ECI 
ಸುದ್ದಿಗಳು

ಮುಖ್ಯ ಚುನಾವಣಾ ಆಯುಕ್ತರು, ಚುನಾವಣಾ ಆಯುಕ್ತರ ನೇಮಕಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ

ಈ ಮಸೂದೆಯನ್ನು ಡಿಸೆಂಬರ್ 12 ರಂದು ರಾಜ್ಯಸಭೆಯಲ್ಲಿ ಮತ್ತು ಇಂದು ಬೆಳಗ್ಗೆ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.

Bar & Bench

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ- 2023 ಅನ್ನು ಲೋಕಸಭೆ ಗುರುವಾರ ಅಂಗೀಕರಿಸಿದೆ.

ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಕಾನೂನು ನಿರ್ವಾತ ಇರುವುದನ್ನು ಗಮನಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಆಗಸ್ಟ್ 10ರಂದು ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ್ದರು.

ಭಾರತದ ಚುನಾವಣಾ ಆಯೋಗಕ್ಕೆ (ಇಸಿಐ) ನೇಮಕಾತಿಗಳ ಬಗ್ಗೆ ಕೇಂದ್ರ ಸರ್ಕಾರ ಕಾಯಿದೆ ತರುವವರೆಗೆ, ಅಂತಹ ನೇಮಕಾತಿಗಳನ್ನು ಪ್ರಧಾನಿ, ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಮಾಡಬೇಕು ಎಂದು ಮಾರ್ಚ್ 2, 2023ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ಹೇಳಲಾಗಿತ್ತು. 

ನಂತರ ಮೇಲ್ಮನೆ ಡಿಸೆಂಬರ್ 12 ರಂದು ಮಸೂದೆಯನ್ನು ಅಂಗೀಕರಿಸಿತು. ಇದನ್ನು ಇಂದು ಲೋಕಸಭೆ ಅಂಗೀಕರಿಸಿದೆ.

ವಿಶೇಷವೆಂದರೆ, ಡಿಸೆಂಬರ್ 11ರಂದು, ಸರ್ಕಾರ ಮಸೂದೆಗೆ ಕೆಲ ತಿದ್ದುಪಡಿಗಳಿಗೆ ಮುಂದಾಗಿತ್ತು.

ರಾಜ್ಯಸಭೆಯಲ್ಲಿ ಆಗಸ್ಟ್ 10ರಂದು ಆರಂಭದಲ್ಲಿ ಮಂಡನೆಯಾಗಿದ್ದ ಮಸೂದೆಯಲ್ಲಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಾತಿಯ ಆಯ್ಕೆ ಸಮಿತಿಯ ಪರಿಗಣನೆಗೆ ಐವರ ಹೆಸರನ್ನು ಶೋಧನಾ ಸಮಿತಿಯು ಸೂಚಿಸಲಿದೆ. ಸಂಪುಟ ಕಾರ್ಯದರ್ಶಿ ನೇತೃತ್ವದ ಶೋಧನಾ ಸಮಿತಿಯಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿ ಶ್ರೇಣಿಗಿಂತ ಕಡಿಮೆಯಿಲ್ಲದ ಉಳಿದಿಬ್ಬರು ಸದಸ್ಯರಿರಲಿದ್ದಾರೆ ಎಂದು ವಿವರಿಸಲಾಗಿತ್ತು. ಪ್ರಸ್ತಾವಿತ ತಿದ್ದುಪಡಿಯು 'ಸಂಪುಟ ಕಾರ್ಯದರ್ಶಿ' ಬದಲಿಗೆ 'ಕಾನೂನು ಮತ್ತು ನ್ಯಾಯ ಸಚಿವರು' ಎಂಬ ಪದ ಬಳಸಿದೆ.

ಇದಲ್ಲದೆ, ಸಿಇಸಿ ಮತ್ತು ಇಸಿಗಳ ಭತ್ಯೆ ಮತ್ತು ಸೇವಾ ಷರತ್ತುಗಳು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಮಾನವಾಗಿರುತ್ತವೆ ಎಂದು ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.

ಜೊತೆಗೆ ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವಾಗ ಸಿಇಸಿ ಅಥವಾ ಇಸಿ ಎನಿಸಿಕೊಂಡವರು ಎಸಗಿದ ಕೃತ್ಯ , ಆಡಿದ ಮಾತು ಅಥವಾ ಬಳಸಿದ ಪದಗಳಿಗೆ ಸಂಬಂಧಿಸಿದಂತೆ ಸಿವಿಲ್ ಅಥವಾ ಕ್ರಿಮಿನಲ್ ವಿಚಾರಣೆ ನಡೆಸುವಂತಿಲ್ಲ ಎಂದು ತಿದ್ದುಪಡಿ ಹೇಳಿದೆ.

ಈ ಮಧ್ಯೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಮಸೂದೆ ಭಾರತದ ಚುನಾವಣಾ ಆಯೋಗದ (ಇಸಿಐ) ಸ್ವಾತಂತ್ರ್ಯವನ್ನು ಗಂಭೀರ ಅಪಾಯಕ್ಕೆ ದೂಡಬಹುದು ಎಂದು  ಆತಂಕ ವ್ಯಕ್ತಪಡಿಸಿದ್ದಾರೆ.

ಮಸೂದೆಯು ಕಾಯಿದೆಯಾದರೆ, ಸಿಇಸಿ ಮತ್ತು ಇಸಿಗಳನ್ನು ನೇಮಕ ಮಾಡುವಲ್ಲಿ ಕಾರ್ಯಾಂಗ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದು, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಇತ್ತೀಚೆಗೆ ತಿಳಿಸಿದ್ದರು.

ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರನ್ನು ಈ ರೀತಿ ನೇಮಿಸಲು ಹೊರಟರೆ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಮರೀಚಿಕೆಯಾಗಲಿವೆ ಎಂದಿದ್ದರು.

ಜೊತೆಗೆ ಕಾಯಿದೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದರೆ ಆಗ ನ್ಯಾಯಾಲಯ ಅದನ್ನು ರದ್ದುಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

[ರಾಜ್ಯಸಭೆ ಅಂಗೀಕರಿಸಿದ ಮಸೂದೆಯ ಪ್ರತಿಯನ್ನು ಇಲ್ಲಿ ಓದಿ]

Chief Election Commissioner and Other Election Commissioners (Appointment, Conditions of Service and Term of Office) Bill, 2023.pdf
Preview