ಸುದ್ದಿಗಳು

ಸಾಲ ಮರುಪಾವತಿ ಬಾಕಿ: ಎಂಎಲ್‌ಸಿ ನಸೀರ್ ಅಹ್ಮದ್ ಉದ್ದೇಶಪೂರ್ವಕ ಸುಸ್ತಿದಾರ ಎಂದು ಹೆಸರಿಸದಂತೆ ಹೈಕೋರ್ಟ್‌ ಆದೇಶ

2026ರ ಫೆಬ್ರವರಿ 26ರಂದು ಐಡಿಬಿಐ ಬ್ಯಾಂಕು ತಮ್ಮನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿ ಹೊರಡಿಸಿದ ಆದೇಶ ಹಾಗೂ ಮಾರ್ಚ್ 23ರಂದು ಜಾರಿಗೊಳಿಸಿದ ನೋಟಿಸ್‌ ಪ್ರಶ್ನಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌.

Bar & Bench

ಬ್ಯಾಂಕುಗಳಿಗೆ ₹1,454 ಕೋಟಿ ಸಾಲ ಮರುಪಾವತಿ ಬಾಕಿ ಪ್ರಕರಣದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಸೀರ್ ಅಹ್ಮದ್ ಅವರನ್ನು ಉದ್ದೇಶಪೂರ್ವಕ ಸುಸ್ತಿದಾರ (ವಿಲ್‌ಫುಲ್ ಡಿಫಾಲ್ಟರ್) ಎಂದು ಹೆಸರಿಸಿ ಅವರ ಫೋಟೊಗಳನ್ನು ಬ್ಯಾಂಕಿನ ವೆಬ್‌ಸೈಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ತಮ್ಮನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಘೋಷಿಸಿ 2026ರ ಫೆಬ್ರವರಿ 26ರಂದು ಐಡಿಬಿಐ ಬ್ಯಾಂಕು ಹೊರಡಿಸಿದ ಆದೇಶ ಹಾಗೂ ಮಾರ್ಚ್ 23ರಂದು ಜಾರಿಗೊಳಿಸಿದ ನೋಟಿಸ್ ಪ್ರಶ್ನಿಸಿ ನಸೀರ್ ಅಹ್ಮದ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಸಾಲಕ್ಕೆ ಖಾತರಿದಾರರು ಆಗಿದ್ದಾರೆ. ನ್ಯಾಷನಲ್ ಕಂಪನಿ ಕಾನೂನು ನ್ಯಾಯ ಮಂಡಳಿ (ಎನ್‌ಸಿಎಲ್ಎ) ಅರ್ಜಿದಾರರನ್ನು ದಿವಾಳಿ ಎಂದು ಘೋಷಿಸಿದೆ. ಇದನ್ನು ನ್ಯಾಷನಲ್ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿ (ಎನ್‌ಸಿಎಲ್ಎಟಿ)ಯಲ್ಲಿ ಪ್ರಶ್ನಿಸಲಾಗಿದೆ. ರಾಜಿ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವಂತೆ ಎನ್‌ಸಿಎಲ್ಎಟಿ ಅವಕಾಶ ಕೊಟ್ಟಿದೆ. ಆದರೆ, ಈ ಮಧ್ಯೆ, ಬ್ಯಾಂಕ್ ಸುಸ್ತಿದಾರ ಎಂದು ಘೋಷಿಸಿ ನೋಟಿಸ್ ನೀಡಿದ್ದು, ಅರ್ಜಿದಾರರ ಫೋಟೊ ವೆಬ್‌ಸೈಟ್ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಇದಕ್ಕೆ ನಿರ್ಬಂಧಿಸಬೇಕು ಎಂದು ಕೋರಿದರು.

ಇದನ್ನು ಪರಿಗಣಿಸಿದ ಪೀಠವು ಎನ್‌ಸಿಎಲ್ಎಟಿ ಮುಂದೆ ಪ್ರಕರಣ ಬಾಕಿ ಇರುವಾಗ ಮತ್ತು ಅದರ ಮುಂದಿನ ವಿಚಾರಣೆವರೆಗೆ ಸುಸ್ತಿದಾರ ಎಂದು ಹೆಸರಿಸಿ ಅರ್ಜಿದಾರರ ಫೋಟೊ ಬ್ಯಾಂಕಿನ ವೆಬ್‌ಸೈಟ್ ಅಥವಾ ಪತ್ರಿಕೆಗಳಲ್ಲಿ ಪ್ರಕಟಿಸದಂತೆ ಐಡಿಬಿಐ ಬ್ಯಾಂಕಿಗೆ ಮಧ್ಯಂತರ ನಿರ್ದೇಶನ ನೀಡಿತು. ಮುಂದಿನ ವಿಚಾರಣಾ ದಿನಾಂಕದೊಳಗೆ ಸಂಧಾನ ಆಗದಿದ್ದರೆ, ಮಧ್ಯಂತರ ಆದೇಶ ತೆರವುಗೊಳಿಸಲಾಗುವುದು ಎಂದೂ ಸಹ ಪೀಠ ಹೇಳಿತು.

ಅಲ್ಲದೆ, ಅರ್ಜಿ ಸಂಬಂಧ ಪ್ರತಿವಾದಿಗಳಾದ ಐಡಿಬಿಐ ಬ್ಯಾಂಕ್ ಲಿಮಿಟೆಡ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ಸೇವೆಗಳ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ಪೀಠ ವಿಚಾರಣೆ ಮುಂದೂಡಿತು. ಮೆಸರ್ಸ್ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಂಡ್ ಬ್ಯಾಂಕುಗಳಿಂದ ₹1,454 ಕೋಟಿ ಸಾಲ ಪಡೆದಿತ್ತು. ಈ ಸಾಲಕ್ಕೆ ನಸೀರ್ ಅಹ್ಮದ್ ವೈಯುಕ್ತಿಕ ಖಾತರಿದಾರ (ಗ್ಯಾರಂಟರ್) ಆಗಿದ್ದರು.