Live-in Relationship.
Live-in Relationship.  indianewsnet.com/
ಸುದ್ದಿಗಳು

ಅವಿವಾಹಿತ ವ್ಯಕ್ತಿಯೊಂದಿಗೆ ವಿವಾಹಿತ ವ್ಯಕ್ತಿಯ ಲಿವ್- ಇನ್ ಸಂಬಂಧಕ್ಕೆ ಅನುಮತಿ ಇಲ್ಲ: ರಾಜಸ್ಥಾನ ಹೈಕೋರ್ಟ್

Bar & Bench

ವಿವಾಹಿತ ವ್ಯಕ್ತಿ ಮತ್ತು ಅವಿವಾಹಿತ ವ್ಯಕ್ತಿಯ ನಡುವಿನ ಲಿವ್‌ ಇನ್‌ (ಸಹ ಜೀವನ) ಸಂಬಂಧಕ್ಕೆ ಅನುಮತಿ ನೀಡಲಾಗದು ಎಂದು ರಾಜಸ್ಥಾನ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ. (ರಶಿಕಾ ಖಂಡಲ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ).

ಜೋಡಿಯಲ್ಲಿ ಒಬ್ಬರಾದ, ಎರಡನೇ ಅರ್ಜಿದಾರ ಹೇಮಂತ್ ಸಿಂಗ್ ರಾಥೋಡ್ ಈಗಾಗಲೇ ವಿವಾಹಿತರಾಗಿರುವುದು ದಾಖಲೆಗಳಿಂದ ದೃಢಪಟ್ಟಿದ್ದು ಹೀಗಾಗಿ ರಕ್ಷಣೆ ನೀಡಲಾಗದು ಎಂದು ನ್ಯಾ. ಪಂಕಜ್ ಭಂಡಾರಿ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟಪಡಿಸಿತು.

ಡಿ ವೇಲುಸಾಮಿ ಮತ್ತು ಡಿ ಪಚ್ಚೈಅಮ್ಮಾಳ್‌ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಂತೆ ಲಿವ್‌ ಇನ್‌ ಸಂಬಂಧ ಬಯಸುವ ಇಬ್ಬರೂ ವ್ಯಕ್ತಿಗಳಿಗಿರಬೇಕಾದ ಪೂರ್ವಾರ್ಹತೆ ಎಂದರೆ ಅವರು ಅವಿವಾಹಿತರಾಗಿರಬೇಕು ಎನ್ನುವುದನ್ನು ಪ್ರಸ್ತಾಪಿಸಿದ ಹೈಕೋರ್ಟ್‌ ಅರ್ಜಿಯನ್ನು ತಿರಸ್ಕರಿಸಿತು. ಸುಪ್ರೀಂಕೋರ್ಟ್‌ ತನ್ನ ತೀರ್ಪಿನಲ್ಲಿ “ಸಮಾಜದ ಎದುರಿಗೆ ಜೋಡಿಯು ತಮ್ಮನ್ನು ತಾವು ದಂಪತಿಗೆ ಸರಿಸಮನಾಗಿ ತೋರಿಸುವಂತಿರಬೇಕು ಅಲ್ಲದೆ ಕಾನೂನುಬದ್ಧವಾದ ವಿವಾಹಯೋಗ್ಯ ವಯಸ್ಸು ಹೊಂದಿರಬೇಕು ಹಾಗೂ ಅವಿವಾಹಿತರಾಗಿರಬೇಕು” ಎಂದು ತಿಳಿಸಿತ್ತು.

ಮತ್ತೊಂದು ಪ್ರಕರಣದಲ್ಲಿ ರಾಜಸ್ಥಾನ ಹೈಕೋರ್ಟ್ ಜೂನ್‌ 7ರಂದು ಸಹ ಜೀವನ ನಡೆಸುತ್ತಿರುವ ಜೋಡಿಗೆ ಪೊಲೀಸ್ ರಕ್ಷಣೆ ನೀಡುವಂತೆ ಸೂಚಿಸಿತ್ತು. ಅಲ್ಲದೆ ಇತ್ತೀಚೆಗೆ ಅಲಾಹಾಬಾದ್‌ ಹೈಕೋರ್ಟ್‌ ಕೂಡ ಸಹ ಜೀವನ ನಡೆಸುತ್ತಿರುವ ಜೋಡಿಯೊಂದರ ಶಾಂತಿಯುತ ಬದುಕಿನಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿ ಮಧ್ಯಂತರ ರಕ್ಷಣೆ ಒದಗಿಸಿದ್ದನ್ನು ಇಲ್ಲಿ ನೆನೆಯಬಹುದು.