Couple
Couple  
ಸುದ್ದಿಗಳು

ಲಿವ್ ಇನ್ ಸಂಬಂಧ 21ನೇ ವಿಧಿಯ ಉಪೋತ್ಪನ್ನ, ಇದರಿಂದ ಸ್ವಚ್ಛಂದ ಲೈಂಗಿಕತೆಗೆ ಉತ್ತೇಜನ: ಮಧ್ಯಪ್ರದೇಶ ಹೈಕೋರ್ಟ್

Bar & Bench

ಲಿವ್-ಇನ್ ಸಂಬಂಧಗಳು ಅಶ್ಲೀಲತೆ ಮತ್ತು ಕಾಮಪ್ರಚೋದಕ ನಡವಳಿಕೆಯನ್ನು ಉತ್ತೇಜಿಸುವ ಮೂಲಕ ಲೈಂಗಿಕ ಅಪರಾಧಗಳ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ಅಭಿಷೇಕ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

“ಇತ್ತೀಚಿನ ದಿನಗಳಲ್ಲಿ ಲಿವ್-ಇನ್-ರಿಲೇಶನ್‌ಶಿಪ್‌ನಿಂದ ಉಂಟಾದ ಇಂತಹ ಅಪರಾಧಗಳ ಹೆಚ್ಚಳ ಗಮನಿಸಿದರೆ, ದುರಂತಗಳಿಗೆ ಎಡೆ ಮಾಡಿಕೊಡುವ ಇದು ಸಂವಿಧಾನದ 21ನೇ ವಿಧಿಯ ಉಪೋತ್ಪನ್ನ ಎಂದು ನ್ಯಾಯಾಲಯ ಹೇಳುವ ಅನಿವಾರ್ಯತೆ ಉದ್ಭವಿಸಿದೆ. ಭಾರತೀಯ ಸಮಾಜದ ನೈತಿಕತೆಯನ್ನು ಇದು ಆವರಿಸಿಕೊಳ್ಳುತ್ತಿದ್ದು ಅಶ್ಲೀಲತೆ ಮತ್ತು ಕಾಮುಕ ನಡೆಯನ್ನು ಉತ್ತೇಜಿಸಿ ಇನ್ನಷ್ಟು ಲೈಂಗಿಕ ಅಪರಾಧಗಳಿಗೆ ಕಾರಣವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಅತ್ಯಾಚಾರ ಆರೋಪಿಯೊಬ್ಬನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಸಂತ್ರಸ್ತೆ ಹಾಗೂ ಆರೋಪಿಯು ಕೆಲ ವರ್ಷಗಳ ಕಾಲ ಲಿವ್-ಇನ್‌ ಸಂಬಂಧದಲ್ಲಿ ಇದ್ದುದನ್ನು ನ್ಯಾಯಾಲಯವು ಗಮನಿಸಿತು. ಇದೇ ವೇಳೆ ಸಂತ್ರಸ್ತೆಯು ತನ್ನ ಮೊದಲ ದೂರಿನಲ್ಲಿ ಉಲ್ಲೇಖಿಸಿರುವ ಅಂಶವನ್ನು ಪರಿಗಣೀಸಿ, "ಇದು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿ ನಡೆಸಿದ ಅತ್ಯಾಚಾರವಲ್ಲ ಬದಲಿಗೆ ಮತ್ತು ಬರುವ ಪಾನೀಯ ನೀಡಿ ಆಕೆಯನ್ನು ದುರ್ಬಳಕೆ ಮಾಡಿಕೊಂಡ ಪ್ರಕರಣ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಸಂತ್ರಸ್ತೆಯ ಮದುವೆಯನ್ನು ಬೇರೊಬ್ಬ ವ್ಯಕ್ತಿಯೊಂದಿಗೆ ಆಕೆಯ ಮನೆಯವರು ನಿಶ್ಚಯಿಸಿದ ನಂತರ ಭಗ್ನಪ್ರೇಮಿಯಾದ ಆರೋಪಿಯು ಆಕೆಯೊಂದಿಗಿನ ವೈಯಕ್ತಿಕ ಕ್ಷಣಗಳ ವಿಡಿಯೋ ತುಣುಕುಗಳನ್ನು ಸಂತ್ರಸ್ತೆಯ ಪೋಷಕರು ಹಾಗು ಭಾವಿ ಪತಿಯ ಕುಟುಂಬಸ್ಥರಿಗೆ ಕಳುಹಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ್ದ. ಇದೆಲ್ಲವನ್ನೂ ಪರಿಗಣಿಸಿ ನ್ಯಾಯಾಲಯವು ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿ ಅರ್ಜಿದಾರನನ್ನು ಪೊಲೀಸ್‌ ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತಿಳಿಸಿತು.