ಮೊಬೈಲ್ ಟವರ್ ನೊಂದಿಗೆ ಮೊಬೈಲ್ ಫೋನ್
ಮೊಬೈಲ್ ಟವರ್ ನೊಂದಿಗೆ ಮೊಬೈಲ್ ಫೋನ್ 
ಸುದ್ದಿಗಳು

ಲೋಕಸಭೆಯಲ್ಲಿ ಅಂಗೀಕಾರಗೊಂಡ ದೂರಸಂಪರ್ಕ ಮಸೂದೆ-2023ರ ಪ್ರಮುಖ ಸಂಗತಿಗಳು

Bar & Bench

ಭಾರತೀಯ ಟೆಲಿಗ್ರಾಫ್ ಕಾಯಿದೆ- 1885, 1933ರ ಭಾರತೀಯ ವಯರ್‌ಲೆಸ್‌ ಟೆಲಿಗ್ರಾಫಿ ಕಾಯಿದೆ ಹಾಗೂ 1950ರ ಟೆಲಿಗ್ರಾಫ್ ವಯರ್‌ (ಕಾನೂನುಬಾಹಿರ ಸ್ವಾಧೀನ) ಕಾಯಿದೆಗಳಿಗೆ ಬದಲಿಯಾಗಿ ದೂರಸಂಪರ್ಕ ಮಸೂದೆ- 2023 ಮಸೂದೆಯನ್ನು ಲೋಕಸಭೆ ಬುಧವಾರ ಅಂಗೀಕರಿಸಿದೆ.

ದೂರಸಂಪರ್ಕ ಸೇವೆಗಳು ಮತ್ತು ದೂರಸಂಪರ್ಕ ಜಾಲಗಳ ಅಭಿವೃದ್ಧಿ, ವಿಸ್ತರಣೆ ಮತ್ತು ಕಾರ್ಯಾಚರಣೆ, ತರಂಗಾಂತರ ನಿಯೋಜನೆ ಮತ್ತು ಸಂಬಂಧಿತ ವಿಷಯಗಳಿಗೆ ಸಂಬಂಧಿಸಿದ ಕಾನೂನನ್ನು ತಿದ್ದುಪಡಿ ಮಾಡುವ ಮತ್ತು ಕ್ರೋಢೀಕರಿಸುವ ಗುರಿ ಈ ಮಸೂದೆಯದ್ದಾಗಿದೆ.

ಮಸೂದೆಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಡಿಸೆಂಬರ್ 18ರಂದು ಮಂಡಿಸಿದ್ದು ಲೋಕಸಭೆಯಿಂದ ಅಮಾನತುಗೊಂಡ 97 ಸಂಸದರ ಅನುಪಸ್ಥಿತಿಯಲ್ಲಿ ಇದಕ್ಕೆ ಅಂಗೀಕಾರ ದೊರೆತಿದೆ.

ಟೆಲಿಕಾಂ ಜಾಲಗಳಿಗೆ ಅಸ್ತಿತ್ವದಲ್ಲಿರುವ ಪರವಾನಗಿ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿ ಈ ಮಸೂದೆಯದ್ದಾಗಿದ್ದು ಪ್ರಸ್ತುತ ವ್ಯವಸ್ಥೆಯನ್ನು ಅದು ಅಧಿಕಾರದ ಚೌಕಟ್ಟಿಗೆ ತರುತ್ತದೆ. ಟೆಲಿಕಾಂ ಇಲಾಖೆ 100 ಕ್ಕೂ ಹೆಚ್ಚು ರೀತಿಯ ಪರವಾನಗಿ, ನೋಂದಣಿ ಹಾಗೂ ಅನುಮತಿ ನೀಡುತ್ತಿದ್ದು ಅದರ ಬದಲಿಗೆ ಏಕ ಅಧಿಕಾರ ಕಾರ್ಯವಿಧಾನ ಬಳಸಿ ಕ್ರೋಢೀಕರಿಸುವ ಮೂಲಕ ಪ್ರಕ್ರಿಯೆ ಸುಗಮನಗೊಳಿಸುವ ಗುರಿ ಮಸೂದೆಗೆ ಇದೆ.

ಬಳಕೆಯಾಗದೆ ಉಳಿದಿರುವ ತರಂಗಾಂತರವನ್ನು ಮರಳಿ ಪಡೆಯಲು ಮಸೂದೆ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ತರಂಗಾಂತರಗಳ ಹಂಚಿಕೆ, ವ್ಯಾಪಾರ ಮತ್ತು ಗುತ್ತಿಗೆ ನೀಡುವುದಕ್ಕಾಗಿ ನಿಯಮಾವಳಿಗಳನ್ನು ಸಹ ಮಸೂದೆ ಮೂಲಕ ಜಾರಿಗೆ ತರಲಾಗುತ್ತಿದೆ. ಘಟಕಗಳು ಬಳಸದೆ ಇರುವ ತರಂಗಾಂತರವನ್ನು ಸರ್ಕಾರಕ್ಕೆ ಒಪ್ಪಿಸುವ ಆಯ್ಕೆ ಹೊಂದಿದ್ದರೂ ಅವು ಅದಕ್ಕಾಗಿ ಸರ್ಕಾರದಿಂದ ಪರಿಹಾರ ಪಡೆಯುವಂತಿಲ್ಲ.

ವಂಚನೆ ತಡೆಗಾಗಿ ಘಟಕಗಳು ಫೋನ್‌ ಸಿಮ್‌ ಬಳಕೆದಾರರ ಬಯೋಮೆಟ್ರಿಕ್‌ ದೃಢೀಕರಣ ಕಡ್ಡಾಯವಾಗಿ ನಡೆಸಬೇಕು. ಆದರೆ ಈ ನಿರ್ದಿಷ್ಟ ಕ್ರಮ ಬಳಕೆದಾರರ ಗೌಪ್ಯತೆ ಬಗ್ಗೆ ಕಳವಳ ಹುಟ್ಟುಹಾಕಿದೆ.

ಇದಲ್ಲದೆ, ದೂರಸಂಪರ್ಕ ತಡೆ ಅಥವಾ ಕಣ್ಗಾವಲಿಗೆ ಸಂಬಂಧಿಸಿದ ಟೆಲಿಗ್ರಾಫ್ ಕಾಯಿದೆಯ ನಿಬಂಧನೆಗಳನ್ನು ಮಸೂದೆ ಉಳಿಸಿಕೊಳ್ಳುತ್ತದೆ. ಸಾರ್ವಜನಿಕ ತುರ್ತು ಅಥವಾ ಸುರಕ್ಷತೆಗೆ ಧಕ್ಕೆ ಎದುರಾದ ಸಂದರ್ಭದಲ್ಲಿ ಟೆಲಿಕಾಂ ಜಾಲವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ಇದು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ.

[ಲೋಕಸಭೆಯಲ್ಲಿ ಮಂಡಿಸಲಾದ ಮಸೂದೆಯ ಪ್ರತಿ ಇಲ್ಲಿ ಲಭ್ಯ]

The Telecommunications Bill.pdf
Preview