Prashanth Bhushan 
ದಾವೆ

ಬ್ರೇಕಿಂಗ್: ನ್ಯಾಯಾಂಗ ನಿಂದನೆ ಆರೋಪದಡಿ ಪ್ರಶಾಂತ್‌ ಭೂಷಣ್‌ ದೋಷಿ ಎಂದು ತೀರ್ಪು ನೀಡಿದ ಸುಪ್ರೀಂ ಕೋರ್ಟ್‌

ತಾವು ಮಾಡಿದ ಎರಡು ಟ್ವೀಟ್‌ ಗಳಿಂದಾಗಿ ನ್ಯಾಯಾಂಗ ನಿಂದನೆ ಆರೋಪದ ವಿಚಾರಣೆ ಎದುರಿಸುತ್ತಿದ್ದ ಪ್ರಶಾಂತ್‌ ಭೂಷಣ್‌ ಅವರನ್ನು ದೋಷಿ ಎಂದು ಸುಪ್ರೀಂ ಕೋರ್ಟ್‌ ತೀರ್ಮಾನಿಸಿದೆ. ಶಿಕ್ಷೆಯ ಸಂಬಂಧ ಆಗಸ್ಟ್‌ 20ರಂದು ಕೋರ್ಟ್‌ ವಿಚಾರಣೆ ನಡೆಸಲಿದೆ.

Bar & Bench

ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೋಬ್ಡೆ ಅವರನ್ನು ಟೀಕಿಸಿ ಟ್ವೀಟ್‌ ಗಳನ್ನು ಮಾಡುವ ಮೂಲಕ ನ್ಯಾಯಾಂಗ ನಿಂದನೆ ಆರೋಪಕ್ಕೆ ಗುರಿಯಾಗಿದ್ದ ಹಿರಿಯ ನ್ಯಾಯವಾದಿ ಪ್ರಶಾಂತ್‌ ಭೂಷಣ್‌ ಅವರನ್ನು ಸುಪ್ರೀಂ ಕೋರ್ಟ್‌ ದೋಷಿ ಎಂದು ಪರಿಗಣಿಸಿ ಇಂದು ತೀರ್ಪು ನೀಡಿದೆ. ಪ್ರಶಾಂತ್‌ ಭೂಷಣ್‌ ಅವರು ಇದೇ ವರ್ಷದ ಜೂನ್‌ ನಲ್ಲಿ ಈ ಟ್ವೀಟ್‌ ‌ಗಳನ್ನು ಮಾಡಿದ್ದರು.

ಪ್ರಶಾಂತ್ ಭೂಷಣ್ ವಿರುದ್ಧ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ಆರೋಪದಡಿ ಪ್ರಕರಣದ ದಾಖಲಿಸಿತ್ತು. ಪ್ರಕರಣದ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಬಿ ಆರ್‌ ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದು ಪೀಠವು ತೀರ್ಪು ಪ್ರಕಟಿಸಿತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ಇನ್ನೂ ನಿರ್ಧರಿಸಬೇಕಿದ್ದು ಈ ಸಂಬಂಧ ಆಗಸ್ಟ್‌ 20ರಂದು ವಿಚಾರಣೆ ನಡೆಸಲಿದೆ.

ನ್ಯಾಯಾಂಗ ನಿಂದನೆ ಆರೋಪದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆಗಸ್ಟ್‌ 5ರಂದು ನಡೆಸಿತ್ತು. ಹಿರಿಯ ನ್ಯಾಯವಾದಿ ದುಷ್ಯಂತ್‌ ಧವೆ ಅವರು ಭೂಷಣ್‌ ಅವರ ಪರವಾಗಿ ಪೀಠದ ಮುಂದೆ ಗಂಭೀರ ವಾದ ಮಂಡಿಸಿದ್ದರು. ಒಂದು ದಿನದ ವಿಚಾರಣೆಯ ನಂತರ ಪೀಠವು ತೀರ್ಪನ್ನು ಆಗಸ್ಟ್‌ 14ಕ್ಕೆ ಕಾಯ್ದಿರಿಸಿತ್ತು.

