ದಾವೆ

ವಲಸೆ ಕಾರ್ಮಿಕರ ಕಲ್ಯಾಣ ಕೆಲ ರಾಜ್ಯಗಳಿಗೆ ಇಷ್ಟವಿಲ್ಲ; ಮಹಾರಾಷ್ಟ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ

Bar & Bench

ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮೂರು ಕಾಯಿದೆಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸುವಲ್ಲಿ ವಿಫಲವಾಗಿರುವ ಮಹಾರಾಷ್ಟ್ರ ಮತ್ತು ದೆಹಲಿ ಸರ್ಕಾರಗಳಿಗೆ ಮಂಗಳವಾರ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ.

ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಉದ್ಭವಿಸಿದ ವಲಸೆ ಕಾರ್ಮಿಕರ ಸಮಸ್ಯೆ ಕುರಿತು ಜುಲೈ 31ರಂದು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಮೂರು ಕಾಯಿದೆಗಳ ಕಾರ್ಯನಿರ್ವಹಣೆ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿತು.

ದೆಹಲಿ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳ ನಡೆಯನ್ನು ಕಟುವಾಗಿ ಟೀಕಿಸಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ನ್ಯಾ. ಆರ್ ಸುಭಾಷ್ ರೆಡ್ಡಿ ಮತ್ತು ನ್ಯಾ. ಎಂ ಆರ್ ಷಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಅಂತರ ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ-1979, ಕಟ್ಟಡ ಕಾರ್ಮಿಕರ ಕಾಯ್ದೆ-1996 ಮತ್ತು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ-2008ರ ಕಾರ್ಯನಿರ್ವಹಣೆ ಕುರಿತ ಮಾಹಿತಿಯನ್ನೊಳಗೊಂಡ ಪ್ರಮಾಣ ಪತ್ರ ಸಲ್ಲಿಸದಿರುವುದಕ್ಕೆ ಚಾಟಿ ಬೀಸಿತು.

ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಅತಿಹೆಚ್ಚು ವಲಸೆ ಕಾರ್ಮಿಕರು ನೆಲೆಸಿರುವುದರತ್ತ ಬೆರಳು ಮಾಡಿದ ನ್ಯಾಯಪೀಠವು ಹೀಗೆ ಹೇಳಿತು,

“ನಮ್ಮ ಆದೇಶ 21.07.2020 ಕ್ಕೆ ಸಂಬಂಧಿಸಿದಂತೆ ಹಲವು ರಾಜ್ಯಗಳು ತಮ್ಮ ಪ್ರತಿಕ್ರಿಯೆ ದಾಖಲಿಸಿವೆ. ಆದರೆ, ಮಹಾರಾಷ್ಟ್ರ ಮತ್ತು ಎನ್‌ ಸಿಟಿ-ದೆಹಲಿ ತಮ್ಮ ಪ್ರಮಾಣ ಪತ್ರ ಸಲ್ಲಿಸಿಲ್ಲ. ಮಹಾರಾಷ್ಟ್ರ ಮತ್ತು ದೆಹಲಿಗೆ ಅತಿಹೆಚ್ಚು ವಲಸೆ ಕಾರ್ಮಿಕರು ಆಗಮಿಸಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದಾರೆ”.

ಮುಂದುವರೆದು ಆದೇಶದಲ್ಲಿ ಹೀಗೆ ವಿವರಿಸಲಾಗಿದೆ,

“ಮೇಲೆ ಸೂಚಿಸಿದ ಕಾಯಿದೆಗಳು ಕಾರ್ಯಗತವಾಗಿವೆಯೇ ಎಂಬುದನ್ನು ತಿಳಿದುಕೊಳ್ಳುವ ಉದ್ದೇಶದಿಂದ ನ್ಯಾಯಪೀಠವು ನಿರ್ದಿಷ್ಟ ಆದೇಶ ಹೊರಡಿಸುವ ಮೂಲಕ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಅಫಿಡವಿಟ್ ಸಲ್ಲಿಸಿಲ್ಲದೆ ಇರುವುದು ಸ್ಪಷ್ಟವಾಗಿ ತಿಳಿಸುವುದೇನೆಂದರೆ ರಾಜ್ಯಗಳು ಮೇಲೆ ಹೇಳಲಾದ ಕಾಯಿದೆಗಳನ್ನು ಜಾರಿಗೊಳಿಸುವ ಇಚ್ಛೆ ಹೊಂದಿಲ್ಲ ಎಂದು.”
ಸುಪ್ರೀಂ ಕೋರ್ಟ್

ಪ್ರಶ್ನಾರ್ಹವಾದ ಮೂರು ಕಾಯಿದೆಗಳ ಪ್ರಕಾರ ರಾಜ್ಯ ಸರ್ಕಾರವು ವಲಸೆ ಕಾರ್ಮಿಕರನ್ನು ನೋಂದಾಯಿಸಿಕೊಳ್ಳುವ ಮೂಲಕ ಅವರಿಗೆ ಮೀಸಲಾದ ಅನುದಾನವನ್ನು ಅವರ ಕಲ್ಯಾಣಕ್ಕೆ ಬಳಸಬೇಕಾಗುತ್ತದೆ.

ಮೇಲೆ ಕಾಣಿಸಿದ ಕಾಯಿದೆಗಳ ಅಡಿಯಲ್ಲಿನ ನಿಬಂಧನೆಗಳನ್ನು ಹಲವು ರಾಜ್ಯಗಳಲ್ಲಿ ಕಾರ್ಯಗತಗೊಳಿಸಿಲ್ಲ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಲಾದ ಅರ್ಜಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್‌ಸಿ) ವಿವರಿಸಿತ್ತು. ಈ ಹಿನ್ನೆಲೆಯಲ್ಲಿ ಮೇಲಿನ ಕಾಯ್ದೆಗಳ ಕಾರ್ಯಗತದ ಬಗ್ಗೆ ಪ್ರಮಾಣ ಪತ್ರ ಸಲ್ಲಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಮಂಗಳವಾರದ ವಿಚಾರಣೆಯ ಸಂದರ್ಭದಲ್ಲಿ ಪ್ರಮಾಣ ಪತ್ರ ಸಲ್ಲಿಸುವಲ್ಲಿ ವಿಫಲವಾದ ಮಹಾರಾಷ್ಟ್ರ ಮತ್ತು ದೆಹಲಿ ಕಾರ್ಯನಿರ್ವಹಣೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು ಇನ್ನೆರಡು ವಾರಗಳಲ್ಲಿ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿತು.