ದಾವೆ

[ಕೋವಿಡ್‌-19] ಭೌತಿಕ ವಿಚಾರಣೆಯನ್ನು ಆರಂಭಿಸಲು ಸುಪ್ರೀಂ ಕೋರ್ಟ್‌ ಆಲೋಚನೆ; ಶೀಘ್ರದಲ್ಲಿಯೇ ಈ ಕುರಿತ ತೀರ್ಮಾನ

ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಂಡು ಭೌತಿಕ ಕಲಾಪವನ್ನು ಆರಂಭಿಸುವಂತೆ ವಿವಿಧ ವಕೀಲರ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಏಳು ನ್ಯಾಯಮೂರ್ತಿಗಳನ್ನೊಳಗೊಂಡ ಸಮಿತಿಗೆ ಒತ್ತಾಯಿಸಿದ್ದಾರೆ. ಶೀಘ್ರದಲ್ಲಿಯೇ ಸಮಿತಿ ಈ ಕುರಿತು ನಿರ್ಧರಿಸಲಿದೆ.

Bar & Bench

ಸುಪ್ರೀಂಕೋರ್ಟ್‌ ವಕೀಲರ ಒಕ್ಕೂಟ (ಎಸ್‌ಸಿಬಿಎ) ಮತ್ತು ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ ರೆಕಾರ್ಡ್‌ ಒಕ್ಕೂಟ (ಎಸ್‌ಸಿಎಒಆರ್‌ಎ) ಇವುಗಳು ನೀಡಿರುವ ಮಾಹಿತಿಯ ಅನುಸಾರ ಏಳು ನ್ಯಾಯಮೂರ್ತಿಗಳನ್ನೊಳಗೊಂಡ ಸುಪ್ರೀಂ ಕೋರ್ಟ್ ಸಮಿತಿಯು ಕನಿಷ್ಠ 2-3 ಪೀಠಗಳ‌ ಭೌತಿಕ ಕಲಾಪವನ್ನು ಆಗಸ್ಟ್‌ ತಿಂಗಳ ಮೂರನೇ ವಾರದಿಂದ ಮರು ಆರಂಭಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಸಮಿತಿಯು ಅಂತರ್ಜಾಲ ಮುಖೇನ ಆಗಸ್ಟ್‌ 11ರಂದು ನಡೆಸಿದ್ದ ಸಭೆಯಲ್ಲಿ ಎಸ್ ಸಿಬಿಎ, ಎಸ್‌ ಸಿ ಎಒಆರ್ ಎ ಮತ್ತು ಭಾರತೀಯ ವಕೀಲರ ಪರಿಷತ್ತಿನ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸೂಕ್ತ ಮುಂಜಾಗರೂಕತಾ ಕ್ರಮಗಳೊಂದಿಗೆ ಭೌತಿಕ ಕಲಾಪವನ್ನು ಶೀಘ್ರವೇ ಆರಂಭಿಸುವಂತೆ ತಾವು ಒತ್ತಾಯಿಸಿರುವುದಾಗಿ ಸಭೆಯ ನಂತರ ಈ ಒಕ್ಕೂಟಗಳು ತಮ್ಮ ಸದಸ್ಯರಿಗೆ ಮಾಹಿತಿ ನೀಡಿವೆ.

ಈ ಸಂಬಂಧ ಎಸ್‌ಸಿಬಿಎ ಅಧ್ಯಕ್ಷ ದುಷ್ಯಂತ್ ಧವೆ ಅವರು ಸದಸ್ಯರಿಗೆ ಕಳುಹಿಸಿರುವ ಸಂದೇಶದಲ್ಲಿ, ತಾವು ಹಾಗೂ ಎಸ್‌ಸಿಎಒಆರ್‌ಎ ಅಧ್ಯಕ್ಷರಿಬ್ಬರೂ ಕಟ್ಟುನಿಟ್ಟಿನ ಸುರಕ್ಷಾ ಕ್ರಮಗಳೊಂದಿಗೆ ಶೀಘ್ರವೇ ಭೌತಿಕ ಕಲಾಪಗಳನ್ನು ಆಗಸ್ಟ್‌ 18ರಿಂದ ಆರಂಭಿಸುವಂತೆ ಒತ್ತಾಯಿಸಿರುವುದಾಗಿ ತಿಳಿಸಿದ್ದಾರೆ.