ಭೂಷಣ್‌ ಅವರು ಇದೇ ವರ್ಷದ ಜೂನ್‌ ನಲ್ಲಿ ಎರಡು ಟ್ವೀಟ್‌ ಗಳನ್ನು ಮಾಡುವ ಮೂಲಕ ನ್ಯಾಯಾಂಗ ನಿಂದನೆಯ ಆರೋಪಕ್ಕೆ ಗುರಿಯಾಗಿದ್ದರು. ಮೊದಲ ಟ್ವೀಟ್‌ ನಲ್ಲಿ ಅವರು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ದುಬಾರಿ ಮೊಟಾರ್‌ ಸೈಕಲ್‌ ಒಂದರ ಮೇಲೆ ಕುಳಿತಿರುವ ಚಿತ್ರವನ್ನು ಹಾಕಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರೆ, ಎರಡನೆಯದರಲ್ಲಿ ಅವರು ಭಾರತದ ಸಮಕಾಲೀನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ದೇಶದ ಈ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

ಮಧ್ಯಪ್ರದೇಶದ ಮಹೆಕ್‌ ಮಹೇಶ್ವರಿ ಸಿಜೆಐ ಬೊಬ್ಡೆ ಅವರು ಮೋಟಾರ್‌ ಸೈಕಲ್‌ ಮೇಲೆ ಕುಳಿತಿರುವ ಚಿತ್ರಕ್ಕೆ ಸಂಬಂಧಿಸಿದಂತೆ ಭೂಷಣ್ ಹಾಗೂ ಟ್ವಿಟರ್ ಇಂಡಿಯಾದ‌ ವಿರುದ್ಧ ನ್ಯಾಯಾಂಗ ನಿಂದನೆ ಆರೋಪವನ್ನು ಜುಲೈ 2ರಂದು ದಾಖಲಿಸಿದ್ದರು. ಮಹೇಶ್ವರಿಯವರು ಗಮನಸೆಳೆದಿದ್ದ ಟ್ವೀಟ್‌ ನಲ್ಲಿ ವಕೀಲ ಭೂಷಣ್‌ ಅವರು ಹೀಗೆ ಬರೆದಿದ್ದರು:

“ಬಿಜೆಪಿಯ ನಾಯಕರೊಬ್ಬರಿಗೆ ಸಂಬಂಧಿಸಿದ 50 ಲಕ್ಷದ ಮೊಟಾರ್‌ ಸೈಕಲ್‌ ಒಂದನ್ನು ಸಿಜೆಐ ಅವರು ನಾಗಪುರದ ರಾಜಭವನದಲ್ಲಿ ಓಡಿಸುತ್ತಿದ್ದಾರೆ, ಮಾಸ್ಕ್‌ ಅಥವಾ ಹೆಲ್ಮೆಟ್ ಇಲ್ಲದೆ. ಅದೂ, ನಾಗರಿಕರನ್ನು ಅವರ ಮೂಲಭೂತ ಹಕ್ಕಾದ ನ್ಯಾಯದ ಲಭ್ಯತೆಯಿಂದ ನಿರ್ಬಂಧಿಸಿ ಸುಪ್ರೀಂ ಕೋರ್ಟ್‌ ಅನ್ನು ಲಾಕ್‌ ಡೌನ್‌ ಮಾಡಿರುವ ಈ ಸಂದರ್ಭದಲ್ಲಿ!” ಎಂದು ಟ್ವೀಟಿಸಿದ್ದರು.

ಸ್ವಯಂ ಪ್ರೇರಣಾ ಅರ್ಜಿ ದಾಖಲಿಸಿಕೊಂಡು ಕೋರ್ಟ್ ನೋಟಿಸ್‌ ಜಾರಿಗೊಳಿಸದ ಮೇಲೆ ಟ್ವಿಟರ್ ಈ ಟ್ವೀಟ್‌ ಅನ್ನು ಹಿಂಪಡೆದಿತ್ತು.

ಜೂನ್ 27ರ ಮತ್ತೊಂದು ಟ್ವೀಟ್‌ ನಲ್ಲಿ ಭೂಷಣ್‌ ಅವರು:

“ಮುಂದೊಂದು ದಿನ ಇತಿಹಾಸಕಾರರು ಕಳೆದ ಆರು ವರ್ಷಗಳ ಆವಧಿಯಲ್ಲಿ ಭಾರತದಲ್ಲಿ ಹೇಗೆ ಪ್ರಜಾಪ್ರಭುತ್ವವನ್ನು ತುರ್ತುಪರಿಸ್ಥಿತಿಯ ಅಗತ್ಯವಿಲ್ಲದೇ ನಾಶ ಮಾಡಲಾಯಿತು ಎಂದು ಹೊರಳಿ ನೋಡುವಾಗ, ಈ ವಿನಾಶದಲ್ಲಿ ಸುಪ್ರೀಂಕೋರ್ಟ್‌ನ ಪಾತ್ರವನ್ನು ಅವರು ನಿರ್ದಿಷ್ಟವಾಗಿ ಗುರುತಿಸಲಿದ್ದಾರೆ, ಅದರಲ್ಲಿಯೂ ಕಳೆದ ನಾಲ್ಕು ಸಿಜೆಐಗಳ ಪಾತ್ರವನ್ನು,” ಎಂದಿದ್ದರು.

