ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಈ ವರ್ಷದ ಮಹಾರಾಷ್ಟ್ರ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಎಂಎಚ್ ಟಿ- ಸಿಇಟಿ 2020) ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ. ಆರ್ ಸುಭಾಷ್ ರೆಡ್ಡಿ ಹೀಗೆ ಹೇಳಿದರು:
“ನಾವು ನೀಟ್, ಜೆಇಇ ನಡೆಸಲು ಒಪ್ಪಿಗೆ ನೀಡಿದ್ದೇವೆ. ಈಗ ಯಾವುದೇ ಒಂದು ರಾಜ್ಯದಲ್ಲಿ ಪರೀಕ್ಷೆ ತಡೆಯುವುದು ಹೇಗೆ? ನಮ್ಮ ಆದೇಶಗಳನ್ನು ನೀವು ಗಮನಿಸಬೇಕಿತ್ತು”.ಸುಪ್ರೀಂ ಕೋರ್ಟ್
ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ಮತ್ತು ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮುಂದೂಡುವಂತೆ ಕೋರಿದ್ದ ಅರ್ಜಿಯನ್ನು ಕಳೆದ ವಾರ ಕೋರ್ಟ್ ವಜಾ ಮಾಡಿತ್ತು.
ಆಗಸ್ಟ್ 17ರ ಆದೇಶದಲ್ಲಿ ಕೋರ್ಟ್ ಹೀಗೆ ಹೇಳಿತ್ತು:
“ನೀಟ್ ಯುಜಿ-2020 ಮತ್ತು ಜೆಇಇ (ಮುಖ್ಯ ಪರೀಕ್ಷೆ) ಏಪ್ರಿಲ್-2020 ಪರೀಕ್ಷೆ ಮುಂದೂಡುವ ಸಂಬಂಧದ ಮನವಿಯಲ್ಲಿ ನ್ಯಾಪಪೀಠಕ್ಕೆ ಯಾವುದೇ ಸಮರ್ಥನೆ ಕಾಣುತ್ತಿಲ್ಲ. ಸಾಂಕ್ರಾಮಿಕತೆ ವ್ಯಾಪಿಸಿದ್ದರೂ ಜೀವನ ಸಾಗಲೇಬೇಕು. ವಿದ್ಯಾರ್ಥಿಗಳ ಬದುಕನ್ನು ಅತಂತ್ರತೆಯ ಕಡೆಗೆ ನೂಕಲಾಗದು ಮತ್ತು ಒಂದು ಶೈಕ್ಷಣಿಕ ವರ್ಷವನ್ನು ವೃಥಾ ವ್ಯರ್ಥ ಮಾಡಲಾಗದು”.
ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಿರುವ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿದ್ದವು.