EVMs, VVPATs and Delhi High Court 
ಸುದ್ದಿಗಳು

ಲೋಕಸಭಾ ಚುನಾವಣೆ: ಹೊಸದಾಗಿ ಮೊದಲ ಹಂತದ ಇವಿಎಂ, ವಿವಿಪ್ಯಾಟ್‌ ಪರಿಶೀಲನೆ ಕೋರಿದ್ದ ಕಾಂಗ್ರೆಸ್‌ ನಾಯಕನ ಅರ್ಜಿ ವಜಾ

ಭಾರತೀಯ ಚುನಾವಣಾ ಆಯೋಗವು ಎಫ್‌ಎಲ್‌ಸಿ ಪ್ರಕ್ರಿಯೆ ಆರಂಭಿಸುವುದಕ್ಕೂ ಮುನ್ನ ತಮಗೆ ಸಾಕಷ್ಟು ನೋಟಿಸ್‌ ಅಥವಾ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕ ಅನಿಲ್‌ ಕುಮಾರ್‌ ನ್ಯಾಯಾಲಯದ ಕದತಟ್ಟಿದ್ದರು.

Bar & Bench

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ದೆಹಲಿಯ 11 ಜಿಲ್ಲೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳ ಮೊದಲ ಹಂತದ ಪರಿಶೀಲನೆಯನ್ನು ಹೊಸದಾಗಿ ಮತ್ತೆ ನಡೆಸಲು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶಿಸುವಂತೆ ಕೋರಿ ದೆಹಲಿ ಪ್ರದೇಶ ಕಾಂಗ್ರೆಸ್‌ ಸಮಿತಿ (ಡಿಪಿಸಿಸಿ) ಅಧ್ಯಕ್ಷ ಅನಿಲ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಈಚೆಗೆ ವಜಾ ಮಾಡಿದೆ.

ಎಫ್‌ಎಲ್‌ಸಿ ಆರಂಭಿಸುವುದಕ್ಕೂ ಮುನ್ನ ಇಸಿಐ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಕಾಲಾವಕಾಶ ಮತ್ತು ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ಸಂಜೀವ್‌ ನರುಲಾ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ಇಸಿಐ ಅತ್ಯಂತ ನಿಖರ ಕಾಲಾನುಕ್ರಮದಲ್ಲಿ ಕೆಲಸ ಮಾಡುತ್ತದೆ. ಎಫ್‌ಎಲ್‌ಸಿ ಪ್ರಕ್ರಿಯೆ ಹೊಸದಾಗಿ ಆರಂಭಿಸುವುದರಿಂದ ಭಾರಿ ಹಿನ್ನಡೆಯಾಗುತ್ತದೆ ಎಂದು ನ್ಯಾಯಾಲಯವು ಹೇಳಿದೆ. ಅಲ್ಲದೆ, ಪರಿಶೀಲನೆಗೂ ಮುನ್ನ ಇವಿಎಂಗಳ ಕ್ರಮಸಂಖ್ಯೆಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಬೇಕು ಎಂಬ ವಾದವನ್ನು ಪೀಠ ತಿರಸ್ಕರಿಸಿದೆ.

“ಚುನಾವಣಾ ಪ್ರಕ್ರಿಯೆ ಮಹತ್ವವಾಗಿರುವುದರಿಂದ ಅರ್ಜಿದಾರರ ದೃಷ್ಟಿಯು ಸಕ್ರಿಯ ಪಾಲ್ಗೊಳ್ಳುವಿಕೆಯ ಮೇಲೆ ಇರಬೇಕೆ ವಿನಾ ಬದಲಿಗೆ ಕಾರ್ಯವಿಧಾನದ ಆತಂಕಗಳಿಂದ ದೂರವಿರುವುದಲ್ಲ. ಎಫ್‌ಎಲ್‌ಸಿಯಂತಹ ಮಹತ್ವದ ಕಾರ್ಯವಿಧಾನವು ರಾಜಕೀಯ ಪಕ್ಷಗಳ ಪ್ರಾತಿನಿಧ್ಯ ಮತ್ತು ವೀಕ್ಷಣೆಗೆ ಅವಕಾಶ ನೀಡಿದಾಗ, ಸಕ್ರಿಯವಾಗಿ ಭಾಗವಹಿಸುವುದು ಮತ್ತು ಪ್ರಕ್ರಿಯೆಯ ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳುವುದು ಈ ಪ್ರತಿನಿಧಿಗಳ ಕರ್ತವ್ಯವಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಈ ನೆಲೆಯಲ್ಲಿ ಅರ್ಜಿಗೆ ವಸ್ತುನಿಷ್ಠ ಆಧಾರವಿಲ್ಲ ಎಂದಿರುವ ನ್ಯಾಯಾಲಯವು ಅರ್ಜಿಯನ್ನು ವಜಾ ಮಾಡಿದೆ.