ದಾವೆ

ಸುಶಾಂತ್ ಸಿಂಗ್‌ ರಜಪೂತ್‌ ಪ್ರಕರಣ: ರಿಯಾ ಚಕ್ರವರ್ತಿ ಅರ್ಜಿ ವಿಚಾರಣೆ ವೇಳೆ ಕೇಳಿ ಬಂದ ಪ್ರಮುಖ ವಾದಗಳು

ರಿಯಾ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನಲ್ಲಿ ವಿವಿಧ ಪಕ್ಷಕಾರರ ಪರವಾಗಿ ಹಿರಿಯ ವಕೀಲರು ಅನೇಕ ವಿಷಯಗಳ ಕುರಿತು ವಾದಮಂಡನೆ ಮಾಡಿದರು. ಅಪರಾಧ ಪ್ರಕ್ರಿಯಾ ಸಂಹಿತೆಯಿಂದ ಹಿಡಿದು ರಾಜಕೀಯದವರೆಗೆ ಆಸಕ್ತಿಕರ ಅಂಶಗಳನ್ನು ಮಂಡಿಸಲಾಯಿತು.

Bar & Bench

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣದಲ್ಲಿ ತನಿಖಾ ಸಂಸ್ಥೆಗಳು ತನಿಖಾ ವ್ಯಾಪ್ತಿಯ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ಬೆನ್ನಿಗೇ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯ ಕುರಿತಾದ ತೀರ್ಪನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ಕಾಯ್ದಿರಿಸಿದೆ.

ಪ್ರಕರಣದ ಸಂಬಂಧ ವಿವಿಧ ಪಕ್ಷಕಾರರ ಪರವಾಗಿ ಹಿರಿಯ ನ್ಯಾಯವಾದಿಗಳು ನ್ಯಾಯಮೂರ್ತಿ ಹೃಷಿಕೇಶ್‌ ರಾಯ್‌ ಅವರ ಪೀಠದ ಮುಂದೆ ವಾದ ಮಂಡಿಸಿದರು. ಈ ವೇಳೆ ಅಪರಾಧ ಪ್ರಕ್ರಿಯಾ ಸಂಹಿತೆಯಿಂದ ಹಿಡಿದು ರಾಜಕೀಯದವರೆಗೆ ಆಸಕ್ತಿಕರ ಅಂಶಗಳು ಚರ್ಚೆಗೊಳಪಟ್ಟವು.

ವಿಚಾರಣೆ ವೇಳೆ ಕೇಳಿ ಬಂದ ಪ್ರಮುಖ ವಾದಗಳು, ಆಸಕ್ತಿಕರ ಅಂಶಗಳನ್ನು ಇಲ್ಲಿ ದಾಖಲಿಸಲಾಗಿದೆ.

