ಸಹಜೀವನ ಸಂಬಂಧಗಳನ್ನು ಮದುವೆ ಎಂದು ಕಾನೂನು ಮಾನ್ಯ ಮಾಡುವುದಿಲ್ಲ. ಇಬ್ಬರು ಪಕ್ಷಕಾರರು ಕೇವಲ ಒಪ್ಪಂದದ ಮೂಲಕ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದು ಯಾವುದೇ ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯಿದೆಗೆ ಅನುಗುಣವಾಗಿ ಅವರು ಮದುವೆಯಾಗಿರದಿದ್ದರೆ ಆ ಸಂಬಂಧವನ್ನು ವಿವಾಹ ಎಂದು ಅವರು ಹೇಳಲಾಗದು ಅಥವಾ ವಿಚ್ಛೇದನ ಪಡೆಯಲಾಗದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.
ಸಹಜೀವನ ಸಂಬಂಧಕ್ಕೆ ಇನ್ನೂ ಕಾನೂನು ಮಾನ್ಯತೆ ದೊರೆತಿಲ್ಲ ಮತ್ತು ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯಿದೆಯಂತಹ ಜಾತ್ಯತೀತ ಕಾನೂನಿಗೆ ಅನುಗುಣವಾಗಿ ವಿವಾಹವಾಗಿದ್ದರೆ ಮಾತ್ರ ಕಾನೂನು ಮಾನ್ಯತೆ ಇರುತ್ತದೆ ಎಂದು ನ್ಯಾಯಮೂರ್ತಿಗಳಾದ ಎ ಮುಹಮ್ಮದ್ ಮುಸ್ತಾಕ್ ಮತ್ತು ಸೋಫಿ ಥಾಮಸ್ ಅವರ ವಿಭಾಗೀಯ ಪೀಠ ತಿಳಿಸಿತು.
ನ್ಯಾಯಾಲಯದ ಪ್ರಮುಖ ಅವಲೋಕನಗಳು
ವಿವಾಹವೆನ್ನುವುದು ಕಾನೂನಾತ್ಮಕವಾಗಿ ಒಪ್ಪಿತವಾದ, ಗುರುತಿಸಲ್ಪಟ್ಟ ಒಂದು ಸಾಮಾಜಿಕ ಸಂಸ್ಥೆಯಾಗಿದ್ದು, ಇದು ವಿಸ್ತೃತ ಸಮಾಜವು ಪಾಲಿಸುವ ಸಾಮಾಜಿಕ ಮತ್ತು ನೈತಿಕ ಆದರ್ಶಗಳ ಬಿಂಬ.
ಸಹಜೀವನ ಸಂಬಂಧಕ್ಕೆ ವಿವಾಹ ಎಂಬುದಾಗಿ ಇನ್ನಷ್ಟೇ ಕಾನೂನಿನ ಮಾನ್ಯತೆ ದೊರೆಯಬೇಕಿದೆ.
ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯಿದೆಯಂತಹ ಜಾತ್ಯತೀತ ಕಾನೂನಿಗೆ ಅನುಗುಣವಾಗಿ ವಿವಾಹವಾಗಿದ್ದರೆ ಮಾತ್ರ ಕಾನೂನಿನ ಮಾನ್ಯತೆ ಇರುತ್ತದೆ.
ಪಕ್ಷಕಾರರು ಕೇವಲ ಒಪ್ಪಂದದ ಮೂಲಕ ಒಟ್ಟಿಗೆ ವಾಸಿಸಲು ನಿರ್ಧರಿಸಿದ್ದು ಯಾವುದೇ ವೈಯಕ್ತಿಕ ಕಾನೂನು ಅಥವಾ ವಿಶೇಷ ವಿವಾಹ ಕಾಯಿದೆಗೆ ಅನುಗುಣವಾಗಿ ಅವರು ಮದುವೆಯಾಗಿರದಿದ್ದರೆ ಆ ಸಂಬಂಧವನ್ನು ಅವರು ವಿವಾಹ ಎಂದು ಹೇಳಲಾಗದು ಮತ್ತು ಅವರು ವಿಚ್ಛೇದನ ಪಡೆಯಲು ಅರ್ಹರಾಗುವುದಿಲ್ಲ.
