Calcutta High Court 
ಸುದ್ದಿಗಳು

ಕೆಲವರು ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆದ ಮಾತ್ರಕ್ಕೆ ನಿರ್ದಾಕ್ಷಿಣ್ಯವಾಗಿ ಎಲ್ಒಸಿ ನೀಡಬಾರದು: ಕಲ್ಕತ್ತಾ ಹೈಕೋರ್ಟ್

ಎಲ್ಒಸಿ ಆಧರಿಸಿ ಕೊನೆ ಕ್ಷಣದಲ್ಲಿ ವಿಮಾನಯಾನ ತಪ್ಪಿಸುವುದು ಕ್ರೂರ ಮತ್ತು ಅನಾಗರಿಕ ಕ್ರಮವಾಗುತ್ತದೆ ಎಂದ ನ್ಯಾಯಾಲಯ.

Bar & Bench

ಕೆಲ ವ್ಯಕ್ತಿಗಳು ಬ್ಯಾಂಕ್‌ಗಳಿಗೆ ವಂಚಿಸಿ ಭಾರತದಿಂದ ಪಲಾಯನ ಮಾಡಿದ್ದಾರೆ ಎಂಬ ಕಾರಣಕ್ಕೆ ಬ್ಯಾಂಕ್‌ಗಳು ಲುಕ್‌ಔಟ್ ಸುತ್ತೋಲೆಗಳನ್ನು (ಎಲ್‌ಒಸಿ) ವಿವೇಚನಾರಹಿತವಾಗಿ ಹೊರಡಿಸುವ ಏಕರೂಪದ ತಾರ್ಕಿಕತೆ ಬಳಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ.

ಎಲ್‌ಒಸಿ ನೀಡುವುದನ್ನು ನಿಯಂತ್ರಿಸಬೇಕು ಮತ್ತು ಅದು ಸಾಲ ವಸೂಲಾತಿಗೆ ರೂಢಿಯಾಗಬಾರದು ಎಂದು ನ್ಯಾ. ಮೌಶಮಿ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.

ಲುಕ್ ಔಟ್ ಸುತ್ತೋಲೆಗೆ ಸ್ಪಷ್ಟ ರೂಪ ಮತ್ತು ಖಚಿತತೆ ನೀಡುವ ಸಲುವಾಗಿ ಅದನ್ನು ಹೊರಡಿಸುವುದರಿಂದ ಉಂಟಾಗುವ ತೀವ್ರ ಪರಿಣಾಮಗಳನ್ನು ನಿಯಂತ್ರಿಸಬೇಕು. ಬ್ಯಾಂಕ್‌ಗಳು ಸಾಲ ವಸೂಲಾತಿ ಮಾಡಲು ಇದನ್ನು ರೂಢಿ ಮಾಡಿಕೊಳ್ಳಬಾರದು. ಕೆಲವರು ಬ್ಯಾಂಕ್‌ಗಳಿಗೆ ವಂಚಿಸಿ ದೇಶದಿಂದ ಪಲಾಯನ ಮಾಡಿದ್ದಾರೆ ಎಂಬುದು ಎಲ್ಲರಿಗೂ ಲುಕ್‌ಔಟ್‌ ಸುತ್ತೋಲೆ ಹೊರಡಿಸುವ ಏಕರೂಪದ ತಾರ್ಕಿಕತೆಯಾಗಬಾರದು ಎಂದು ತೀರ್ಪು ವಿವರಿಸಿದೆ.

ಜೊತೆಗೆ ಎಲ್‌ಒಸಿ ಆಧರಿಸಿ ಕೊನೆ ಕ್ಷಣದಲ್ಲಿ ವಿಮಾನಯಾನ ತಪ್ಪಿಸುವುದು ಕ್ರೂರ ಮತ್ತು ಅನಾಗರಿಕ ಕ್ರಮವಾಗುತ್ತದೆ ಎಂದು ಅದು ಹೇಳಿದೆ.

“ಒಬ್ಬ ವ್ಯಕ್ತಿಗೆ ಕಾರಣ ತಿಳಿಸಿದೆಯೇ ಅವರನ್ನು ವಿಮಾನದಿಂದ ಕೆಳಗಿಳಿಸುವುದು ಕ್ರೂರ ಮತ್ತು ಅನಾಗರಿಕ ಕ್ರಮವಾಗುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಕಾಗದದ ತುಣುಕೊಂದನ್ನು ನೀಡಿ ಕಾರಣ ತಿಳಿಸದೆಯೇ ವ್ಯಕ್ತಿಗಳನ್ನು ವಿಮಾನಯಾನ ಕೈಗೊಳ್ಳದಂತೆ ಮಾಡಲಾಗುತ್ತಿದೆ. ಪ್ರಯಾಣಿಸುವ  ಮೂಲಭೂತ ಹಕ್ಕು ಮತ್ತು ಜೀವಿಸುವ ಹಕ್ಕಿನೊಂದಿಗೆ ಹಾಗೂ ನಿರ್ಭಯವಾಗಿ ಪ್ರಯಾಣ ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ನಿರ್ದಾಕ್ಷಿಣ್ಯವಾಗಿ ರಾಜಿ ಮಾಡಿಕೊಳ್ಳುವುದರಿಂದ ಇದು ಸ್ವಾಭಾವಿಕ ನ್ಯಾಯ ಮತ್ತು ನ್ಯಾಯಯುತ ಕ್ರಮದ ತತ್ವಗಳಿಗೆ ವಿರುದ್ಙವಾಗಿದೆ” ಎಂದು ಪೀಠ ನುಡಿದಿದೆ.  

ವ್ಯಕ್ತಿಯ ಮುಕ್ತ ಸಂಚಾರ ಮತ್ತು ಪ್ರಯಾಣದ ಹಕ್ಕನ್ನು ನಿರ್ಬಂಧಿಸುವ ಪರಿಣಾಮ ಎಲ್‌ಒಸಿಗಳಿಗೆ ಇದ್ದು ವ್ಯಕ್ತಿಯು ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇರುವಾಗ ಹಾಗೂ ಬಾಕಿ ಸಾಲ ಮರುಪಾವತಿಸದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಇಂತಹ ಸುತ್ತೋಲೆ ನೀಡಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ತನ್ನ ಸಾಲ ಮರುಪಾವತಿಯಾಗಿಲ್ಲ ಎಂದು ತಿಳಿಸಿ ವ್ಯಕ್ತಿಗಳ ಸಂಚಾರಕ್ಕೆ ಬ್ಯಾಂಕ್‌ ನಿರ್ಬಂಧ ವಿಧಿಸುವಂತೆ ಕೋರಿದಾಗ  ಲುಕ್ಔಟ್ ಸುತ್ತೋಲೆಗಳನ್ನು ಮನಬಂದಂತೆ ಮತ್ತು ಕ್ಷುಲ್ಲಕ ಪ್ರಚೋದನೆಗೆ ತುತ್ತಾಗಿ ನೀಡುವಂತಿಲ್ಲ. ದೇಶದಿಂದ ಪಲಾಯನ ಮಾಡಿ ಬಾಕಿ ಸಾಲ ಮರುಪಾವತಿಸಲು ವ್ಯಕ್ತಿಗಳು ದೇಶಕ್ಕೆ ಮರಳದೇ ಹೋದಾಗ ಎಲ್‌ಒಸಿ ಹೊರಡಿಸಬೇಕು ಎನ್ನುವುದು ಮಾತ್ರ ಸ್ವೀಕಾರಾರ್ಹ ತರ್ಕವಾಗುತ್ತದೆ. ಆದರೂ ಇದು ಎಲ್ಲರಿಗೂ ಅನ್ವಯವಾಗುವ ನಿಯಮವಾಗಬಾರದು. ಸಾಲಗಾರನ ಬಗೆಗಿನ ವಿಶ್ವಾಸಾರ್ಹತೆ ಮತ್ತು ಪಾವತಿ ಮಾಡುವ ಸಂದರ್ಭಗಳನ್ನು ಗಣನೆಗೆ ತಗೆದುಕೊಳ್ಳಬೇಕು” ಎಂದು ಪೀಠ ವಿವರಿಸಿದೆ. ಈ ಹಿನ್ನೆಲೆಯಲ್ಲಿ ಜೈನ್‌ ಇನ್ಫ್ರಾ ಪ್ರೈ ಲಿಮಿಟೆಡ್‌ನ ನಿರ್ದೇಶಕ ಮನೋಜ್‌ ಜೈನ್‌ ಅವರಿಗೆ ನೀಡಲಾಗಿದ್ದ ಲುಕೌಟ್‌ ನೋಟಿಸನ್ನು ನ್ಯಾಯಾಲಯ ರದ್ದುಪಡಿಸಿದೆ.