ರಿಯಾ ಚಕ್ರವರ್ತಿ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್

ಹಿರಿಯ ನ್ಯಾಯವಾದಿ ಶ್ಯಾಮ್‌ ದಿವಾನ್
"ಬಿಹಾರದಲ್ಲಿ ದಾಖಲಿಸಿರುವ ಎಫ್‌ಐಆರ್‌ ಗೆ ಪಟ್ನಾದಲ್ಲಿ ನಡೆದಿರುವ ಯಾವುದೇ ಅಪರಾಧ ಪ್ರಕರಣಗಳ ಜೊತೆ ಸಂಬಂಧವಿಲ್ಲ. ಈ ಎಫ್‌ಐಆರ್‌ ದಾಖಲಿಸುವಲ್ಲಿ 38 ದಿನಗಳಷ್ಟು ಗುರುತರ ವಿಳಂಬವಾಗಿದೆ.”
“ಘನ ನ್ಯಾಯಮೂರ್ತಿಗಳಾದ ತಮ್ಮ ಆದೇಶವನ್ನು ತೊಡೆದು ಹಾಕುವ ರೀತಿಯಲ್ಲಿ ಕಾರ್ಯಾಂಗ ಕ್ರಿಯೆ ನಡೆಸಲು ಸಾಧ್ಯವಿಲ್ಲ… ಬಿಹಾರ ರಾಜ್ಯಪಾಲರ ಆದೇಶವಾಗಲಿ ಮತ್ತು ಡಿ ಎಸ್‌ ಪಿ ಇ ಕಾಯಿದೆ ಅಡಿಯಾಗಲಿ (ಸಿಬಿಐ ಗೆ ಪ್ರಕರಣವನ್ನು ವರ್ಗಾಯಿಸುವ ಸಂಬಂಧ) 406ನೇ ಸೆಕ್ಷನ್‌ ಅಡಿ ಸಲ್ಲಿಸಿರುವ ಮನವಿಯನ್ನು (ಪಟ್ನಾದಿಂದ ಮುಂಬೈಗೆ ಪ್ರಕರಣವನ್ನು ವರ್ಗಾವಣೆ ಕೋರಿರುವ) ಹತ್ತಿಕ್ಕಲಾಗುವುದಿಲ್ಲ.”
“ಬಿಹಾರದಲ್ಲಿ ಎಫ್‌ಐಆರ್‌ ದಾಖಲಿಸಿರುವುದರ ಹಿಂದೆ ಗಮನಾರ್ಹವಾಗಿ ರಾಜಕೀಯ ಶಕ್ತಿಗಳ ಪ್ರಭಾವವಿದೆ… ಪಟ್ನಾ ಪೊಲೀಸರು ಎಫ್‌ಐಆರ್‌ ದಾಖಲಿಸುವ ಬಗ್ಗೆ ಹಿಂಜರಿಕೆ ಹೊಂದಿದ್ದರು, ಆದರೆ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮತ್ತು ನಾಯಕ ಸಂಜಯ್‌ ಝಾ ಅವರು ಎಫ್‌ಐಆರ್‌ ದಾಖಲಿಸುವಂತೆ ಹಾಗೂ ಬಿಹಾರದಲ್ಲಿ ತನಿಖೆ ನಡೆಸುವಂತೆ ಪಟ್ಟು ಹಿಡಿದರು… ಅಲ್ಲಿ ಸನ್ನಿವೇಶ ಉದ್ವಿಗ್ನವಾಗಿದೆ. ಅತಿಯಾಗಿ ರಾಜಕೀಯಗೊಳಿಸಿರುವ ಈ ಪ್ರಕರಣದಲ್ಲಿ ಅರ್ಜಿದಾರರಿಗೆ ಭದ್ರತೆ ಇರುತ್ತದೆ ಎಂದು ನಾನು ಭಾವಿಸುತ್ತೇನೆ.”
ಶ್ಯಾಮ್‌ ದಿವಾನ್, ಹಿರಿಯ ನ್ಯಾಯವಾದಿ

