Justices Ashok Bhushan, R Subhash Reddy
Justices Ashok Bhushan, R Subhash Reddy 
ದಾವೆ

ಧಾರ್ಮಿಕ ಕಟ್ಟಡಗಳಿಗೆ ಹಾನಿ: ಮರು ನಿರ್ಮಾಣ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್‌

Bar & Bench

ತೆಲಂಗಾಣ ಸಚಿವಾಲಯ ನೆಲಸಮ ಸಂದರ್ಭದಲ್ಲಿ ಧಾರ್ಮಿಕ ಕಟ್ಟಡಗಳಿಗೆ ಹಾನಿಯಾಗಿದ್ದು, ಅವುಗಳ ಮರು ನಿರ್ಮಾಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

ಅರ್ಜಿದಾರ ಐಜಾಜುದ್ದೀನ್ ಖಾಜಾ ಅವರು ಸಲ್ಲಿಸಿದ್ದ ಅರ್ಜಿಯು ಅಶೋಕ್ ಭೂಷಣ್ ಮತ್ತು ಆರ್ ಸುಭಾಷ್ ರೆಡ್ಡಿ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಸದರಿ ಅರ್ಜಿಯನ್ನು ಮೊದಲಿಗೆ ತೆಲಂಗಾಣ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.

ತೆಲಂಗಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ವಿಚಾರಣೆಯ ಸಂದರ್ಭದಲ್ಲಿ ಸ್ವಯಂ ಹಾಜರಿದ್ದ ಅರ್ಜಿದಾರ ಐಜಾಜುದ್ದೀನ್, ಸಚಿವಾಲಯ ಕಟ್ಟಡ ಉರುಳಿಸಿದ್ದಕ್ಕೆ ತಕರಾರು ತೆಗೆದಿಲ್ಲ. ಆ ಕಟ್ಟಡದ ಸುತ್ತಲಿದ್ದ ಧಾರ್ಮಿಕ ಕೇಂದ್ರಗಳಿಗೆ ಹಾನಿಯಾಗಿದ್ದು, ಅದನ್ನು ಮರು ನಿರ್ಮಾಣ ಮಾಡುವಂತೆ ಕೋರಿರುವುದಾಗಿ ತಿಳಿಸಿದರು.

ಸದರಿ ಪ್ರಕರಣವು ಪರಿಚ್ಛೇದ 12ರ ಅಡಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗದು ಎಂದು ನ್ಯಾಯಪೀಠ ಹೇಳಿತು. “ಪರಿಚ್ಛೇದ 12ರ ಅಡಿ ತಪ್ಪಾಗಿ ಅರ್ಜಿ ಸಲ್ಲಿಸಲಾಗಿದೆ” ಎಂದು ನ್ಯಾಯಮೂರ್ತಿ ಭೂಷಣ್ ತಿಳಿಸಿದರು.

ನ್ಯಾಯಾಲಯವು ಆರಂಭದಲ್ಲಿ ಅರ್ಜಿ ವಜಾ ಮಾಡುವ ಉದ್ದೇಶ ಹೊಂದಿತ್ತು. ಅರ್ಜಿದಾರರ ಮನವಿಯ ಮೇರೆಗೆ ಮನವಿ ಹಿಂಪಡೆಯುವ ಅವಕಾಶ ಕಲ್ಪಿಸಿತು. ಹೈಕೋರ್ಟ್ ಮೊರೆ ಹೋಗುವುದಾಗಿ ಹೇಳಿದ ಅರ್ಜಿದಾರ. ಸದರಿ ಅರ್ಜಿಯನ್ನು ಆದಷ್ಟು ಬೇಗ ಇತ್ಯರ್ಥಪಡಿಸುವಂತೆ ಹೈಕೋರ್ಟ್‌ಗೆ ಸೂಚಿಸುವಂತೆ ಮನವಿ ಮಾಡಿದರು. ಆದರೆ, ಅಂಥ ಯಾವುದೇ ನಿರ್ದೇಶನ ನೀಡುವುದಿಲ್ಲ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿತು.