Couple (representational) 
ಸುದ್ದಿಗಳು

ಮದುವೆ ವಯಸ್ಸಿಗೆ ಬಾರದಿದ್ದರೂ ಲಿವ್- ಇನ್ ಜೋಡಿ ರಕ್ಷಣೆಗೆ ಅರ್ಹರು: ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್

ಪುರುಷ ಸಂಗಾತಿಗೆ 18 ವರ್ಷ ವಯಸ್ಸಾಗಿದ್ದು ಮದುವೆಗೆ (ದೇಶದಲ್ಲಿ ಪುರುಷನ ವಿವಾಹ ವಯೋಮಿತಿ 21 ವರ್ಷ ) ಅರ್ಹನಲ್ಲದಿದ್ದರೂ ಪೊಲೀಸರಿಗೆ ರಕ್ಷಣ ನೀಡುವಂತೆ ಆದೇಶಿಸುವಾಗ ನ್ಯಾಯಾಲಯ ಈ ಅವಲೋಕನ ಮಾಡಿದೆ.

Bar & Bench

ಲಿವ್‌- ಇನ್‌ ಸಂಬಂಧದಲ್ಲಿರುವ ಜೋಡಿಗೆ ಮದುವೆಯ ವಯಸ್ಸು ಆಗಿರದಿದ್ದರೂ ಅವರ ಸಂಬಂಧಿಕರು ಒಡ್ಡುವ ಬೆದರಿಕೆಗಳಿಂದ ರಕ್ಷಣೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ [ಗುರ್ದೀಪ್ ಕೌರ್ ಮತ್ತಿತರರು ಹಾಗೂ  ಪಂಜಾಬ್ ಸರ್ಕಾರ ನಡುವಣ ಪ್ರಕರಣ].

ಪುರುಷ ಸಂಗಾತಿಗೆ 18 ವರ್ಷ ವಯಸ್ಸಾಗಿದ್ದು ಮದುವೆಗೆ (ದೇಶದಲ್ಲಿ ಪುರುಷನ ವಿವಾಹ ವಯೋಮಿತಿ 21 ವರ್ಷ) ಅರ್ಹನಲ್ಲದಿದ್ದರೂ ಪೊಲೀಸ್‌ ರಕ್ಷಣೆ ನೀಡುವಂತೆ ಆದೇಶಿಸುವಾಗ ನ್ಯಾಯಮೂರ್ತಿ ಅರುಣ್ ಮೊಂಗಾ ಈ ಅವಲೋಕನ ಮಾಡಿದರು.

ಜೋಡಿ ವಿವಾಹಿತರಾಗಿರಲಿ ಇಲ್ಲವೇ ಮದುವೆ ವಯಸ್ಸಿನವರಾಗಿರಲಿ ಅವರಿಗೆ ಸಂವಿಧಾನದ  21ನೇ ವಿಧಿಯಡಿ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಪ್ರಸ್ತುತ ಪ್ರಕರಣ ಅರ್ಜಿದಾರರ ವಿವಾಹಕ್ಕೆ ಸಂಬಂಧಿಸಿದ್ದಲ್ಲ ಬದಲಿಗೆ ಅವರು ಜೀವಿಸುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಹರಣಕ್ಕೆ ಸಂಬಂಧಿಸಿದ್ದಾಗಿದೆ. ಸಂವಿಧಾನದ 21ನೇ ವಿಧಿಯಡಿ ಸಂವಿಧಾನಾತ್ಮಕ ಮೂಲಭೂತ ಹಕ್ಕನ್ನು ಅವರು ಪಡೆಯಬೇಕೆಂಬುದರಲ್ಲಿ ಯಾವುದೇ ಹಿಂಜರಿಕೆ ಇಲ್ಲ. ಸಾಂವಿಧಾನಿಕ ವಿಧಾನದಡಿ ನ್ಯಾಯಾಲಯ ಅದರ ಪವಿತ್ರ ರಕ್ಷಕನಾಗಿರುವುದರಿಂದ ಶಾಸ್ತ್ರೋಕ್ತ ಅಥವಾ ಅನೂರ್ಜಿತ ವಿವಾಹವೇ ಇರಲಿ ಅಥವಾ ಅವರು ಮದುವೆಯೇ ಆಗಿಲ್ಲದಿದ್ದರೂ ಅವರಿಗೆ ರಕ್ಷಣೆ ಒದಗಿಸಬೇಕು ಎಂದು ನ್ಯಾಯಾಲಯ ನುಡಿದಿದೆ.

ಪ್ರತಿಯೊಬ್ಬ ನಾಗರಿಕನ ಜೀವನ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸುವ ಕರ್ತವ್ಯ ಪ್ರಭುತ್ವದ್ದಾಗಿದೆ ಎಂದು ನ್ಯಾಯಾಲಯ ಹೇಳಿದೆ. “ನಾಗರಿಕರು ಅಪ್ರಾಪ್ತರಿರಲಿ ಇಲ್ಲವೇ ವಯಸ್ಕರಾಗಿರಲಿ ಅವರ ಜೀವಿಸುವ ಹಕ್ಕನ್ನು ಮಹತ್ವದ ನೆಲೆಯಲ್ಲಿ ಪರಿಗಣಿಸಬೇಕು . ಭಾರತದ ಪ್ರಜೆಗಳಾಗಿರುವ ಅರ್ಜಿದಾರರಿಗೆ ಪ್ರಸ್ತುತ ಪ್ರಕರಣದಲ್ಲಿ ಮದುವೆಯ ವಯಸ್ಸಾಗಿಲ್ಲ ಎಂಬ ಅಂಶ ಸಂವಿಧಾನ ಕಲ್ಪಿಸಿರುವ ಅವರ ಮೂಲಭೂತ ಹಕ್ಕನ್ನು ಕಸಿದುಕೊಳ್ಳುವುದಿಲ್ಲ” ಎಂದು ಅದು ವಿವರಿಸಿದೆ.

ಈ ಹಿನ್ನೆಲೆಯಲ್ಲಿ ಲಿವ್‌-ಇನ್‌ ಸಂಬಂಧದಲ್ಲಿರುವ 21 ವರ್ಷದ ಯುವತಿ ಮತ್ತು 18 ವರ್ಷದ ಯುವಕನಿಗೆ ಅವರ ಸಂಬಂಧಿಗಳಿಂದ ಬೆದರಿಕೆ ಇದೆ ಎಂಬ ಅಂಶವನ್ನು ಪರಿಶೀಲಿಸಿ ಅವರಿಗೆ ರಕ್ಷಣೆ ನೀಡಲು ಹೈಕೋರ್ಟ್‌ ಪೊಲೀಸರಿಗೆ ಆದೇಶಿಸಿತು.