ಬಿಹಾರ ಪೊಲೀಸರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಮಣಿಂದರ್‌ ಸಿಂಗ್

ಹಿರಿಯ ನ್ಯಾಯವಾದಿ ಮಣಿಂದರ್‌ ಸಿಂಗ್
“56 ಮಂದಿಯನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಜೂನ್‌ 25ರಂದು ಮರಣೋತ್ತರ ಪರೀಕ್ಷಾ‌ ವರದಿ ಬಂದಿತ್ತು. ಅನೇಕ ಜನರನ್ನು ವಿಚಾರಣೆಗೆ ಒಳಪಡಿಸಿದ ನಂತರವೂ ಮಹಾರಾಷ್ಟ್ರ ಎಫ್‌ಐಆರ್‌ ದಾಖಲಿಸಲಿಲ್ಲ… ಅಂತಿಮ ಮರಣೋತ್ತರ ಪರೀಕ್ಷಾ ವರದಿಯ ನಂತರ ಸೆಕ್ಷನ್‌ 174 ಸಿಆರ್‌ಪಿಸಿ ಅನ್ವಯ ಒಂದೋ ಪ್ರಕ್ರಿಯೆಗಳನ್ನು ನಿಲ್ಲಿಸಲಾಗುತ್ತದೆ ಇಲ್ಲವೇ ಎಫ್‌ಐಆರ್‌ ದಾಖಲಿಸಲಾಗುತ್ತದೆ. ಜೂನ್‌ 25ರ ನಂತರ, ಅಂತಿಮ ಮರಣೋತ್ತರ ಪರೀಕ್ಷಾ ವರದಿ ದೊರೆತ ಮೇಲೆ ಆ 56 ಜನರಲ್ಲಿ ಎಷ್ಟು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ?”
“ಮುಂಬೈ ಪೊಲೀಸ್‌ರ ತನಿಖೆಯಲ್ಲಿ ಸಂಪೂರ್ಣ ಲೋಪವಿದೆ. ಮಹಾರಾಷ್ಟ್ರದ ರಾಜಕೀಯ ವರ್ಗದ ಮೇಲೆ ಆರೋಪಗಳಿದ್ದು, ಎಫ್‌ಐಆರ್‌ ದಾಖಲಿಕೆಯನ್ನೂ ಸಹ ಅದು ತಡೆದಿದೆ. ಬಿಹಾರ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರನ್ನು ಬಂಧನದಲ್ಲಿಡಲಾಗಿದೆ.”
ಮಣಿಂದರ್ ಸಿಂಗ್‌, ಹಿರಿಯ ನ್ಯಾಯವಾದಿ

ಮುಂಬೈ ಪೊಲೀಸರ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ

ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ
"ಆರ್‌ ಪಿ ಸಿ (ಅಪರಾಧ ಪ್ರಕ್ರಿಯಾ ಸಂಹಿತೆ) ಅನ್ನು ಹತ್ಯೆ ಮಾಡುವ ಪ್ರಯತ್ನ ಈ ಪ್ರಕರಣದಲ್ಲಾಗಿದೆ, ಇಲ್ಲಿ ವ್ಯಾಪ್ತಿ ಎನ್ನುವುದೇ ಗಾಯಾಳುವಾಗಿದೆ! ಬಿಹಾರವು ಮೃತ ವ್ಯಕ್ತಿ ಬಿಹಾರಕ್ಕೆ ಸೇರಿದವರು ಎಂದು ಹೇಳುತ್ತದೆ. ಇದು ಕಲ್ಪನೆಗೂ ನಿಲುಕದ್ದು. ವ್ಯಾಪ್ತಿಯೇ ಇಲ್ಲದ ತನಿಖೆ ನಡೆಸಲು ಬಿಹಾರವು ಕೇಳುತ್ತಿದೆ. ಯಾವುದೇ ಪ್ರಾಸಿಕ್ಯೂಟಿಂಗ್ ರಾಜ್ಯವು (ಕ್ರಮ ಜರುಗಿಸುವ ರಾಜ್ಯ‌) ತನಿಖೆಯನ್ನು ಕೈಗೊಳ್ಳಲು ಇಷ್ಟೊಂದು ಹಪಹಪಿಸುವುದನ್ನು ನೀವು ನೋಡಿದ್ದೀರಾ?”
“ನಮಗೆಲ್ಲಾ ಗೊತ್ತಿದೆ, ಚುನಾವಣೆ ಹತ್ತಿರದಲ್ಲೇ ಇರುವ ರಾಜ್ಯವೊಂದು ಏಕೆ ಹೀಗೆ ಮಾಡುತ್ತದೆ ಎನ್ನುವುದು. ಚುನಾವಣೆ ಮುಗಿದ ನಂತರ ನೀವು ಈ ಪ್ರಕರಣದ ಬಗ್ಗೆ ಕೇಳುವುದೂ ಇಲ್ಲ.”
ಅಭಿಷೇಕ್‌ ಮನು ಸಿಂಘ್ವಿ , ಹಿರಿಯ ನ್ಯಾಯವಾದಿ