PM Narendra Modi and Delhi High Court PM Narendra Modi (FB)
ಸುದ್ದಿಗಳು

ನರೇಂದ್ರ ಮೋದಿಗೆ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಬಂಧ: ದೆಹಲಿ ಹೈಕೋರ್ಟ್‌ ವಿಚಾರಣೆ ಮುಂದೂಡಿದ್ದೇಕೆ?

ಹಿಂದೂ, ಸಿಖ್‌ ದೈವಗಳ ಮತ್ತು ಹಿಂದೂ, ಸಿಖ್‌ ದೇವಸ್ಥಾನದ ಹೆಸರಿನಲ್ಲಿ ಪ್ರಧಾನಿ ಮೋದಿ ಅವರು ಬಿಜೆಪಿಗೆ ಮತ ನೀಡುವಂತೆ ಕೋರಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

Bar & Bench

ಲೋಕಸಭಾ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಧರ್ಮದ ಆಧಾರದಲ್ಲಿ ಮತ ಕೋರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನಿರ್ಬಂಧ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ದೆಹಲಿ ಹೈಕೋರ್ಟ್‌ ಮುಂದೂಡಿದೆ.

ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಅಡಿ ಸ್ಥಾಪಿಸಲಾಗಿರುವ ನ್ಯಾಯಾಧಿಕರಣವನ್ನು ನ್ಯಾಯಮೂರ್ತಿ ಸಚಿನ್‌ ದತ್ತಾ ಮುನ್ನಡೆಸುತ್ತಿರುವುದರಿಂದ ಅರ್ಜಿ ಮುಂದೂಡಿದ್ದಾರೆ.

ನ್ಯಾಯಮೂರ್ತಿ ದತ್ತಾ ಅವರು ಇಂದು ವಿಚಾರಣೆ ನಡೆಸುತ್ತಿಲ್ಲ. ಏಪ್ರಿಲ್‌ 29ರಂದು ಅರ್ಜಿ ವಿಚಾರಣೆ ನಡೆಸಲಿದ್ದಾರೆ ಎಂದು ನ್ಯಾಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವಕೀಲ ಆನಂದ್‌ ಎಸ್.‌ ಜೋಂಧಲೆ ಅವರು ಏಪ್ರಿಲ್‌ 9ರಂದು ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ಮೋದಿ ಮಾಡಿರುವ ಭಾಷಣವನ್ನು ಉಲ್ಲೇಖಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. “ಮೋದಿಯವರು ಹಿಂದೂ ಮತ್ತು ಸಿಖ್‌ ದೈವಗಳ ಹೆಸರಿನಲ್ಲಿ ಮತ್ತು ದೇವಸ್ಥಾನದ ಹೆಸರಿನಲ್ಲಿ ಮತ ಕೇಳಿರುವುದಷ್ಟೇ ಅಲ್ಲದೆ, ವಿಪಕ್ಷಗಳು ಮುಸ್ಲಿಮರ ಪರ ಇರುವುದಾಗಿ ಹೇಳಿಕೆ ನೀಡಿದ್ದಾರೆ” ಎಂದು ಆಕ್ಷೇಪಿಸಲಾಗಿದೆ.

ಹಿಂದೂ, ಸಿಖ್‌ ದೈವಗಳು ಮತ್ತು ಹಿಂದೂ, ಸಿಖ್‌ ದೇವಸ್ಥಾನದ ಹೆಸರಿನಲ್ಲಿ ಪ್ರಧಾನಿ ಮೋದಿ ಅವರು ಬಿಜೆಪಿಗೆ ಮತ ನೀಡುವಂತೆ ಕೋರಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಪ್ರಧಾನಿ ಮೋದಿ ವಿರುದ್ಧ ಐಪಿಸಿ ಸೆಕ್ಷನ್‌ 153ಎ ಅಡಿ ವಿವಿಧ ಸಮುದಾಯಗಳ ನಡುವೆ ದ್ವೇಷ ಹರಡಿದ್ದಕ್ಕಾಗಿ ಎಫ್‌ಐಆರ್‌ ದಾಖಲಿಸಿ, ಅವರು ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧ ಹೇರುವಂತೆ ಚುನಾವಣಾ ಆಯೋಗಕ್ಕೆ ಕೋರಿದ್ದರೂ ಅದು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಲಾಗಿದೆ.