ದಾವೆ

ಸುಶಾಂತ್‌ ಪ್ರಕರಣ; ರಿಯಾ ವಿರುದ್ಧದ ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬದ್ಧ ಎಂದ ಸುಪ್ರೀಂ ಕೋರ್ಟ್‌

Bar & Bench

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಸಾವಿನ ಪ್ರಕರಣದ ಸಂಬಂಧ ನಟಿ ರಿಯಾ ಚಕ್ರವರ್ತಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ನ ತನಿಖೆಯನ್ನು ಕೈಗೊಂಡಿರುವ ಸಿಬಿಐನ ಕ್ರಮ ಕಾನೂನುಬದ್ದ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಇದೇ ವೇಳೆ ಪ್ರಕರಣದ ಸಂಬಂಧ ಎಲ್ಲ ಸಾಕ್ಷ್ಯಗಳನ್ನೂ ಸಿಬಿಐಗೆ ನೀಡುವಂತೆ ಮುಂಬೈ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ. ನ್ಯಾಯಮೂರ್ತಿ ಹೃಷಿಕೇಶ್‌ ರಾಯ್‌ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿದೆ.

ನಟಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್‌ ಸಿಂಗ್ ರಜಪೂತ್ ಅವರ ತಂದೆ ಬಿಹಾರದ ಪಟ್ನಾದಲ್ಲಿ ದೂರು ದಾಖಲಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ರಿಯಾ ಮೇಲಿದೆ. ಮಹಾರಾಷ್ಟ್ರದಲ್ಲಿ ಮುಂಬೈ ಪೊಲೀಸರು ಪ್ರಕರಣದ ಸಂಬಂಧ ತನಿಖೆಯನ್ನು ಕೈಗೊಂಡಿದ್ದ ವೇಳೆಯೇ ಬಿಹಾರದಲ್ಲಿ ಈ ದೂರು ದಾಖಲಾಗಿತ್ತು.

ಪ್ರಕರಣವನ್ನು ಪಟ್ನಾದಿಂದ ಮುಂಬೈಗೆ ವರ್ಗಾಯಿಸುವಂತೆ ಕೋರಿ ಜುಲೈ 30ರಂದು ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ವೇಳೆ, ಮಹಾರಾಷ್ಟ್ರ ಮತ್ತು ಬಿಹಾರ ಪೊಲೀಸ್‌ ನಡುವೆ ಪ್ರಕರಣದ ತನಿಖಾ ವ್ಯಾಪ್ತಿಯ ವಿಚಾರದಲ್ಲಿ ವಾದವಿವಾದಗಳು ನಡೆದವು. ಎರಡೂ ಪಕ್ಷಕಾರರು ಪ್ರಕರಣವನ್ನು ರಾಜಕೀಯಗೊಳಿಸುತ್ತಿರುವುದಾಗಿ ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಿಸಿದ್ದರು.

ಈ ನಡುವೆಯೇ, ಬಿಹಾರ ಪೊಲೀಸರು ತನಿಖೆಯ ವಿಚಾರಣೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದರು. ಇತ್ತ ಬಿಹಾರ ಪೊಲೀಸರಿಂದ ತನಿಖೆ ಹಸ್ತಾಂತರಗೊಂಡ ನಂತರ ಸಿಬಿಐ ಪ್ರಕರಣದ ಸಂಬಂಧ ಎಫ್‌ ಐಆರ್ ದಾಖಲಿಸಿತು. ಇದೇ ವೇಳೆ ಕೇಂದ್ರ ಸರ್ಕಾರವು ಪ್ರಕರಣದಲ್ಲಿ ತನ್ನನ್ನು ಪಕ್ಷಕಾರ (ಪಾರ್ಟಿ) ಎಂದು ಪರಿಗಣಿಸಲು ಕೋರಿ ಅರ್ಜಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನಲ್ಲಿ ಹೆಚ್ಚುವರಿ ಅಫಿಡವಿಟ್‌ ಸಲ್ಲಿಸಿದ್ದ ರಿಯಾ ಚಕ್ರವರ್ತಿ, ಪ್ರಕರಣದ ತನಿಖೆಯ ವ್ಯಾಪ್ತಿಯನ್ನು ಸಿಬಿಐ ಪಡೆದ ರೀತಿಯ ಬಗ್ಗೆ ಪ್ರಶ್ನಿಸಿದ್ದರು. ಅಲ್ಲದೆ, ಮಾಧ್ಯಮಗಳನ್ನು ಪ್ರಕರಣವನ್ನು “ರೋಚಕಗೊಳಿಸುತ್ತಿರುವ” ಬಗ್ಗೆಯೂ ಆಕೆ ತನ್ನ ಪ್ರತಿಭಟನೆಯನ್ನು ದಾಖಲಿಸಿದ್ದರು.