ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎನ್ನಲಾದ ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿಯು ಅಪೂರ್ಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕರ್ನಾಟಕ ಹೈಕೋರ್ಟ್ ಮುಂದೆ ಶುಕ್ರವಾರ ಪ್ರತಿಪಾದಿಸಿದ್ದಾರೆ.
ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ್ದ ಬಿ ವರದಿ ಅಂಗೀಕರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದು ಕೋರಿ ಪ್ರಕರಣದ ಖಾಸಗಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲೆ ಲಕ್ಷ್ಮೀ ಅಯ್ಯಂಗಾರ್ ಅವರು “ಬಿ ವರದಿಯು ಅಂದಾಜು 10 ಸಾವಿರ ಪುಟಗಳನ್ನು ಹೊಂದಿದ್ದು, ವರದಿ ಅಂಗೀಕರಿಸುವ ಹಂತದಲ್ಲಿಯೇ ವಿಚಾರಣಾಧೀನ ನ್ಯಾಯಾಲಯವು ಕಿರು-ವಿಚಾರಣೆ (ಮಿನಿ ಟ್ರಯಲ್) ನಡೆಸಿದಂತೆ ತೋರುತ್ತಿದೆ” ಎಂದರು.
“ಹತ್ತು ಸಾವಿರ ಪುಟಗಳಷ್ಟು ದೊಡ್ಡದಾಗಿರುವ ಬಿ ರಿಪೋರ್ಟ್ ಪ್ರಾಯೋಗಿಕವಾಗಿ ಅಪೂರ್ಣವಾಗಿದೆ. ಅದನ್ನು ಅಂಗೀಕರಿಸಲು ಸೂಕ್ತವಾದ ಯಾವುದೇ ಗಣನೀಯ ಅಂಶಗಳು ಅದರಲ್ಲಿಲ್ಲ. ಪ್ರಾಯೋಗಿಕವಾಗಿ ಇದೊಂದು ಮಿನಿ ಟ್ರಯಲ್ ಆಗಿದ್ದು, ಈ ಹಂತದಲ್ಲಿ ಬಿ ರಿಪೋರ್ಟ್ ಅಂಗೀಕರಿಸುವಷ್ಟರ ಮಟ್ಟಿಗೆ ವರದಿಯ ಅಂಶಗಳು ಪೂರಕವಾಗಿಲ್ಲ ಎಂದು ಆಕ್ಷೇಪಿಸಿದರಲ್ಲದೆ, ಪ್ರಕರಣದ ದಾಖಲೆಗಳು ಬೃಹತ್ ಪ್ರಮಾಣದಲ್ಲಿರುವ ಕಾರಣ, ಆ ಸಂಪೂರ್ಣ ದಾಖಲೆಗಳನ್ನು ಪೆನ್‌ಡ್ರೈವ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ” ಕೋರಿದರು.
ಅಂತಿಮವಾಗಿ ಪೀಠವು ಬೃಹತ್ ಪ್ರಮಾಣದ ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಲ್ಲಿಸಲು ಅರ್ಜಿದಾರರಿಗೆ ಅನುಮತಿ ನೀಡಿತಲ್ಲದೆ, ಸಂಬಂಧಪಟ್ಟ ವಿಚಾರಣಾಧೀನ ನ್ಯಾಯಾಲಯದಿಂದ ದೂರವಾಣಿ ಸೂಚನೆ ಮೂಲಕ ದಾಖಲೆಗಳನ್ನು ತರಿಸಿಕೊಳ್ಳುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿ, ವಿಚಾರಣೆಯನ್ನು ಆಗಸ್ಟ್ 24ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ: ಮುಡಾ ಅಕ್ರಮ ನಿವೇಶನ ಹಂಚಿಕೆ ಆರೋಪ ಪ್ರಕರಣದ ತನಿಖೆ ನಡೆಸಿ ಮೈಸೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ 2025ರ ಫೆಬ್ರವರಿ 12ರಂದು ಸಲ್ಲಿಸಿದ್ದ ಬಿ ವರದಿಯನ್ನು ಅಂಗೀಕರಿಸಿ ವಿಶೇಷ ನ್ಯಾಯಾಲಯ 2026ರ ಜನವರಿ 28ರಂದು ಆದೇಶ ಹೊರಡಿಸಿದೆ. ಆದ್ದರಿಂದ, ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ವರದಿಯನ್ನು ಪಡೆದು ಪರಿಶೀಲಿಸಬೇಕು. ವರದಿ ಅಂಗೀಕರಿಸಿದ ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು. ಜತೆಗೆ, ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಹಾಗೂ ತನಿಖೆ ನಡೆಸಿ ಹೊಸದಾಗಿ ವರದಿ ಸಲ್ಲಿಸಲು ಸ್ವತಂತ್ರ ತನಿಖಾ ಸಂಸ್ಥೆಗೆ ನಿರ್ದೇಶಿಸಬೇಕು ಎಂದು ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ.