ಸುದ್ದಿಗಳು

ಲೋಹರ್ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರುವುದಿಲ್ಲ: ಬಿಹಾರ ಸರ್ಕಾರದ ಅಧಿಸೂಚನೆ ರದ್ದುಗೊಳಿಸಿದ ಸುಪ್ರೀಂ

ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಲೋಹರ್ ಜಾತಿ ಸೇರಿಲ್ಲ ಎಂದ ನ್ಯಾಯಾಲಯ. ಲೋಹರ್ ಸಮುದಾಯಕ್ಕೆ ಎಸ್ಟಿ ಪ್ರಮಾಣಪತ್ರ ನೀಡಬೇಕು ಎಂಬ ಬಿಹಾರ ಸರ್ಕಾರದ ಅಧಿಸೂಚನೆ ರದ್ದು.

Bar & Bench

ಕೇಂದ್ರ ಸರ್ಕಾರ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಲೋಹರ್‌ ಸಮುದಾಯ ಸೇರಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದ್ದು ಈ ಸಮುದಾಯಕ್ಕೆ ಎಸ್‌ಟಿ ಪ್ರಮಾಣಪತ್ರ ನೀಡಬೇಕು ಎಂದು ಬಿಹಾರ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಲಾಗುವುದು ಎಂದಿತು [ಸುನಿಲ್‌ ಕುಮಾರ್‌ ರಾಯ್‌ ಮತ್ತಿತರರು ಹಾಗೂ ಬಿಹಾರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಪರಿಶಿಷ್ಟ ಪಂಗಡಗಳ ವರ್ಗಕ್ಕೆ ಅನರ್ಹ ವ್ಯಕ್ತಿಗಳನ್ನು ಸೇರಿಸುವುದರಿಂದ ಈ ವರ್ಗದ ಅರ್ಹ ಸದಸ್ಯರ ಸರ್ಕಾರಿ ಉದ್ಯೋಗ ಸೇರಿದಂತೆ ವಿವಿಧ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ ವಿವರಿಸಿದೆ.

“ಲೋಹರ್‌ ಸಮುದಾಯವನ್ನು ಮೊದಲಿನಿಂದಲೂ ಪರಿಶಿಷ್ಟ ಪಂಗಡ ವರ್ಗದಲ್ಲಿ ಸೇರಿಸಿಲ್ಲ. ವಾಸ್ತವವಾಗಿ ಅವರು ಇತರೆ ಹಿಂದುಳಿದ ವರ್ಗದ ಸದಸ್ಯರ ಪಟ್ಟಿಗೆ ಸೇರಿದವರು ಎಂಬದು ಹಗಲಿನಷ್ಟೇ ಸುಸ್ಪಷ್ಟ.” ಎಂದು ನ್ಯಾಯಾಲಯ ಹೇಳಿದೆ.

1950ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಮೀಸಲಾತಿಗೆ ಅರ್ಹವಾದ ಸಮುದಾಯಗಳ ಪಟ್ಟಿಯಲ್ಲಿ ʼಲೋಹರ್‌ʼ ಜಾತಿ ಸೇರಿರಲಿಲ್ಲ./ ಬದಲಿಗೆ ಸರಣಿ ಸಂಖ್ಯೆ 20ರಲ್ಲಿನ ಪಟ್ಟಿ ʼಲೋಹರಾʼ ಎಂಬ ಬುಡಕಟ್ಟು ಬಿಹಾರ ರಾಜ್ಯದ ಪರಿಶಿಷ್ಟ ಪಂಗಡ ಎಂದು ಉಲ್ಲೇಖಿಸಿತ್ತು.

1976ರಲ್ಲಿ, ಸಂಸತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆದೇಶ (ತಿದ್ದುಪಡಿ) ಕಾಯಿದೆಯನ್ನು ತಂದಿತು, ಅದರ ಇಂಗ್ಲಿಷ್ ಆವೃತ್ತಿಯಲ್ಲಿ ಲೋಹರ್‌ಗೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಇರಲಿಲ್ಲ, ಆದರೆ ಹಿಂದಿ ಆವೃತ್ತಿಯಲ್ಲಿ "ಲೋಹರಾ" ಮತ್ತು "ಲೋಹ್ರಾ" ಪದಗಳನ್ನು "ಲೋಹರ್" ಮತ್ತು "ಲೋಹ್ರಾ" ಎಂದು ಅನುವಾದಿಸಲಾಗಿತ್ತು.

ಈ ತಿದ್ದುಪಡಿ ಕಾಯಿದೆಯ ನಂತರ ಲೋಹರ್ ಸಮುದಾಯದವರು ತಾವು ಪರಿಶಿಷ್ಟ ಪಂಗಡ ಎಂದು ಹೇಳಿಕೊಳ್ಳಲಾರಂಭಿಸಿದರು. 2006ರಲ್ಲಿ, ಸಂಸತ್ತು ತಿದ್ದುಪಡಿ ಕಾಯಿದೆಯ ಮೂಲಕ ಹಿಂದಿ ಭಾಷಾಂತರವನ್ನು 'ಲೋಹರ್, ಲೋಹ್ರಾ' ನಿಂದ 'ಲೋಹರಾ, ಲೋಹ್ರಾ' ಗೆ ಬದಲಿಸಿತು. 2016 ರಲ್ಲಿ, ಸಂಸತ್ತು ಇದನ್ನು ರದ್ದುಗೊಳಿಸುವ ಕಾಯಿದೆ ಜಾರಿಗೆ ತಂದು ಯಥಾಸ್ಥಿತಿ ಕಾಪಾಡಿತು.

ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದೂರುದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ ಕಾಯಿದೆ) ಅಡಿ ದೂರು ದಾಖಲಿಸಿದ್ದರಿಂದ ಅದರ ಕಟ್ಟುನಿಟ್ಟಿನ ನಿಬಂಧನೆಗಳಿಂದಾಗಿ ಜಾಮೀನು ದೊರೆತಿರಲಿಲ್ಲ. ಅದರೆ, ದೂರುದಾರರು ಲೋಹರಾ ಸಮುದಾಯದಡಿ (ಎಸ್‌ಟಿ) ಬರುವವರಲ್ಲ, ಬದಲಿಗೆ ಲೋಹರ್‌ ( ಇತರ ಹಿಂದುಳಿದ ವರ್ಗ) ಸಮುದಾಯಕ್ಕೆ ಸೇರಿದವರು. ಹೀಗಾಗಿ, ತಮಗೆ ಜಾಮೀನು ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ ಈ ಹಿಂದಿನ ತೀರ್ಪುಗಳಲ್ಲಿ ಲೋಹ್ರಾ ಮತ್ತು ಲೋಹರ್‌ ಸಮುದಾಯದ ನಡುವಣ ವ್ಯತ್ಯಾಸವನ್ನು ಸ್ಪಷ್ಟಪಡಿಸಿದ್ದರೂ ಬಿಹಾರ ಸರ್ಕಾರ ಅಧಿಸೂಚನೆ ಹೊರಡಿಸಿರುವುದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಲೋಹರ್‌ಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ರದ್ದುಗೊಳಿಸಿದ ಪೀಠವು ಲೋಹರಾಗಳು ಅಧಿಸೂಚನೆಯ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲಿದ್ದಾರೆ ಎಂದು ಸ್ಪಷ್ಟಪಡಿಸಿತು. ಅಲ್ಲದೆ ಅರ್ಜಿದಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆಯೂ ಅದು ಸೂಚಿಸಿದೆ.