Justices SK Kaul and MM Sundresh
Justices SK Kaul and MM Sundresh  
ಸುದ್ದಿಗಳು

ಜಾಮೀನು ರಹಿತ ಆರೋಪ ಎದುರಿಸುತ್ತಿರುವ, ಆದರೆ ತನಿಖೆ ವೇಳೆ ಬಂಧನಕ್ಕೊಳಪಡದ ವ್ಯಕ್ತಿ ಜಾಮೀನಿಗೆ ಅರ್ಹ: ಸುಪ್ರೀಂ ಕೋರ್ಟ್

Bar & Bench

ಒಬ್ಬ ವ್ಯಕ್ತಿ ಜಾಮೀನು ರಹಿತ ಆರೋಪ ಎದುರಿಸುತ್ತಿದ್ದು ತನಿಖೆ ಅವಧಿಯಲ್ಲಿ ಆತನ ಬಂಧನ ಅಗತ್ಯವಿಲ್ಲದಿದ್ದರೆ, ಅಂತಹ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತ ಎಂದು ಸುಪ್ರೀಂ ಕೋರ್ಟ್ ಹೇಳಿದೆ. (ಅಮನ್ ಪ್ರೀತ್ ಸಿಂಗ್ ಮತ್ತು ಸಿಬಿಐ ನಡುವಣ ಪ್ರಕರಣ).

ತನಿಖೆಯ ಸಮಯದಲ್ಲಿ ಆರೋಪಿಯನ್ನು ಬಂಧಿಸದೇ ಇದ್ದರೆ ಮತ್ತು ಆರೋಪಪಟ್ಟಿ ಸಲ್ಲಿಸುವ ಮೊದಲು ಬಂಧನಕ್ಕೆ ಒಳಪಡಿಸದೇ ಇದ್ದರೆ ಅಂತಹ ವ್ಯಕ್ತಿ ಜಾಮೀನಿಗೆ ಅರ್ಹ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

"ಒಬ್ಬ ವ್ಯಕ್ತಿ ಹಲವು ವರ್ಷಗಳಿಂದ ಜೈಲಿನಲ್ಲಿದ್ದು ಬಂಧ ಮುಕ್ತನಾಗಿದ್ದರೆ ಮತ್ತು ತನಿಖೆಯ ಸಮಯದಲ್ಲಿ ಆತನನ್ನು ಬಂಧಿಸದೇ ಇದ್ದಲ್ಲಿ, ಹಠಾತ್ತನೆ ಆತನ ಬಂಧನಕ್ಕೆ ನಿರ್ದೇಶಿಸುವುದು ಮತ್ತು ಕೇವಲ ಆರೋಪಪಟ್ಟಿ ಸಲ್ಲಿಸಿದ ಕಾರಣಕ್ಕೆ ಜೈಲುವಾಸ ಅನುಭವಿಸುವಂತೆ ಮಾಡುವುದು ಜಾಮೀನು ನೀಡುವ ಆಡಳಿತಾತ್ಮಕ ತತ್ವಗಳಿಗೆ ವಿರುದ್ಧವಾಗಿದೆ. ನಾವು ಇದನ್ನು ಹೆಚ್ಚು ಒಪ್ಪಲು ಸಾಧ್ಯವಿಲ್ಲ” ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.

ಪ್ರಸ್ತುತ ಪ್ರಕರಣದಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ಮಧ್ಯಂತರ ರಕ್ಷಣೆ ನೀಡಿದ್ದರೂ ಆರೋಪಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಯತ್ನಿಸಿದ್ದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂಎಂ ಸುಂದರೇಶ್‌ ಅವರಿದ್ದ ಪೀಠ “ಇದು ಸಿಆರ್‌ಪಿಸಿಯ ಸೆಕ್ಷನ್ 170 ಅನ್ನು ತಪ್ಪಾಗಿ ಗ್ರಹಿಸಿದ ಮತ್ತು ತಪ್ಪಾಗಿ ಅರ್ಥೈಸಿದ ಇನ್ನೊಂದು ಪ್ರಕರಣವಾಗಿದೆ!" ಎಂದು ಹೇಳಿದೆ.

