್ರೀಂ ಕೋರ್ಟ್‌ ನಲ್ಲಿ ಸಲ್ಲಿಸಲಾಗಿರುವ ಅಫಿಡವಿಟ್‌

ಅಲ್ಲದೆ ಅಫಿಡವಿಟ್‌ ನಲ್ಲಿ, ರಿಯಾ ಚಕ್ರವರ್ತಿಯು ಸಲ್ಲಿಸಿರುವ ವರ್ಗಾವಣೆ ಅರ್ಜಿಯಲ್ಲಿ, ತನ್ನ ವಿರುದ್ಧದ ಪಕ್ಷಪಾತ ತೋರಿರುವ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಬದಲಿಗೆ, “ಪ್ರಕರಣದ ಮಾಹಿತಿದಾರರ ಪ್ರಭಾವದಿಂದ ದೂರು ಕಳೆದುಹೋಗಿದೆ” ಎನ್ನುವಂತಹ ತೀರಾ ಸಾಮಾನ್ಯವಾದ ಮತ್ತು ನಿರ್ದಿಷ್ಟವಲ್ಲದ ಆರೋಪವನ್ನು ಮಾಡಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಅಫಿಡವಿಟ್‌ ನಲ್ಲಿ, ಸುಶಾಂತ್‌ ಸಿಂಗ್ ರಜಪೂತ್‌ ರ ತಂದೆ ನೀಡಿರುವ ದೂರಿನಲ್ಲಿ ರಿಯಾ ಚಕ್ರವರ್ತಿಯು ಮೃತ ನಟನಿಗೆ ಸೇರಿದ “ಕೋಟಿಗಟ್ಟಲೆ ಹಣವನ್ನು ದೋಚುವ ಏಕೈಕ ಉದ್ದೇಶ” ಹೊಂದಿದ್ದಾರೆ ಎಂದು ಆರೋಪಿಸಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಮುಂದುವರೆದು, “ಮೃತ ಕಲಾವಿದ ಚಿತ್ರೋದ್ಯಮವನ್ನು ತೊರೆಯುವ ನಿರ್ಧಾರಕ್ಕೆ ಬಂದಿದ್ದರು. ಕೊಡಗಿನಲ್ಲಿ ಸಾವಯವ ಕೃಷಿ ಮಾಡುವ ಉದ್ದೇಶ ಹೊಂದಿದ್ದರು. ಆದರೆ, ಅರ್ಜಿದಾರಳು ಮೃತ ಕಲಾವಿದನನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಳು. ಆತನ ವೈದ್ಯಕೀಯ ವರದಿಗಳನ್ನು ಮಾಧ್ಯಮಕ್ಕೆ ನೀಡುವ ಮೂಲಕ ಯಾವುದೇ ಕೆಲಸ ಆತನಿಗೆ ದೊರೆಯದಂತೆ ಮಾಡುವುದಾಗಿ ಹೇಳಿದ್ದಳು,” ಎಂದು ಅಫಿಡವಿಟ್‌ ನಲ್ಲಿ ತಿಳಿಸಲಾಗಿದೆ.