ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದಿಂದಾಗಿ ಊರು ತೊರೆದಿರುವ ಸುಮಾರು 18,000 ಜನರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಲು ಅವಕಾಶ ಮಾಡಿಕೊಡುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಅರ್ಜಿಯನ್ನುಏ.19ರಂದು ನಡೆಯಲಿರುವ ಮತದಾನಕ್ಕೂ ಕೇವಲ ಮೂರು ದಿನ ಮೊದಲು ಸಲ್ಲಿಸಲಾಗಿದ್ದು ವಲಸೆ ಹೋದ ವ್ಯಕ್ತಿಗಳಿಗೆ ಮತದಾನಕ್ಕೆ ವ್ಯವಸ್ಥೆ ಮಾಡಿಕೊಡುವುದು ಚುನಾವಣಾ ಆಯೋಗಕ್ಕೆ ಕಷ್ಟಕರವಾಗುತ್ತದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಹೇಳಿದೆ.
ತಡವಾಗಿರುವ ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿದರೆ ಮಣಿಪುರದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಗಳ ನಿರ್ವಹಣೆ ಮಾಡಲು ಸಾಕಷ್ಟು ಅಡೆ ತಡೆ ಉಂಟಾಗುವುದರಿಂದ ಪ್ರಕರಣದಲ್ಲಿ ಮಧ್ಯಪ್ರವೇಶಿಸುತ್ತಿಲ್ಲ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಿದೆ.
ಅರ್ಜಿದಾರರ ಕೋರಿಕೆ ಸದುದ್ದೇಶದಿಂದ ಕೂಡಿದ್ದರೂ ಮಣಿಪುರದಲ್ಲಿ ಏಪ್ರಿಲ್ 19ರಂದು ಚುನಾವಣೆ ನಡೆಯಲಿರುವುದರಿಂದ ಇಸಿಐಗೆ ಈ ವ್ಯವಸ್ಥೆ ಮಾಡಲು ಮೂರು ದಿನ ಸಾಕಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
“ಮಣಿಪುರದ ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮೊದಲ ಸುತ್ತಿನ ಮತದಾನಕ್ಕೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯ ಅರ್ಜಿಯನ್ನು ಪುರಸ್ಕರಿಸಿದರೆ ಇಸಿಐ 3 ದಿನಗಳಲ್ಲಿ ಆಡಳಿತಾತ್ಮಕ ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ಸರಿಯಲ್ಲ. 17,000 ಮಂದಿ ಮನೆಮಠ ತೊರೆದಿದ್ದಾರೆ ಎಂದು ಹೇಳಲಾಗುತ್ತಿದ್ದು ಕೊಹಿಮಾ, ಹೈದರಾಬಾದ್, ಬೆಂಗಳೂರು ಹಾಗೂ ಮುಂಬೈನಲ್ಲಿ ಇವರು ನೆಲೆಸಿದ್ದಾರೆ ಎನ್ನಲಾಗಿದೆ. ಕೇವಲ ಈ ಪ್ರದೇಶಗಳಿಗಷ್ಟೇ ಪರಿಹಾರವನ್ನು ಸೀಮಿತಗೊಳಿಸಲಾಗದು. ಚುನಾವಣೆಗೆ 3 ದಿನಗಳು ಉಳಿದಿರುವುದರಿಂದ ಅರ್ಜಿದಾರರ ಪ್ರತಿಪಾದನೆ ಅಪ್ರಾಯೋಗಿಕವಾಗಿದೆ. ಅರ್ಜಿದಾರರ ಉದ್ದೇಶ ಪ್ರಾಮಾಣಿಕವಾಗಿದ್ದರೂ ಸಂವಿಧಾನದ 324 ನೇ ವಿಧಿಯ ಅಡಿಯಲ್ಲಿ ಹಾಗೆ ಮಾಡಲು ಸಂವಿಧಾನಕ್ಕೆ ಬದ್ಧವಾಗಿರುವ ಇಸಿಐಗೆ ನೀತಿ ನಿಯಂತ್ರಣ ಇದೆ” ಎಂದು ನ್ಯಾಯಾಲಯ ನುಡಿದಿದೆ.
ಹಿಂಸಾಚಾರದಿಂದ ಆಂತರಿಕವಾಗಿ ಸ್ಥಳಾಂತರಗೊಂಡ ವ್ಯಕ್ತಿಗಳು ಚುನಾವಣೆಯಲ್ಲಿ ಮತ ಚಲಾಯಿಸುವಂತೆ ನೋಡಿಕೊಳ್ಳಲಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಭಾರತೀಯ ಚುನಾವಣಾ ಆಯೋಗ ಊರು ತೊರೆದ ಕುಕಿ ಸಮುದಾಯದವರ ಬಗ್ಗೆ ಕಣ್ಮುಚ್ಚಿ ಕುಳಿತಿದ್ದು ಸಮುದಾಯ ಮತದಾನದ ಹಕ್ಕಿನಿಂದ ವಂಚಿತವಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು ಹಿಂಸಾಚಾರ ಕುರಿತಂತೆ ತನಿಖೆ ನಡೆಸಲು ನ್ಯಾ. ಗೀತಾ ಮಿತ್ತಲ್ ನೇತೃತ್ವದಲ್ಲಿ ಮಹಿಳಾ ನ್ಯಾಯಾಂಗ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು.
ಹಿಂಸಾಚಾರದಲ್ಲಿ ಮೃತಪಟ್ಟ ಗುರುತು ಸಿಗದ ಮತ್ತು ವಾರಸುದಾರರಿಲ್ಲದ ದೇಹಗಳನ್ನು ಸೂಕ್ತ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುವಂತೆಯೂ ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿತ್ತು.