ವಿಚ್ಛೇದನ ಎಂಬುದು ಕಾನೂನುಬದ್ಧ ವಿವಾಹವನ್ನು ಬೇರ್ಪಡಿಸುವ ಸಾಧನವಾಗಿದೆ. ಪರಸ್ಪರ ವಿನಿಮಯದ ಕಟ್ಟುಪಾಡು ಅಥವಾ ಕರ್ತವ್ಯಗಳ ಪಾಲನೆಯಂತಹ ಬೇರೆ ಉದ್ದೇಶಗಳಿಗಾಗಿ ಸಹಜೀವನಕ್ಕೆ ಮಾನ್ಯತೆ ದೊರೆತರೂ ಅಂತಹ ಸಂಬಂಧವನ್ನು ವಿಚ್ಛೇದನದ ಉದ್ದೇಶಕ್ಕಾಗಿ ಗುರುತಿಸಬಹುದು ಎಂದರ್ಥವಲ್ಲ.
ಮಾನ್ಯ ಮಾಡಲಾದ ಮದುವೆಯ ಪ್ರಕಾರಕ್ಕೆ ಅನುಗುಣವಾಗಿ ವಿವಾಹವಾಗಿದ್ದರೆ ಮಾತ್ರ ಪಕ್ಷಕಾರರ ವಿಚ್ಛೇದನಕ್ಕೆ ಅವಕಾಶ ನೀಡಬಹುದಾಗಿದೆ.
ನಮ್ಮ ದೇಶದಲ್ಲಿ ವಿಚ್ಛೇದನ ಎಂಬುದು ವಿಲಕ್ಷಣವಾದುದು ಮತ್ತು ಅದನ್ನು ಕಾನೂನಿನ ಮೂಲಕ ಮರುವಿನ್ಯಾಸಗೊಳಿಸಿಕೊಳ್ಳಲಾಗಿದೆ. ಕೆಲವು ಸಮುದಾಯಗಳಲ್ಲಿ ಪಾಲಿಸಲಾಗುವ ಕಾನೂನೇತರ ವಿಚ್ಛೇದನಗಳು ಕೂಡ ಶಾಸನಬದ್ಧ ಕಾಯಿದೆಗಳ ಮೂಲಕ ಮಾನ್ಯತೆ ಪಡೆದಿವೆ. ವಿಚ್ಛೇದನದ ಬೇರೆಲ್ಲಾ ರೂಪಗಳಿಗೂ ಶಾಸನಬದ್ಧ ಸ್ವರೂಪ ಇದೆ.
ಸಹಜೀವನ ನಡೆಸುತ್ತಿದ್ದ ಜೋಡಿಯಲ್ಲಿ ಒಬ್ಬರು ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ ಮತ್ತೊಬ್ಬರು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದರು. 2006ರಲ್ಲಿ ಒಟ್ಟಿಗೆ ವಾಸಿಸಲು ನೋಂದಾಯಿತ ಒಪ್ಪಂದ ಮಾಡಿಕೊಂಡಿದ್ದರು. ದೀರ್ಘಕಾಲ ಸತಿಪತಿ ರೀತಿಯಲ್ಲಿ ವಾಸಿಸುತ್ತಿದ್ದ ಅವರಿಗೆ ಒಂದು ಮಗು ಕೂಡ ಇತ್ತು. ಆದರೂ ತಮ್ಮ ಸಂಬಂಧ ಕೊನೆಗಾಣಿಸಲು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ವಿಶೇಷ ವಿವಾಹ ಕಾಯಿದೆಯಡಿ ಅವರು ಮದುವೆಯಾಗಿಲ್ಲ ಎಂಬ ಅಂಶವನ್ನು ಗಮನಿಸಿದ ಕೌಟುಂಬಿಕ ನ್ಯಾಯಾಲಯ ಅವರಿಗೆ ವಿಚ್ಛೇದನ ನೀಡಲು ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಕೌಟುಂಬಿಕ ನ್ಯಾಯಾಲಯ ಇಂತಹ ವಿಚ್ಛೇದನ ಮನವಿಯನ್ನು ಪರಿಗಣಿಸುವ ಅಧಿಕಾರ ಹೊಂದಿಲ್ಲ ಎಂಬುದನ್ನು ಗಮನಿಸಿದ ಹೈಕೋರ್ಟ್ ಅದನ್ನು ನಿರ್ವಹಿಸಲಾಗದು ಎಂದು ತಿಳಿಸಿ ಅರ್ಜಿಯನ್ನು ಹಿಂತಿರುಗಿಸುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ಸೂಚಿಸಿತು.