ಸಾಕ್ಷ್ಯಗಳು ಸಾಕಷ್ಟಿರುವಾಗ ಸಂಬಂಧಪಟ್ಟ ನ್ಯಾಯಾಧೀಶರಿಗೆ ಪ್ರಕರಣಗಳನ್ನು ಕಳುಹಿಸಿದ ನಂತರ ಪಾಲಿಸಬೇಕಾದ ಕಾರ್ಯವಿಧಾನದ ಕುರಿತು ಸಿಆರ್‌ಪಿಸಿ ಸೆಕ್ಷನ್ 170 ತಿಳಿಸುತ್ತದೆ. “ಒಮ್ಮೆ ಆರೋಪಪಟ್ಟಿ ಸಲ್ಲಿಸಿದ ನಂತರ, ಸಂಬಂಧಿತ ನ್ಯಾಯಾಲಯ ಅದನ್ನು ತಕ್ಷಣವೇ ಒಪ್ಪಿಕೊಳ್ಳಬೇಕು ಮತ್ತು ಸಿಆರ್‌ಪಿಸಿ ಸೆಕ್ಷನ್ 173ರ (ತನಿಖೆ ಪೂರ್ಣಗೊಂಡ ನಂತರ ಪೊಲೀಸ್ ಅಧಿಕಾರಿಯ ವರದಿ) ಪ್ರಕಾರ ಮುಂದುವರೆಯಬೇಕು” ಎಂದು ಅದು ವಿವರಿಸಿದೆ.

ಅದಾದ ನಂತರ ವ್ಯಕ್ತಿಗೆ ಸಮನ್ಸ್‌ ನೀಡಲು ಬಂಧನ ವಾರಂಟ್ ಹೊರಡಿಸಬೇಕಾದರೆ, ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 87ರ ಅಡಿಯಲ್ಲಿ ಪರಿಗಣಿಸಲಾಗಿರುವ ಕಾರಣಗಳನ್ನು ದಾಖಲಿಸಬೇಕಾಗುತ್ತದೆ " ಎಂದಿದೆ. (I) ಜಾಮೀನು ರಹಿತ ಅಪರಾಧದ ಆರೋಪಿತ ವ್ಯಕ್ತಿ ಮತ್ತು (ii) ತನಿಖೆಯ ಅವಧಿಯಲ್ಲಿ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲದಿದ್ದಾಗ "ಇಂತಹ ಸನ್ನಿವೇಶದಲ್ಲಿ, ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸೂಕ್ತ, ಏಕೆಂದರೆ ಆತನನ್ನು ವಿಚಾರಣೆಯ ಸಮಯದಲ್ಲಿ ಬಂಧಿಸದ ಅಥವಾ ಬಂಧನಕ್ಕೆ ಒಳಪಡಿಸದ ಸನ್ನಿವೇಶಗಳು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅರ್ಹವಾಗಿದೆ." ಎಂದು ನ್ಯಾಯಾಲಯ ಹೇಳಿದೆ.

ಈ ಸಂಬಂಧ ಸಿದ್ಧಾರ್ಥ್‌ ಮತ್ತು ಉತ್ತರಪ್ರದೇಶ ಸರ್ಕಾರದ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪಿನ ಪ್ರತಿಗಳನ್ನು ವಿಚಾರಣಾ ನ್ಯಾಯಾಲಯಗಳಿಗೆ ನೀಡಬೇಕು ಎಂದು ಕೂಡ ನ್ಯಾಯಾಲಯ ಈ ಸಂದರ್ಭದಲ್ಲಿ ನಿರ್ದೇಶಿಸಿತು. “ಈಗಾಗಲೇ ಉದ್ಭವಿಸಿದ ಮತ್ತು ಪದೇ ಪದೇ ಘಟಿಸುವ ಇಂತಹ ಸನ್ನಿವೇಶಗಳನ್ನು ತಪ್ಪಿಸುವ ಸಲುವಾಗಿ ಸ್ಥಳೀಯವಾಗಿ ಸಮಸ್ಯೆ ಕಂಡುಬರುತ್ತಿರುವ ಹೈಕೋರ್ಟ್‌ಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಸಿದ್ಧಾರ್ಥ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಒದಗಿಸುವುದು ಸೂಕ್ತ” ಎಂದು ಪೀಠ ಈ ಸಂದರ್ಭದಲ್ಲಿ ತಿಳಿಸಿತು.