Rahul Mamkootathil Facebook
ಸುದ್ದಿಗಳು

ಮೂರನೇ ಅತ್ಯಾಚಾರ ಪ್ರಕರಣ: ಕೇರಳ ಶಾಸಕ ರಾಹುಲ್‌ ಮಮ್ಕೂಟತ್ತಿಲ್‌ಗೆ ಜಾಮೀನು ನಿರಾಕರಣೆ

ವಿಚಾರಣಾ ನ್ಯಾಯಾಲಯವು ಜನವರಿ 16ರಂದು ಮಮ್ಕೂಟತ್ತಿಲ್‌ ಅವರ ಜಾಮೀನು ಅರ್ಜಿಯ ಗೋಪ್ಯ ವಿಚಾರಣೆ ನಡೆಸಿತ್ತು. ಅಂತಿಮವಾಗಿ ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

Bar & Bench

ತಮ್ಮ ವಿರುದ್ಧ ಮೂರನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಉಚ್ಚಾಟಿತ ಕಾಂಗ್ರೆಸ್ ನಾಯಕ, ಪಾಲಕ್ಕಾಡ್‌ನ ಯುವ ಶಾಸಕ ರಾಹುಲ್ ಮಮ್ಕೂಟತ್ತಿಲ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೇರಳ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ [ರಾಹುಲ್ ಬಿಆರ್ @ರಾಹುಲ್ ಮಮ್ಕೂಟತಿಲ್ vs ಕೇರಳ ರಾಜ್ಯ].

ತಿರುವಲ್ಲಾ ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶೆ ಅರುಂಧತಿ ದಿಲೀಪ್ ಇಂದು ಈ ಕುರಿತಾದ ಆದೇಶ ಪ್ರಕಟಿಸಿದ್ದಾರೆ. ತಿರುವಲ್ಲಾ ಮೂಲದ ಮಹಿಳೆಯೊಬ್ಬರು ತನ್ನ ಮೇಲೆ ಮಮ್ಕೂಟತ್ತಿಲ್‌ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2024 ರಲ್ಲಿ ನೀಡಿದ ದೂರಿನ ಮೇರೆಗೆ ಮಮ್ಕೂಟತ್ತಿಲ್‌ ವಿರುದ್ಧ ಪ್ರಕರಣ ದಾಖಲಾಗಿತ್ತು.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಮ್ಕೂಟತ್ತಿಲ್‌ ಅವರನ್ನು ಜನವರಿ 11, ಭಾನುವಾರ ಪಾಲಕ್ಕಾಡ್‌ನ ಹೋಟೆಲೊಂದರಲ್ಲಿ ಪೊಲೀಸರು ಬಂಧಿಸಿದ್ದರು.

ದೂರುದಾರರೊಂದಿಗಿನ ತಮ್ಮ ಸಂಬಂಧವು ಸಮ್ಮತಿಯಿಂದ ಕೂಡಿತ್ತು. ಮಹಿಳೆ ವಿವಾಹಿತರಾಗಿದ್ದಾರೆಂದು ತಮಗೆ ತಿಳಿದಿರಲಿಲ್ಲ ಎಂದು ಶಾಸಕ ಮಮ್ಕೂಟತ್ತಿಲ್‌ ತಮ್ಮ ವಿರುದ್ಧದ ಆರೋಪವನ್ನು ನಿರಾಕರಿಸಿದ್ದಾರೆ. ದೂರುದಾರೆಯ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿದ ನಂತರ ತಾನು ತಕ್ಷಣವೇ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದಾಗಿ ಅವರು ಹೇಳಿದ್ದಾರೆ. ಇಡೀ ಪ್ರಕರಣವು ತಮ್ಮ ಸಾರ್ವಜನಿಕ ಪ್ರತಿಷ್ಠೆಯನ್ನು ಹಾಳು ಮಾಡುವ ಉದ್ದೇಶವನ್ನು ಹೊಂದಿದೆ ಎನ್ನುವುದು ಮಮ್ಕೂಟತ್ತಿಲ್‌ ಅವರ ವಾದ.

ವಾರಾಂತ್ಯದಲ್ಲಿ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಅವರನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆಗೊಳಪಡಿಸಲು ಮಮ್ಕೂಟತ್ತಿಲ್‌ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿದ್ದರು. ಮೂರು ದಿನಗಳ ಕಸ್ಟಡಿ ಅವಧಿಯು ಜ.15ಕ್ಕೆ ಮುಗಿದಿತ್ತು.

ಇದರ ಬೆನ್ನಿಗೇ ವಿಚಾರಣಾ ನ್ಯಾಯಾಲಯವು ಶುಕ್ರವಾರ, ಜನವರಿ 16ರಂದು ಮಮ್ಕೂಟತ್ತಿಲ್‌ ಅವರ ಜಾಮೀನು ಅರ್ಜಿಯ ಗೋಪ್ಯ ವಿಚಾರಣೆ ನಡೆಸಿತ್ತು. ಅಂತಿಮವಾಗಿ ಇಂದು ಜಾಮೀನು ಅರ್ಜಿಯನ್ನು ವಜಾಗೊಳಿಸಿತು.

ಪ್ರಸಕ್ತ ಪ್ರಕರಣವೂ ಸೇರಿದಂತೆ ಮಮ್ಕೂಟತ್ತಿಲ್‌ ಒಟ್ಟು ಮೂರು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಂದು ಅತ್ಯಾಚಾರ ಪ್ರಕರಣದಲ್ಲಿ, ತಿರುವನಂತಪುರಂನ ಸೆಷನ್ಸ್ ನ್ಯಾಯಾಲಯವು ಈ ಹಿಂದೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಂಗೀಕರಿಸಿತ್ತು. ನಂತರ, ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಅವರ ಬಂಧನವನ್ನು ಕೇರಳ ಹೈಕೋರ್ಟ್ ಜನವರಿ 21ರವರೆಗೆ ತಡೆಹಿಡಿದಿತ್ತು.

ಲೈಂಗಿಕ ದುರ್ವರ್ತನೆಯ ಆರೋಪಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ವರ್ಷ ಆಗಸ್ಟ್‌ನಲ್ಲಿ ಮಮ್ಕೂಟತ್ತಿಲ್‌ ಸದಸ್ಯತ್ವವನ್ನು ಅಮಾನತುಗೊಳಿಸಿತ್ತು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಮ್ಕೂಟತ್ತಿಲ್‌ ಯುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ, ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಲಾಯಿತು. ಪ್ರಸಕ್ತ ಅವರು ಪಾಲಕ್ಕಾಡ್ ಕ್ಷೇತ್ರದ ಜನಪ್ರತಿನಿಧಿಯಾಗಿ ಮುಂದುವರೆದಿದ್ದಾರೆ.

ಹಿರಿಯ ವಕೀಲ ಸಾಸ್ತಮಂಗಲಂ ಅಜಿತ್‌ಕುಮಾರ್ ಮತ್ತು ವಕೀಲ ಶೇಖರ್ ಜಿ ಥಂಪಿ ಅವರೊಂದಿಗೆ ಮಮ್ಕೂಟಥಿಲ್ ಪರವಾಗಿ ಹಾಜರಾಗಿದ್ದರು.