ಸರ್ಕಾರಿ ಸೇವೆಗೆ ಮುಸ್ಲಿಮರ ಸೇರ್ಪಡಿಕೆಯ ಹಿಂದಿನ ಜಾಲದ ಕುರಿತ ದೊಡ್ಡ ಸುದ್ದಿಯನ್ನು ಬಹಿರಂಗಗೊಳಿಸುವ ಕಾರ್ಯಕ್ರಮವನ್ನು ಬಿತ್ತರಿಸಲಾಗುವುದು ಎಂದು ಹೇಳಿಕೊಂಡಿದ್ದ ವಿವಾದಾತ್ಮಕ ಸುದರ್ಶನ್ ಟಿವಿಯ ಕಾರ್ಯಕ್ರಮದ ಮೇಲೆ ಪೂರ್ವ ನಿರ್ಬಂಧ ಹೇರಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಕೆ ಎಂ ಜೋಸೆಫ್ ಅವರಿದ್ದ ವಿಭಾಗೀಯ ಪೀಠವು ಅಭಿಪ್ರಾಯಗಳನ್ನು ಭಿತ್ತರಿಸುವ ಅಥವಾ ಪ್ರಕಟಿಸುವುದರ ಮೇಲೆ ಪೂರ್ವ ನಿರ್ಬಂಧ ಹೇರುವ ಬಗ್ಗೆ ನ್ಯಾಯಾಲಯವು ಜಾಗರೂಕವಾಗಿರಬೇಕಿದೆ ಎಂದು ಅಭಿಪ್ರಾಯಪಟ್ಟಿತು.
ಕೇಂದ್ರ ಸರ್ಕಾರ, ಭಾರತೀಯ ಪತ್ರಿಕಾ ಮಂಡಳಿ, ನ್ಯೂಸ್ ಬ್ರಾಡಕಾಸ್ಟರ್ಸ್ ಅಸೋಸಿಯೇಷನ್ ಮತ್ತು ಸುದರ್ಶನ್ ಟಿವಿಗೆ ಜಾರಿಗೊಳಿಸಲಾದ ಅರ್ಜಿಗೆ ಸೆಪ್ಟೆಂಬರ್ 15ರೊಳಗೆ ಪ್ರತಿಕ್ರಿಯಿಸುವಂತೆ ನ್ಯಾಯಾಲಯ ಸೂಚಿಸಿತು.
ಸುಪ್ರೀಂ ಕೋರ್ಟ್ ಆದೇಶ ಇಂತಿದೆ:
“ನಲವತ್ತೊಂಭತ್ತು ಸೆಕೆಂಡುಗಳ ವಿಡಿಯೊ ತುಣುಕಿನ, ಖಾತ್ರಿಯಲ್ಲದ ಲಿಪ್ಯಂತರದ ಆಧಾರದಲ್ಲಿ ನಾವು ಪೂರ್ವ ನಿರ್ಬಂಧ ತಡೆಯಾಜ್ಞೆ ನೀಡಲಾಗದು. ಅಭಿಪ್ರಾಯಗಳನ್ನು ಭಿತ್ತರಿಸುವ ಅಥವಾ ಪ್ರಕಟಿಸುವುದರ ಮೇಲೆ ಪೂರ್ವ ನಿರ್ಬಂಧ ಹೇರುವ ಬಗ್ಗೆ ನ್ಯಾಯಾಲಯವು ಜಾಗರೂಕವಾಗಿರಬೇಕಿದೆ”.ಸುಪ್ರೀಂ ಕೋರ್ಟ್
ಶುಕ್ರವಾರ ಪ್ರಸಾರ ಮಾಡಲು ಉದ್ದೇಶಿಸಿದ್ದ ಕಾರ್ಯಕ್ರಮವು ನಾಗರಿಕ ಸೇವೆಗಳಿಗೆ ಸೇರುವ ಮುಸ್ಲಿಮರನ್ನು ಅವಹೇಳನ ಮಾಡುವಂತಿದೆ ಎಂದು ಆರೋಪಿಸಿ ಕಾರ್ಯಕ್ರಮದ ಲಿಪ್ಯಂತರವನ್ನು ವಕೀಲ ಫಿರೋಜ್ ಇಕ್ಬಾಲ್ ಖಾನ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಕಾರ್ಯಕ್ರಮದ ಸಂದರ್ಭದಲ್ಲಿ ಭಿತ್ತರಿಸುವ ಅನಿಸಿಕೆಗಳು ಕೇಬಲ್ ಟಿವಿ ನೆಟ್‌ವರ್ಕ್ (ಸುಧಾರಣೆ) ಕಾಯ್ದೆ 1995ರ ನಿಯಮಗಳು ಮತ್ತು ಸುದ್ದಿ ಪ್ರಸಾರ ಮಾನದಂಡ ನಿಯಮಗಳನ್ನು ಉಲ್ಲಂಘಿಸಲಿವೆ ಎಂದು ಅರ್ಜಿದಾರರು ವಾದಿಸಿದ್ದರು.
ಪೂರ್ವ ನಿರ್ಬಂಧ ಹೇರಲು ಸುಪ್ರೀಂ ಕೋರ್ಟ್ ನಿರಾಕರಿಸುವುದಕ್ಕೂ ಮುನ್ನ, ಅದೇ ದಿನ ಬೆಳಗ್ಗೆ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರಿದ್ದ ಪೀಠವು 'ನಾಗರಿಕ ಸೇವೆಗೆ ಮುಸ್ಲಿಮ್ ನುಸುಳುಕೋರರ ಪ್ರವೇಶ' ಎಂಬ ಸುದರ್ಶನ್ ಸುದ್ದಿ ವಾಹಿನಿಯ ಕಾರ್ಯಕ್ರಮ ಪ್ರಸಾರಕ್ಕೆ ತಡೆ ನೀಡಿತ್ತು.
ಯುಪಿಎಸ್‌ಸಿ ಜಿಹಾದ್ ಎಂಬ ಹ್ಯಾಷ್ ಟ್ಯಾಗ್ ಒಳಗೊಂಡ ಪ್ರೊಮೊ ಹಂಚಿಕೊಂಡಿದ್ದ ಸುದ್ದಿ ವಾಹಿನಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಣ್ಕೆ ವಿರುದ್ಧ ಸಾರ್ವಜನಿಕ ಟೀಕೆ ವ್ಯಕ್ತವಾಗುತ್ತಿದೆ. ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕೋಚಿಂಗ್ ಅಕಾಡೆಮಿಯಲ್ಲಿ (ಆರ್‌ಸಿಎ) ತರಬೇತಿ ಪಡೆದು ಕೇಂದ್ರೀಯ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು “ಜಾಮಿಯಾದ ಜಿಹಾದಿ”ಗಳು ಎಂದು ಹೇಳಿರುವುದು ವಿಡಿಯೋದಲ್ಲಿದೆ.