ಕನಿಷ್ಠ ಮೂರು ನ್ಯಾಯಾಲಯಗಳು ಪ್ರಾಯೋಗಿಕವಾಗಿ ಶೀಘ್ರವೇ ಆರಂಭಗೊಳ್ಳಬಹುದು ಎನ್ನುವ ಭರವಸೆಯನ್ನು ಏಳು ನ್ಯಾಯಮೂರ್ತಿಗಳ ಸಮಿತಿಯು ನೀಡಿದೆ.
ದುಷ್ಯಂತ್‌ ಧವೆ, ಅಧ್ಯಕ್ಷರು, ಎಸ್‌ಸಿಬಿಎ

ಆದರೆ ಸಮಿತಿಯು ಎರಡು ವಾರಗಳ ನಂತರ, ಅಂದಿನ ಪರಿಸ್ಥಿತಿಯನ್ನು ಅವಲೋಕಿಸಿ ಭೌತಿಕ ವಿಚಾರಣೆಗಳನ್ನು ಆರಂಭಿಸಬಹುದಾಗಿ ತಜ್ಞರು ಶಿಫಾರಸ್ಸು ಮಾಡಿರುವುದಾಗಿ ತಿಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಒಕ್ಕೂಟದ ಪ್ರತಿನಿಧಿಗಳು ಎರಡು ವಾರಗಳ ನಂತರವೂ ಸಹ ಪರಿಸ್ಥಿತಿ ಹೆಚ್ಚು ಕಡಿಮೆ ಇದೇ ರೀತಿಯೇ ಇರಲಿದೆ. ಹಾಗಾಗಿ, ನ್ಯಾಯಾಲಯವು ಶೀಘ್ರವೇ ಭೌತಿಕ ವಿಚಾರಣೆಯನ್ನು ಆಂಭಿಸಬೇಕು. ಆ ಮೂಲಕ ಮುಂದೆ ಎದುರಾಗಬಹುದಾದ ಸವಾಲುಗಳಿಗೂ ಸಹ ನಾವು ಅಷ್ಟರಮಟ್ಟಿಗೆ ಮುಂಚಿತವಾಗಿ ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದೆ.

“ಇದಕ್ಕೆ ಪ್ರತಿಕ್ರಿಯಿಸಿದ ಘನ ಸಮಿತಿಯು, ಈ ಸಂಬಂಧ ಶಿಫಾರಸ್ಸುಗಳನ್ನು ಮಾನ್ಯ ಮುಖ್ಯ ನ್ಯಾಯಮೂರ್ತಿಯವರಿಗೆ ಸಲ್ಲಿಸಲಾಗುವುದು. ಕನಿಷ್ಠ ಮೂರು ನ್ಯಾಯಾಲಯಗಳು ಪ್ರಾಯೋಗಿಕವಾಗಿ ಆರಂಭಗೊಳ್ಳಬಹುದು ಎನ್ನುವ ಭರವಸೆ ನೀಡಿದೆ,” ಎಂದು ಧವೆ ತಿಳಿಸಿದ್ದಾರೆ.

ಎಸ್‌ಸಿಎಒಆರ್‌ಎ ಅಧ್ಯಕ್ಷ ಶಿವಾಜಿ ಜಾಧವ್‌ ನೀಡಿರುವ ಹೇಳಿಕೆ:

“ಘನ ನ್ಯಾಯಮೂರ್ತಿಗಳ ಸಮಿತಿಯು ಮುಂದಿನ ವಾರದಿಂದ ಕನಿಷ್ಠ 2-3 ಭೌತಿಕ ನ್ಯಾಯಾಲಯಗಳನ್ನು ಆರಂಭಿಸುವ ಬಗ್ಗೆ ಗಂಭೀರವಾಗಿ ಆಲೋಚನೆ ನಡೆಸಿದೆ. ಈ ಅವಧಿಯಲ್ಲಿ ರೆಜಿಸ್ಟ್ರಿಯು ಭೌತಿಕ ಕಲಾಪಗಳನ್ನು ಆರಂಭಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಿದೆ.”