ಸಮಕಾಲೀನ ಭಾರತದ ಪರಿಸ್ಥಿತಿಯೊಟ್ಟಿಗೆ ಸುಪ್ರೀಂ ಕೋರ್ಟ್‌ ಅನ್ನು ಹೋಲಿಸಿ ವಿಮರ್ಶಿಸಿದ್ದ ಈ ಟ್ವೀಟ್‌ ಗಳಿಂದಾಗಿ ನ್ಯಾಯಾಂಗ ನಿಂದನೆ ಆರೋಪಕ್ಕೆ ಸಿಲುಕಿದ ಪ್ರಶಾಂತ್‌ ಭೂಷಣ್‌ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟಿನ ಪೀಠದ ಮುಂದೆ ತಮ್ಮ ಟ್ವೀಟ್‌ ಗಳನ್ನು ಸಮರ್ಥಿಸಿಕೊಂಡು 142 ಪುಟಗಳ ಅಫಿಡವಿಟ್‌ ಸಲ್ಲಿಸಿದ್ದರು. ಇದರಲ್ಲಿ ಅವರು ಈ ಟ್ವೀಟ್‌ಗಳನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸದಂತೆ ಕೋರಿದ್ದರು.

ಸಿಜೆಐ ಅವರು ಹೆಲ್ಮೆಟ್‌ ಮತ್ತು ಮಾಸ್ಕ್ ಇಲ್ಲದೆ ಬೈಕ್‌ ರೈಡ್‌ ಮಾಡುತ್ತಿರುವ ಚಿತ್ರದ ಕುರಿತ ತಮ್ಮ ಟ್ವೀಟ್‌ ಕೇವಲ ತಮ್ಮ ನೋವಿನ ಅಭಿವ್ಯಕ್ತಿ ಆಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿನ ಅಸಾಂಗತ್ಯವನ್ನು ಎತ್ತಿ ತೋರಿಸುವ ಪ್ರಯತ್ನವಾಗಿತ್ತು ಎಂದು ತಿಳಿಸಿದ್ದರು. ಕಳೆದ ನಾಲ್ವರು ಸಿಜೆಐಗಳ ಪಾತ್ರದ ಕುರಿತಾದ ತಮ್ಮ ಟ್ವೀಟ್‌, ಪ್ರಸಕ್ತ ವಿದ್ಯಮಾನಗಳ ಕುರಿತು ಸದ್ಭಾವನೆಯಿಂದ ಕೂಡಿದ ಪ್ರಾಮಾಣಿಕ ಅಭಿಪ್ರಾಯವಾಗಿತ್ತು ಎಂದು ತಿಳಿಸಿದ್ದರು.

ಇದಲ್ಲದೆ ಭೂಷಣ್ ತಮ್ಮ ಪ್ರತಿಕ್ರಿಯೆಯ ಜೊತೆಗೇ‌ ಅಟಾರ್ನಿ ಜನರಲ್‌ ಅವರ ಒಪ್ಪಿಗೆಯನ್ನು ಪಡೆಯದೆ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿರುವ ಸೆಕ್ರೆಟರಿ ಜನರಲ್‌ ಅವರ ಕ್ರಮದ ವಿರುದ್ಧವೂ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಇದರೊ ಜೊತೆಗೇ, ತಮ್ಮ ವಿರುದ್ಧದ 11 ವರ್ಷಗಳ ಹಳೆಯದಾದ ನಿಂದನಾ ಅರ್ಜಿಯೊಂದನ್ನು ತಕ್ಷಣವೇ ವಿಚಾರಣಾ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ ಬಗ್ಗೆಯೂ ತಮ್ಮ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಆಗಸ್ಟ್‌ 10ರಂದು ನ್ಯಾಯಾಲಯವು ಈ ಹಳೆಯ ಪ್ರಕರಣವನ್ನು ಅದರ ಗುಣಾವಗುಣಗಳ ಆಧಾರದಲ್ಲಿ (ಕೇಸ್ ಆನ್ ಮೆರಿಟ್‌) ವಿಚಾರಣೆ ನಡೆಸಲು ತೀರ್ಮಾನಿಸಿತು. 2009ರ ಪ್ರಕರಣವು ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶಾಂತ್ ಭೂಷಣ್‌ ಅವರು ತೆಹಲ್ಕಾ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿನ ಹೇಳಿಕೆಯ ಕುರಿತಾದದ್ದಾಗಿದೆ.